ಬೆಂಗಳೂರು:
ಸಿಎಂ ಸ್ಥಾನದ ಬದಲಾವಣೆ ಹಾಗೂ ಹೆಚ್ಚುವರಿ ಡಿಸಿಎಂ ಸ್ಥಾನದ ಸೃಷ್ಟಿಯ ಬಗ್ಗೆ ಕಾಂಗ್ರೆಸ್‌ನಲ್ಲಿ ನಡೆಯುತ್ತಿದ್ದ ಕಚ್ಚಾಟ ತಣ್ಣಗಾಗಿದ್ದರೂ ಇತ್ತೀಚೆಗೆ ಕಾಂಗ್ರೆಸ್ ಹಿರಿಯ ನಾಯಕಿ ಸೋನಿಯಾ ಗಾಂಧಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೀಡಿರುವ ಸಲಹೆಯೊಂದು ಅಚ್ಚರಿಯನ್ನುಂಟು ಮಾಡಿದೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಭಾನುವಾರ ತಮ್ಮ 82ನೇ ಹುಟ್ಟುಹಬ್ಬದ ಸಂಭ್ರಮವನ್ನು ಆಚರಿಸಿಕೊಂಡಿದ್ದು, ಈ ವೇಳೆ ಸದಾಶಿವನಗರದಲ್ಲಿರುವ ಖರ್ಗೆಯವರ ನಿವಾಸದೆದುರು ನೆರೆದಿದ್ದ ಅವರ ಬೆಂಬಲಿಗರು, ಖರ್ಗೆ ಮುಂದಿನ ಮುಖ್ಯಮಂತ್ರಿಯಾಗಬೇಕೆಂದು ಘೋಷಣೆಗಳನ್ನು ಕೂಗಿದರು.
ಇದರ ನಡುವಲ್ಲೇ ಪರಿಸ್ಥಿತಿಗಳು ಎದುರಾದರೆ, ಮುಖ್ಯಮಂತ್ರಿ ಸ್ಥಾನಕ್ಕೆ ಖರ್ಗೆಯವರ ಹೆಸರು ಪ್ರಸ್ತಾಪಿಸುವಂತೆ ಕಾಂಗ್ರೆಸ್ ಹಿರಿಯ ನಾಯಕಿ ಸೋನಿಯಾ ಗಾಂಧಿಯವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲಹೆ ನೀಡಿದ್ದಾರೆಂಬ ಗುಸುಗುಸುಗಳೂ ಕೂಡ ಕೈ ಪಾಳಯದಲ್ಲಿ ಕೇಳಿ ಬಂದಿದೆ.
ಮುಖ್ಯಮಂತ್ರಿ ಹುದ್ದೆ ಕುರಿತು ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪಾಳಯದಲ್ಲಿ ಜಟಾಪಟಿ ಮುಂದುವರೆದಿದ್ದು, ಭಿನ್ನಾಭಿಪ್ರಾಯಗಳಿರುವ ಹಿನ್ನೆಲೆಯಲ್ಲಿ ಸೋನಿಯಾ ಗಾಂಧಿಯವರು ಈ ಸಲಹೆ ನೀಡಿದ್ದಾರೆಂದು ಮೂಲಗಳು ತಿಳಿಸಿವೆ. ಇತ್ತೀಚೆಗೆ ಸಿದ್ದರಾಮಯ್ಯ ಅವರು ನವದೆಹಲಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಸೋನಿಯಾ ಅವರು ಈ ಸಲಹೆ ನೀಡಿದ್ದಾರೆನ್ನಲಾಗಿದ್ದು, ಬೆಂಬಲಿಗರು ವಿವಾದ ಹುಟ್ಟು ಹಾಕುವುದನ್ನು ನಿಯಂತ್ರಿಸಬೇಕೆಂದೂ ಸೂಚಿಸಿದ್ದಾರೆಂದು ತಿಳಿದುಬಂದಿದೆ.
ಹೈಕಮಾಂಡ್ ನಿರ್ಧಾರಕ್ಕೆ ಬದ್ಧರಾಗಿರಬೇಕೆಂದು ಪಿಡಬ್ಲ್ಯುಡಿ ಸಚಿವ ಸತೀಶ್ ಜಾರಕಿಹೊಳಿ ಹೇಳಿಕೆ ನೀಡಿದ ಬಳಿಕ ಸಿದ್ದರಾಮಯ್ಯ ಅವರ ಬೆಂಬಲಿಗರು ಹೇಳಿಕೆ ನೀಡುವುದನ್ನು ನಿಲ್ಲಿಸಿದ್ದರು ಎಂದು ಕಾಂಗ್ರೆಸ್ ನಾಯಕರೊಬ್ಬರು ಹೇಳಿದ್ದಾರೆ.ಲೋಕಸಭೆಯಲ್ಲಿ ರಾಹುಲ್ ಗಾಂಧಿ ಅವರು ಪರಿಣಾಮಕಾರಿ ವಿರೋಧ ಪಕ್ಷದ ನಾಯಕರಾಗಿ ಹೊರಹೊಮ್ಮುತ್ತಿರುವ ಲಕ್ಷಣಗಳು ಕಂಡು ಬರುತ್ತಿರುವ ಕಾರಣ, ಖರ್ಗೆ ಅವರ ಹೆಸರನ್ನು ಮುಖ್ಯಮಂತ್ರಿ ಹುದ್ದೆಗೆ ಪರಿಗಣಿಸುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ,
ರಾಜ್ಯಸಭೆಯಲ್ಲಿ ಖರ್ಗೆ ಅವರಿಗೆ ವಿಪಕ್ಷದ ನಾಯಕನ ಅವಕಾಶ ಕಡಿಮೆಯಾಗಿದ್ದು, ಎಐಸಿಸಿ ಅಧ್ಯಕ್ಷ ಸ್ಥಾನ ಉತ್ತರ ಭಾರತದ ನಾಯಕರೊಬ್ಬರಿಗೆ ನೀಡುವ ಕುರಿತು ಚಿಂತನೆಗಳಿವೆ. ಇದಲ್ಲದೆ, ರಾಜ್ಯದ ಕಾಂಗ್ರೆಸ್ ಸರ್ಕಾರ ಹಗರಣಗಳಿಂದ ತನ್ನ ವರ್ಚಸ್ಸನ್ನು ಕಳೆದುಕೊಳ್ಳುತ್ತಿದ್ದು, ಡ್ಯಾಮೇಜ್ ಕಂಟ್ರೋಲ್ ಗಾಗಿ ಖರ್ಗೆಯವರಿಗೆ ಮುಖ್ಯಮಂತ್ರಿ ಸ್ಥಾನ ನೀಡಲು ಸೋನಿಯಾ ಬಯಸಿದ್ದಾರೆಂದು ಹೇಳಲಾಗುತ್ತಿದೆ.
