ಬೆಂಗಳೂರು:
ಬಿಜೆಪಿ-ಜೆಡಿಎಸ್ ನಡೆಸಿದ ಪಾದಯಾತ್ರೆ ಕಾಂಗ್ರೆಸ್ ಹೈಕಮಾಂಡ್ ಮಟ್ಟದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮತ್ತಷ್ಟು ಬಲಿಷ್ಠಗೊಳಿಸಿರುವಂತೆ ತೋರುತ್ತಿದೆ. ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್ ಅವರ ಕ್ರಮವನ್ನು ಲೆಕ್ಕಿಸದೆ ಸಿಎಂ ಸಿದ್ದರಾಮಯ್ಯ ತಮ್ಮ ಸ್ಥಾನದಲ್ಲಿ ಮುಂದುವರಿಯುವ ಸಾಧ್ಯತೆಯಿದೆ.
ಮೈಸೂರಿನಲ್ಲಿ ಶುಕ್ರವಾರ ನಡೆದ ಜನಾಂದೋಲನ ಸಮಾವೇಶದಲ್ಲಿ ಸಿಎಂ ಸಂಪುಟ ಸಹೋದ್ಯೋಗಿಗಳು ತಮ್ಮ ಮನದಾಳದ ಮಾತುಗಳನ್ನು ಬಿಚ್ಚಿಟ್ಟಿದ್ದಾರೆ. ಆ ಮೂಲಕ ತಾವು ಸಿಎಂ ಸಿದ್ದರಾಮಯ್ಯ ಅವರ ಬೆಂಬಲಕ್ಕ ಸದಾ ನಿಲ್ಲುವುದಾಗಿ ಘೋಷಿಸಿದ್ದಾರೆ. ಜನಾಂದೋಲನದ ನಂತರ, ಸಿಎಂ ಸ್ಥಾನದ ಬಗ್ಗೆ ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳು ಹಾಗೂ ಸಿದ್ದರಾಮಯ್ಯ ವಿರೋಧಿಗಳ ಧ್ವನಿ ಬದಲಾಗಿದೆ ಎಂದು ಮೂಲಗಳು ತಿಳಿಸಿವೆ. ಸಿಎಂ ಬದಲಾವಣೆಯ ನಿರೀಕ್ಷೆಯಲ್ಲಿದ್ದವರು ಸಿದ್ದರಾಮಯ್ಯನವರ ಬೆನ್ನಿಗೆ ನಿಂತಿದ್ದಾರೆ.
ಜನಾಂದೋಲನ ರ್ಯಾಲಿಗೂ ಮುನ್ನ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ.ವೇಣುಗೋಪಾಲ್ ಮತ್ತು ರಣದೀಪ್ ಸಿಂಗ್ ಸುರ್ಜೇವಾಲಾ ಅವರು ರಾಜ್ಯ ರಾಜಧಾನಿಗೆ ಆಗಮಿಸಿದ್ದು, ಹೈಕಮಾಂಡ್ ಸಿದ್ದರಾಮಯ್ಯ ಬೆಂಬಲಕ್ಕೆ ನಿಲ್ಲಲಿದೆ ಎಂಬ ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೆ 14 ನಿವೇಶನಗಳನ್ನು ಅಕ್ರಮವಾಗಿ ಮಂಜೂರು ಮಾಡಲಾಗಿದೆ ಎಂಬ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಪ್ರತಿಪಾದಿಸಿದ್ದಾರೆ.
ಮುಡಾ ಹಗರಣದಲ್ಲಿ ತಮ್ಮ ತಂದೆಯ ಪಾತ್ರವಿಲ್ಲ ಎಂಬುದನ್ನು ಹೈಕಮಾಂಡ್ ಗೆ ಮನವರಿಕೆ ಮಾಡಿಕೊಡುವಲ್ಲಿ ಸಿದ್ದರಾಮಯ್ಯನವರ ಪುತ್ರ ಹಾಗೂ ವರುಣಾದ ಮಾಜಿ ಶಾಸಕ ಡಾ.ಯತೀಂದ್ರ ಪ್ರಮುಖ ಪಾತ್ರ ವಹಿಸಿದ್ದರು ಎಂದು ವಿಶ್ವಾಸಾರ್ಹ ಮೂಲಗಳು ತಿಳಿಸಿವೆ. ಮುಡಾ ಹಗರಣ ಸಂಬಂಧ ರಾಜ್ಯಪಾಲರು ಸಿದ್ದರಾಮಯ್ಯ ಅವರಿಗೆ ಶೋಕಾಸ್ ನೋಟಿಸ್ ನೀಡಿದ್ದರ ವಿರುದ್ಧ ಸಿಎಂ ಅನುಪಸ್ಥಿತಿಯಲ್ಲಿ ಸಚಿವರ ಮಂಡಳಿ ನಿರ್ಣಯವನ್ನು ಅಂಗೀಕರಿಸಿತು, ಇದು ಹೈಕಮಾಂಡ್ ಸಿದ್ದರಾಮಯ್ಯ ಅವರ ಬೆಂಬಲಕ್ಕೆ ದೃಢವಾಗಿ ನಿಂತಿದೆ ಎಂಬುದಕ್ಕೆ ಸಾಕ್ಷಿಯಾಗಿದೆ.
