ಬೆಂಗಳೂರು:
ಲಕ್ಷಾಂತರ ವಿಶಿಷ್ಟ ಪುಸ್ತಕಗಳ ಸಂಗ್ರಹದ ಮೂಲಕ ಹೆಸರಾಗಿರುವ ಪುಸ್ತಕ ಸಂಗ್ರಾಹಕ, ಸಂಸ್ಕೃತಿ ಚಿಂತಕ, ಸಾಹಿತಿ ʼಪುಸ್ತಕಮನೆʼ ಹರಿಹರಪ್ರಿಯ ಅವರಿಗೆ ಹೃದಯಾಘಾತ ಆಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಈ ಸಂದರ್ಭದಲ್ಲಿ ಖಾಸಗಿ ಆಸ್ಪತ್ರೆಯವರ ನಡವಳಿಕೆ ಅವರಿಗೆ ಆಘಾತ ತಂದಿದ್ದು, ಈ ಬಗ್ಗೆ ಸೂಕ್ತ ಕ್ರಮ ತೆಗದುಕೊಳ್ಳುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಒಂದು ವಾರದ ಹಿಂದೆ ಮಾಲೂರಿನ ಸ್ವಂತ ಮನೆಯಲ್ಲಿ ಹರಿಹರಪ್ರಿಯ ಅವರಿಗೆ ಹೃದಯಾಘಾತವಾಗಿತ್ತು. ಅವರನ್ನು ಅವರ ಮಕ್ಕಳು ತಕ್ಷಣ ಬನ್ನೇರುಘಟ್ಟದ ಅಪೋಲೋ ಆಸ್ಪತ್ರೆಗೆ ಕರೆದೊಯ್ದಿದ್ದರು. ಹೃದಯಾಘಾತದ ವಿಚಾರ ತಿಳಿಸಿ, ಕೂಡಲೇ ಸರ್ಜರಿ ಆಗಬೇಕು ಎಂದಿದ್ದರು. ಕೂಡಲೇ 4.50 ಲಕ್ಷ ರೂಪಾಯಿ ಕಟ್ಟುವಂತೆ ಒತ್ತಾಯಿಸಿದ್ದರು. ಅದರಂತೆ ಹರಿಹರಪ್ರಿಯ ಅವರ ಮಕ್ಕಳು ಹಣ ಕಟ್ಟಿದ್ದರು. ಆಸ್ಪತ್ರೆಯಲ್ಲಿ ಸರ್ಜರಿ ನಡೆದು ಹರಿರಪ್ರಿಯ ಅವರಿಗೆ ಎರಡು ಸ್ಟೆಂಟ್ ಅಳವಡಿಸಲಾಗಿತ್ತು.
ಸರ್ಜರಿ ಬಳಿಕ ಐಸಿಯುನಲ್ಲಿದ್ದ ಹರಿಹರಪ್ರಿಯ ಅವರು ಆಸ್ಪತ್ರೆಯ ಸಿಬ್ಬಂದಿಯಲ್ಲಿ ಕನ್ನಡ ಸೇವೆಗಾಗಿ ವಿನಂತಿಸಿದ್ದಾರೆ. ಆದರೆ ಈ ಮನವಿಗೆ ಯಾವುದೇ ಸ್ಪಂದನ ಬರದೇ ಹೋದಾಗ ರೊಚ್ಚಿಗೆದ್ದ ಅವರು ಆಸ್ಪತ್ರೆಯಿಂದ ಹೊರಗೆ ಬಂದಿದ್ದು, ಪುಟ್ಟೇನಹಳ್ಳಿ ಪೊಲೀಸ್ ಸ್ಟೇಶನ್‌ಗೆ ಹೋಗಿ ಈ ಬಗ್ಗೆ ದೂರು ನೀಡಲು ಮುಂದಾಗಿದ್ದಾರೆ. ಆದರೆ ಅಲ್ಲಿ ಎರಡು ಗಂಟೆ ಕಾಯಿಸಿದರೂ ದೂರು ದಾಖಲಿಸಿಕೊಳ್ಳದೆ ಇದ್ದುದರಿಂದ, ಇನ್‌ಫೆಂಟ್ರಿ ರಸ್ತೆಯಲ್ಲಿರುವ ಕಮಿಷನರ್ ಕಚೇರಿಗೆ ನಡೆದೇ ಬಂದಿದ್ದರು. ಅಲ್ಲಿ ಹೆಚ್ಚುವರಿ ಆಯುಕ್ತರು ಇವರ ದೂರನ್ನು ಪಡೆದುಕೊಂಡಿದ್ದಾರೆ.
ಆದರೆ ಇದರ ಬಳಿಕ ಪ್ರಕರಣದಲ್ಲಿ ಯಾವುದೇ ಬೆಳವಣಿಗೆ ಆಗಿಲ್ಲ ಎಂದು ಹರಿಹರಪ್ರಿಯ ಅವರು ದೂರಿದ್ದಾರೆ. ಹರಿಹರಪ್ರಿಯ ಅವರ ಚಿಕಿತ್ಸೆಯ ವಿವರ ಹಾಗೂ ಡಿಸ್‌ಚಾರ್ಜ್ ಸಮ್ಮರಿ ನೀಡಲು ಮತ್ತಷ್ಟು ಹಣ ನೀಡುವಂತೆ ಆಸ್ಪತ್ರೆಯವರು ಅವರ ಮಕ್ಕಳನ್ನು ಒತ್ತಾಯಿಸಿ, ಒಟ್ಟಾರೆ 6 ಲಕ್ಷ ರೂ.ಗಳನ್ನು ಕಟ್ಟಿಸಿಕೊಂಡಿದ್ದಾರೆ. ಇದಲ್ಲದೇ ಆಸ್ಪತ್ರೆಯಲ್ಲಿ ಕನ್ನಡದ ಸಿಬ್ಬಂದಿಯೇ ಇಲ್ಲ. ಎಲ್ಲರೂ ಹಿಂದಿ, ಇಂಗ್ಲಿಷ್ ಭಾಷೆಗಳಲ್ಲಿ ವ್ಯವಹರಿಸಿದ್ದಾರೆ. ಇದರಿಂದ ನಾನು ಹೈರಾಣಾಗಿದ್ದೇನೆ ಎಂದು ಹರಿಹರಪ್ರಿಯ ದೂರಿದ್ದಾರೆ.
