ಕೋಲಾರ : ಪ್ಯಾಲೆಸ್ಟೈನ್​ ಬಾವುಟ ಹಾರಾಟ : ಪ್ರಕರಣ ದಾಖಲು

ಕೋಲಾರ

    ಸೋಮವಾರ ನಡೆದ ಈದ್ ಮಿಲಾದ್  ಮೆರವಣಿಗೆ ವೇಳೆ ನಡೆದ ದುಷ್ಕೃತ್ಯಕ್ಕೆ ಸಂಬಂಧಿಸಿದಂತೆ ಕೋಲಾರ  ನಗರ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿವೆ. ಅಂಜುಮನ್ ಸಂಸ್ಥೆ ಬಳಿ ಫ್ರೀ ಪ್ಯಾಲೆಸ್ಟೈನ್ ಧ್ವಜ ಹಾರಾಟ ಮತ್ತು ಕ್ಲಾಕ್ ಟವರ್​ ಬಳಿ ಮೆರವಣಿಗೆ ಬಂದಾಗ ನಡೆದ ಗುಂಪು ಘರ್ಷಣೆ ವಿಚಾರವಾಗಿ ಪ್ರಕರಣ ದಾಖಲಾಗಿವೆ. ಗಲಾಟೆ ಸಂಬಂಧ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಕೋಲಾರ‌ದಲ್ಲಿ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ.

   ಈದ್‌ ಮಿಲಾದ್ ಮೆರವಣಿಗೆ ವೇಳೆ ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪಿನ ನಡುವೆ ಮಾರಾಮರಿ ನಡೆದಿತ್ತು. ಕೋಲಾರದ ಕ್ಲಾಕ್‌ ಟವರ್‌ ಬಳಿ ಮೆರವಣಿಗೆ ಸಾಗುವಾಗ ಏಕಾಏಕಿ‌ ಮಾರಕಾಸ್ತ್ರ ಹಿಡಿದು ಬಂದ ಒಂದು ಗುಂಪು ಹಲ್ಲೆ‌ ಮಾಡಿತ್ತು. ಹಲ್ಲೆಯಿಂದ ಸೈಯದ್ ಸಲ್ಮಾನ್, ಸೈಫ್, ಹುಸೇನ್ ಕಾಷಿಪ್, ಕಲೀಲ್ ಅಹಮದ್, ಸೇರಿ ಆರು ಜನರಿಗೆ ಗಾಯವಾಗಿದ್ದು, ಎಸ್‌ಎನ್‌ಆರ್‌ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಸಯ್ಯದ್ ವಸೀಂ ಪಾಷಾ, ಥಾಹೀರ್ ಗುಂಪಿನಿಂದ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಲಾಗಿತ್ತು.

    ವಿಚಾರ ತಿಳಿಯುತ್ತಿದ್ದಂತೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಬಿ.ನಿಖಿಲ್‌ ಸ್ಥಳಕ್ಕೆ ಧಾವಿಸಿದ್ದು, ಗುಂಪುಗೂಡಿದ್ದ ಜನರನ್ನು ಚದುರಿಸಿದ್ದರು. ಬಳಿಕ ಮೆರವಣಿಗೆ ಮುಂದೆ ಸಾಗಿತ್ತು. ನಗರದಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜನೆ ಮಾಡಲಾಗಿದ್ದು, ಕೋಲಾರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿತ್ತು.

    ಈದ್ ಮಿಲಾದ್ ಮೆರವಣಿಗೆ ವೇಳೆ ಫ್ರೀ ಪ್ಯಾಲೆಸ್ಟೈನ್​​ ಎನ್ನುವ ಧ್ವಜ ಹಾರಾಡಿತ್ತು. ಎಂ.ಜಿ ರಸ್ತೆಯಲ್ಲಿರುವ ಅಂಜುಮನ್​ ಕಛೇರಿಯ ಬಳಿ ಧ್ವಜಾರೋಹಣ ಮಾಡಿ ಮೆರವಣಿಗೆಗೆ ಚಾಲನೆ ನೀಡಲಾಗಿತ್ತು. ಈ ವೇಳೆ ಮೆರವಣಿಗೆಯಲ್ಲಿ ಫ್ರೀ ಪ್ಯಾಲೆಸ್ಟೈನ್​​ ​ಎಂದು ಧ್ವಜದ ಮೇಲೆ ಬರೆಯಲಾಗಿತ್ತು. ಬರಹ ಕಾಣಿಸಿದ್ದೇ ತಡ ಕೂಡಲೇ ಪೊಲೀಸರು ಆ ಬಾವುಟವನ್ನು ತೆಗೆಸಿದ್ದಾರೆ. ಬಳಿಕ ಪೊಲೀಸರು ಬೇರೆ ದೇಶದ ಬಾವುಟಗಳನ್ನು ಹಾರಿಸದಂತೆ ವಿವಾದ ಸೃಷ್ಟಿಸದಂತೆ ತಿಳಿಹೇಳಿದರು.

Recent Articles

spot_img

Related Stories

Share via
Copy link
Powered by Social Snap