ಒಂದು ವೇಳೆ ಸಿದ್ದರಾಮಯ್ಯ ವಿರುದ್ಧ ಕಾನೂನು ಕ್ರಮ ಜರುಗಿಸಲು ರಾಜ್ಯಪಾಲರು ಅನುಮತಿ ನೀಡಿ ಎಫ್ಐಆರ್ ದಾಖಲಿಸಿದರೂ ಅ ಸಿಎಂ ಸ್ಥಾನದಿಂದ ಸಿದ್ದರಾಮಯ್ಯ ಕೆಳಗಿಳಿಯುವ ಸಾಧ್ಯತೆ ಕಡಿಮೆ. ಅವರಿಗೆ ಹೈಕಮಾಂಡ್ ನೈತಿಕ ಬೆಂಬಲವಿದೆ ಮತ್ತು ಜೊತೆಗೆ ಕ್ಯಾಬಿನೆಟ್ ಸಹೋದ್ಯೋಗಿಗಳು ಕಾನೂನು ಹೋರಾಟ ನಡೆಸುವುದಾಗಿ ಹೇಳುತ್ತಿದ್ದಾರೆ ಎಂದು ಕಾಂಗ್ರೆಸ್ ಹಿರಿಯ ನಾಯಕರೊಬ್ಬರು ಹೇಳಿದ್ದಾರೆ. ಇದೆಲ್ಲದರ ನಡುವೆ ಸಿದ್ದರಾಮಯ್ಯ ವಿರುದ್ಧ ಆಂತರಿಕ ಸಮರ ಸಾರಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಬೆಂಬಲಿಗರು ಕೂಡ ಸಿದ್ದರಾಮಯ್ಯ ಅವರ ಬೆನ್ನಿಗೆ ನಿಂತಿದ್ದಾರೆ. ಹೈಕಮಾಂಡ್ ಆದೇಶದ ಹಿನ್ನೆಲೆಯಲ್ಲಿ ಸದ್ಯ ಎಲ್ಲರೂ ಸಿಎಂ ಬೆಂಬಲಕ್ಕೆ ನಿಂತಿದ್ದಾರೆ ಎಂದು ಹೇಳಲಾಗುತ್ತಿದೆ. ಸಿಎಂ ಬದಲಾವಣೆ ನಿರೀಕ್ಷೆಯಲ್ಲಿದ್ದ ಖರ್ಗೆ ಬೆಂಬಲಿಗರಿಗೆ ಇದೊಂದು ರೀತಿಯ ಬಲವಂತದ ಮಾಘಸ್ನಾನವಾಗಿದೆ ಎಂದು ಮೂಲಗಳು ತಿಳಿಸಿವೆ.
ಸಿದ್ದರಾಮಯ್ಯನವರಂತಹ ‘ಮಾಸ್ ಲೀಡರ್’ ಅನ್ನು ಸಿಎಂ ಹುದ್ದೆಯಿಂದ ಕೆಳಗಿಳಿಸಿದರೆ ಪಕ್ಷಕ್ಕೆ ಹಿನ್ನಡೆಯಾಗುತ್ತದೆ ಎಂದು ಕಾಂಗ್ರೆಸ್ ನಾಯಕತ್ವ ಅರಿತುಕೊಂಡಿದೆ. ಏಕೆಂದರೆ ರಾಜ್ಯದ ಮತ್ತೊಬ್ಬ ಮಾಸ್ ಲೀಡರ್ ಯಡಿಯೂರಪ್ಪ ಅವರನ್ನು ಸಿಎಂ ಹುದ್ದೆಯಿಂದ ಕೆಳಗಿಸಿದ ನಂತರ ಬಿಜೆಪಿಗೆ ಉಂಟಾಗಿರುವ ಡ್ಯಾಮೇಜ್ ಬಗ್ಗೆ ಮನಗಂಡಿರುವ ಕಾಂಗ್ರೆಸ್ ಹೈಕಮಾಂಡ್ ಎಚ್ಚೆತ್ತುಕೊಂಡಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ.
ಬಿಜೆಪಿ ಹೈ ಕಮಾಂಡ್ ನ ಒತ್ತಡದ ಹಿನ್ನೆಲೆಯಲ್ಲಿ ಕೇಂದ್ರದ ಉಕ್ಕು ಮತ್ತು ಭಾರೀ ಕೈಗಾರಿಕೆ ಸಚಿವ ಎಚ್ಡಿ ಕುಮಾರಸ್ವಾಮಿ ಮತ್ತು ರಾಜ್ಯಬಿಜೆಪಿ ನಾಯಕರು ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಹೋರಾಟ ಆರಂಭಿಸಿದರು, ಆದರೆ ಹೋರಾಟಕ್ಕೆ ಸೂಕ್ತ ಕೇಸ್ ಆಗಿರಲಿಲ್ಲ, ಇದರ ಬದಲು ಅರ್ಕಾವತಿ ಡಿನೋಟಿಫಿಕೇಶನ್ ವಿರುದ್ಧ ಸೂಕ್ತ ಸಮಯದಲ್ಲಿ ಹೋರಾಟ ನಡೆಸಿದ್ದರೆ ಸ್ವಲ್ಪವಾದರೂ ಇಂಪ್ಯಾಕ್ಟ್ ಆಗುತ್ತಿತ್ತು ಎಂದು ಬಿಜೆಪಿ ಮುಖಂಡರೊಬ್ಬರು ತಿಳಿಸಿದ್ದಾರೆ. ಮೈಸೂರಿನಲ್ಲಿ ಬಿಜೆಪಿ-ಜೆಡಿಎಸ್ ಪಾದಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಕುಮಾರಸ್ವಾಮಿ ಅವರು ಈ ವಿಷಯ ಪ್ರಸ್ತಾಪಿಸಿ, ಡಿನೋಟಿಫಿಕೇಶನ್ ಪ್ರಕರಣದ ಕುರಿತು ನ್ಯಾಯಮೂರ್ತಿ ಕೆಂಪಣ್ಣ ಆಯೋಗದ ವರದಿಯನ್ನು ಏಕೆ ಮಂಡಿಸಿಲ್ಲ ಎಂದು ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದ್ದರು.