ಖರ್ಗೆಯವರಿಗೆ ಸಿಎಂ ಸ್ಥಾನ ನೀಡಿದ್ದೇ ಆದರೆ, ಈ ನಿರ್ಧಾರವನ್ನು ಸಿದ್ದರಾಮಯ್ಯ, ಶಿವಕುಮಾರ್ ಸೇರಿದಂತೆ ರಾಜ್ಯ ಕಾಂಗ್ರೆಸ್‌ನ ಯಾವುದೇ ನಾಯಕರು ಪ್ರಶ್ನಿಸುವುದಿಲ್ಲ ಎಂದು ಮುಖಂಡರೊಬ್ಬರು ಹೇಳಿದ್ದಾರೆ.ಖರ್ಗೆಯವರ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ನಿನ್ನೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದ ಸಿದ್ದರಾಮಯ್ಯ ಅವರು, ಖರ್ಗೆಯವರನ್ನು ಕೊಂಡಾಡಿದ್ದರು.
ಸುದೀರ್ಘ ರಾಜಕಾರಣದ ಅವಧಿಯಲ್ಲಿ ಅಧಿಕಾರವನ್ನು ಸಮಾಜ ಸೇವೆಯ ಹೊಣೆಗಾರಿಕೆಯಾಗಿ ಪರಿಭಾವಿಸುತ್ತ ಬಂದಿರುವ ಮಲ್ಲಿಕಾರ್ಜುನ ಖರ್ಗೆಯವರು ವೈಯಕ್ತಿಕ ನೋವು, ಸಂಕಟಗಳನ್ನು ನುಂಗಿಕೊಂಡು ತಮಗಾದ ನೋವು ಸಮಾಜದ ಇತರರಿಗೆ ಉಂಟಾಗಬಾರದು ಎನ್ನುವ ಅಂತಃಕರಣದ ಹಾದಿಯಲ್ಲಿ ಚಿಕ್ಕಂದಿನಿಂದಲೇ ನಡೆದವರು. ತಮ್ಮ ಜೀವನದುದ್ದಕ್ಕೂ ಕೋಮುದ್ವೇಷದ ವಿರುದ್ಧ, ಮೂಲಭೂತವಾದಿ ಚಿಂತನೆಗಳ ವಿರುದ್ಧ ಸೆಣಸುತ್ತಾ ಬಂದವರು.
ಲೋಕಸಭೆ, ರಾಜ್ಯಸಭೆಯಲ್ಲಿ ಪ್ರತಿಪಕ್ಷ ನಾಯಕರಾಗಿ ಭಾರತದ ಸಂವಿಧಾನದ ಆಶಯಗಳನ್ನು ಎತ್ತಿಹಿಡಿಯಲು ನಡೆಸಿದ ಹೋರಾಟ ಭಾರತದ ರಾಜಕಾರಣದ ಇತಿಹಾಸದಲ್ಲಿ ಮಹತ್ವದ ಸ್ಥಾನ ಪಡೆಯುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಬುಡಮೇಲು ಮಾಡುವಂತಹ, ಸರ್ವಾಧಿಕಾರಿ ಆಡಳಿತದ ಕರಿಛಾಯೆ ದೇಶವನ್ನು ಆವರಿಸಿದ್ದ ವೇಳೆ ಖರ್ಗೆಯವರು ಪ್ರತಿಪಕ್ಷ ನಾಯಕರಾಗಿ ತೋರಿದ ಹೋರಾಟದ ಮನೋಭಾವ ಈ ದೇಶದ ಕೋಟ್ಯಂತರ ಹೃದಯಗಳಲ್ಲಿ ಜನವಿರೋಧಿ ಸರ್ಕಾರವನ್ನು ಪ್ರಶ್ನಿಸುವ ಕೆಚ್ಚಿನ ಕಿಡಿಯನ್ನು ಉದ್ದೀಪಿಸಿತು. ಖರ್ಗೆ ಅವರಿಗೆ ಜನ್ಮದಿನದ ಶುಭಾಶಯಗಳು. ನಿಮ್ಮ ಸೈದ್ಧಾಂತಿಕ ಬದ್ಧತೆ, ಜನಪರವಾದ ಕಾಳಜಿ ನಮ್ಮೆಲ್ಲರಿಗೂ ಮಾದರಿ. ದೀರ್ಘ ಆಯಸ್ಸು, ಆರೋಗ್ಯದ ಭಾಗ್ಯ ನಿಮ್ಮದಾಗಲಿ ಎಂದು ಹಾರೈಸುತ್ತೇನೆಂದು ಹೇಳಿದ್ದರು.