ಸದ್ಯ ಅವರ ಮಗಳ ಮನೆಯಲ್ಲಿರುವ ಹರಿಹರಪ್ರಿಯ, ಹೃದಯಾಘಾತದ ಬಳಿಕ ಚೇತರಿಸಿಕೊಳ್ಳುತ್ತಿದ್ದಾರೆ. ಖಾಸಗಿ ಆಸ್ಪತ್ರೆ ಸಿಬ್ಬಂದಿಯ ವರ್ತನೆ, ಹಗಲು ದರೋಡೆ ಹಾಗೂ ಕನ್ನಡರಹಿತ ಸೇವೆಯ ಬಗ್ಗೆ ಅವರು ಪೊಲೀಸ್ ದೂರನ್ನು ನೀಡಿದ್ದು, ಈ ಬಗ್ಗೆ ಪೊಲೀಸರು ಕಾರ್ಯಪ್ರವೃತ್ತರಾಗಿಲ್ಲ. ಹೀಗಾಗಿ ಕೂಡಲೇ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಕಾರ್ಯಪ್ರವೃತ್ತವಾಗಬೇಕು; ಆಸ್ಪತ್ರೆಯ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಅವರು ದೂರು ನೀಡಿದ್ದಾರೆ.
ಹರಿಹರಪ್ರಿಯ ಅವರ ದೂರಿಗೆ ಸ್ಪಂದಿಸಿರುವ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ, ಕನ್ನಡಕ್ಕೆ ಮಹತ್ವದ ಕೊಡುಗೆ ನೀಡಿರುವ ಹರಿಹರಪ್ರಿಯ ಅವರ ಚಿಕಿತ್ಸಾ ವೆಚ್ಚವನ್ನು ಸರ್ಕಾರ ಭರಿಸಬೇಕು ಎಂದು ಆಗ್ರಹಿಸಿದ್ದಾರೆ. ಕನ್ನಡದ ಸೇವೆಗೆ ಸಂಬಂಧಿಸಿದಂತೆ, “ಕನ್ನಡದ ರೋಗಿಗಳಿಗೆ ಖಾಸಗಿ ಆಸ್ಪತ್ರೆಯಲ್ಲಿ ಇಂಥ ಅನಾಥಪ್ರಜ್ಞೆ ಕಾಡದಂತೆ ಕ್ರಮ ವಹಿಸಬೇಕು” ಎಂದು ಮುಖ್ಯಮಂತ್ರಿಗಳನ್ನು ಆಗ್ರಹಿಸಿದ್ದಾರೆ.
ಸಾತವಲ್ಲಿ ವೇಂಕಟವಿಶ್ವನಾಥಭಟ್ಟ ಅವರು ಹರಿಹರಪ್ರಿಯ ಎಂದೇ ಪರಿಚಿತರು. ಮೈಸೂರಿನಲ್ಲಿ ಜನಿಸಿದ (ಜ. 1952) ಅವರು ಬೆಳೆದದ್ದು ಮಂಡ್ಯದಲ್ಲಿ. ಕಾವ್ಯ, ಕಾದಂಬರಿ, ಕತೆ, ನಾಟಕ, ವಿಚಾರ ವಿಮರ್ಶೆ, ಸಂಶೋಧನೆ, ವ್ಯಕ್ತಿಚಿತ್ರ, ತೌಲನಿಕ ಅಧ್ಯಯನ, ಗ್ರಂಥಸಂಪಾದನೆ, ಅಂಕಣ ಬರಹ ಮುಂತಾದ ಪ್ರಕಾರಗಳಲ್ಲಿ ಕೃತಿ ರಚನೆ ಮಾಡಿದ್ದಾರೆ. ಚಳವಳಿಗಾರ, ಸಾಂಸ್ಕೃತಿಕ ರಾಯಭಾರಿ. ’ಪುಸ್ತಕಮನೆ’ ಎನ್ನುವುದು ಅವರ ಅಪರೂಪದ ಪುಸ್ತಕ ಸಂಗ್ರಹ. ಸತತ ಐದು ವರ್ಷಗಳ ಕಾಲ ಪುಸ್ತಕ ಪ್ರದರ್ಶನ ನಡೆಸಿದ ದಾಖಲೆ ಅವರದು. ಅಪರೂಪದ ಸಾಹಿತ್ಯ ಕೃತಿಗಳ ಮತ್ತು ವ್ಯಕ್ತಿಗಳ ಬಗ್ಗೆ ಅಧಿಕೃತ ಮಾಹಿತಿ ನೀಡಬಲ್ಲ ಮಾಹಿತಿಕೋಶ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ, ಗಳಗನಾಥ ಪ್ರಶಸ್ತಿ, ವರ್ಧಮಾನ ಪ್ರಶಸ್ತಿ, ಆಂಧ್ರಪ್ರದೇಶದ ವಿ.ಆರ್. ನಾರ್‍ಲಾ ಪ್ರಶಸ್ತಿಗೆ ಭಾಜನರಾಗಿದ್ದಾರೆ.