ಬೆಂಗಳೂರು :ಬಿಸಿಸಿಐನಿಂದ ನೂತನ NCA ಲೋಕಾರ್ಪಣೆ …!

ಬೆಂಗಳೂರು:

    ದೇಶದಲ್ಲಿ ಕ್ರಿಕೆಟ್ ಅನ್ನು ಮತ್ತಷ್ಟು ಅಭಿವೃದ್ಧಿಪಡಿಸುವ ದೃಷ್ಟಿಯಿಂದ ಅತ್ಯಾಧುನಿಕ ಸೌಲಭ್ಯಗಳನ್ನೊಳಗೊಂಡ ನೂತನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯನ್ನು (NCA) ಬಿಸಿಸಿಐ ಬೆಂಗಳೂರಿನಲ್ಲಿ ಲೋಕಾರ್ಪಣೆಗೊಳಿಸಿದೆ.

   ವಿಶ್ವದರ್ಜೆಯ ಸೌಲಭ್ಯಗಳನ್ನು ಹೊಂದಿರುವ ಈ NCA ದೇಶದ ಕ್ರಿಕೆಟ್ ಬೆಳವಣಿಗೆಯಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ತರಲಿದೆ ಎಂದು ಬಿಸಿಸಿಐ ಆಶಿಸಿದೆ. ಹಾಗಾದ್ರೆ ಹೊಸದಾಗಿ ಆರಂಭವಾಗಿರುವ ಈ ನೂತನ ಕ್ರಿಕೆಟ್ ಅಕಾಡೆಮಿಯಲ್ಲಿ ಇರುವಂತಹ ಅತ್ಯಾಧುನಿಕ ಸೌಲಭ್ಯಗಳು ಯಾವುವು ಅನ್ನೋದನ್ನು ತಿಳಿದುಕೊಳ್ಳೋಣ..

   40 ಎಕರೆಯಲ್ಲಿ ನಿರ್ಮಾಣಗೊಂಡಿರುವ ಎನ್ಸಿಎ, ಮೂರು ವಿಶ್ವ ದರ್ಜೆಯ ಕ್ರೀಡಾ ಮೈದಾನಗಳು, ಒಳಾಂಗಣ ಮತ್ತು ಹೊರಾಂಗಣ ಸೇರಿದಂತೆ ಒಟ್ಟು 86 ಪಿಚ್ಗಳನ್ನು ಹೊಂದಿದೆ. ಗ್ರೌಂಡ್ A ನಲ್ಲಿರುವ ಮೈದಾನವು 85 ಗಜ ಸುತ್ತಳತೆಯ ಬೌಂಡರಿಯನ್ನು ಹೊಂದಿದ್ದು, ಇದರಲ್ಲಿ ಮುಂಬೈನ ಕೆಂಪು ಮಣ್ಣು ಬಳಸಲಾಗಿದೆ. ಜತೆಗೆ ಅತ್ಯಾಧುನಿಕ ಫ್ಲಡ್ ಲೈಟಿಂಗ್ನೊಂದಿಗೆ ಪ್ರಸಾರ ಸೌಲಭ್ಯಗಳು ಇಲ್ಲಿವೆ. ಫ್ಲಡ್ ಲೈಟ್ಗಳ ಮೂಲಕವೇ ಪಂದ್ಯಗಳನ್ನು ನಡೆಸಬಹುದಾಗಿದೆ. ಇನ್ನು B, C ಮೈದಾನದ ಬೌಂಡರಿಯ ಸುತ್ತಳತೆ 75 ಗಜಗಳಷ್ಟಿದ್ದು, ಇದು ಅಭ್ಯಾಸದ ಮೈದಾನವಾಗಿ ಕಾರ್ಯನಿರ್ವಹಿಸಲಿದೆ. ಇವುಗಳಲ್ಲಿ ಮಂಡ್ಯದ ಮಣ್ಣು ಮತ್ತು ಒಡಿಶಾದ ಕಪ್ಪು ಹತ್ತಿ ಮಣ್ಣು ಬಳಕೆ ಮಾಡಲಾಗಿದೆ.

   ಹೊಸ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಸಬ್ ಸರ್ಫೇಸ್ ಡ್ರೈನೇಜ್ ವ್ಯವಸ್ಥೆಯನ್ನು ಅಳವಡಿಸಲಾಗಿದ್ದು, ಮೈದಾನದಲ್ಲಿ ಮಳೆ ಬಂದರೂ ಕ್ಷಣಾರ್ಧದಲ್ಲೇ ನೀರು ಹೀರಿಕೊಳ್ಳಲಿದೆ. ವೈಟ್ ಪಿಕೆಟ್ ಫೆನ್ಸಿಂಗ್ ಕೂಡ ಹಾಕಲಾಗಿದ್ದು, ಈ ಮೈದಾನಗಳು ಇಂಗ್ಲಿಷ್ ಕೌಂಟಿ ಪಿಚ್ನಂತೆ ಕಾಣುತ್ತವೆ. ಅಲ್ಲದೇ 45 ಔಟ್ಡೋರ್ ನೆಟ್ ಪ್ರಾಕ್ಟಿಸ್ ಪಿಚ್ಗಳು ಇವೆ. ಇವುಗಳಲ್ಲಿ UKಯಿಂದ ತರಲಾದ ಸೇಫ್ಟಿ ನೆಟ್ಸ್ ಬಳಕೆ ಮಾಡಲಾಗಿದೆ. ಇದರ ಜೊತೆಗೆ ಆರು ಹೊರಾಂಗಣ ರನ್ನಿಂಗ್ ಟ್ರ್ಯಾಕ್ಗಳನ್ನು ಸ್ಥಾಪಿಸಲಾಗಿದೆ.

   ಮಳೆಗಾಲದಲ್ಲಿ ಒಳಾಂಗಣ ಪಿಚ್ಗಳಲ್ಲಿ ಆಟಗಾರರು ಅಭ್ಯಾಸ ನಡೆಸಬಹುದಾಗಿದೆ. ಇದು ಗಾಜಿನ ಫಲಕಗಳಿಂದ ಕೂಡಿದ್ದು ನೈಸರ್ಗಿಕ ಬೆಳಕನ್ನು ಒದಗಿಸುತ್ತದೆ. ಜತೆಗೆ ಇದರಲ್ಲಿ ಅಳವಡಿಸಿರುವ ಅತ್ಯಾಧುನಿಕ ಕ್ಯಾಮರಾಗಳ ಮೂಲಕ ಆಟವನ್ನು ಸೆರೆಹಿಡಿಯಬಹುದಾಗಿದೆ.

Recent Articles

spot_img

Related Stories

Share via
Copy link