ಬೆಂಗಳೂರು:
ನನಗೂ ಜ್ಯೋತಿಷ್ಯ ಕೇಳುವ ಚಟ ಇದೆ. ಈಗ ಅಶೋಕ್ ಅವರು ಜ್ಯೋತಿಷ್ಯ ಹೇಳುವ ಬೋರ್ಡ್ ಹಾಕಿಕೊಂಡಿದ್ದಾರೆ. ಸಮಯ ಬಿಡುವು ಮಾಡಿಕೊಂಡು ನಾನು ಅವರ ಬಳಿ ಹೋಗಿ ಶಾಸ್ತ್ರ ಕೇಳುತ್ತೇನೆ ಎಂದು ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಸಿಎಂ ಬದಲಾವಣೆಯ ದಿನಾಂಕ ಘೋಷಣೆ ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ನನಗೂ ಜ್ಯೋತಿಷ್ಯ ಕೇಳುವ ಚಟ ಇದೆ, ಬಿಡುವು ಮಾಡಿಕೊಂಡು ನಾನು ಅವರ ಬಳಿ ಹೋಗಿ ಶಾಸ್ತ್ರ ಕೇಳುತ್ತೇನೆ ಎಂದು ಲೇವಡಿ ಮಾಡಿದರು.
ಜೆಡಿಎಸ್ ಶಾಸಕರು ನಿಮ್ಮ ಸಂಪರ್ಕದಲ್ಲಿ ಇದ್ದಾರಾ ಎಂಬ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಾನು ಜೆಡಿಎಸ್ ಶಾಸಕರ ವಿಚಾರವಾಗಿ ಮಾತನಾಡಿಲ್ಲ, ಜೆಡಿಎಸ್ ಕಾರ್ಯಕರ್ತರು ತಮ್ಮ ಭವಿಷ್ಯವನ್ನು ತಾವು ನೋಡಿಕೊಳ್ಳಬೇಕು ಎಂದು ಕರೆ ನೀಡಿದ್ದೇನೆ. ಆ ಕಾರ್ಯಕರ್ತರು ಕೂಡ ಎಷ್ಟು ದಿನ ಎಂದು ಕಾಯಲು ಸಾಧ್ಯ? ಅವರಿಗೂ ಜಾತ್ಯಾತೀತ ಸಿದ್ಧಾಂತದ ರಾಷ್ಟ್ರೀಯ ಪಕ್ಷದ ಅಗತ್ಯವಿದೆ. ಅನೇಕ ಕಾರ್ಯಕರ್ತರು ನಮ್ಮ ಪಕ್ಷ ಸೇರಲು ಮುಂದಾಗಿದ್ದಾರೆ” ಎಂದು ತಿಳಿಸಿದರು.
ಶಾಸಕರು ನಿಮ್ಮ ಪಕ್ಷ ಸೇರಲು ಮುಂದೆ ಬಂದರೆ ಎಂದು ಕೇಳಿದಾಗ, “ಆ ವಿಚಾರ ಮುಂದೆ ನೋಡೋಣ. ನಾನು ಅದರ ಬಗ್ಗೆ ಆಲೋಚನೆ ಮಾಡಿಲ್ಲ. ಯಾವ ಶಾಸಕರು ನಮ್ಮ ಸಂಪರ್ಕದಲ್ಲಿ ಇಲ್ಲ. ನಾನು ಯಾರ ಜತೆಗೂ ಮಾತನಾಡಿಲ್ಲ. ಇದೆಲ್ಲವೂ ಸುಳ್ಳು ಸುದ್ದಿ ಎಂದು ತಿಳಿಸಿದರು.
ಕರ್ನಾಟಕ ದಿವಾಳಿಯಾಗಿದೆ ಎಂಬ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಹೇಳಿಕೆ ಸಂಬಂಧ ಮಾತನಾಡಿದ ಅವರು, ಕೇಂದ್ರ ಸರ್ಕಾರ ಎಷ್ಟು ಲಕ್ಷ ಕೋಟಿಗಟ್ಟಲೆ ಸಾಲ ಮಾಡಿದೆ ಎಂಬುದನ್ನು ಅರಿಯಬೇಕು. ನಮ್ಮ ರಾಜ್ಯ ಸರ್ಕಾರ ಅಷ್ಟು ದೊಡ್ಡ ಪ್ರಮಾಣದ ಸಾಲ ಮಾಡಿಲ್ಲ. ನಾವು ಈ ಗ್ಯಾರಂಟಿ ಯೋಜನೆ ಘೋಷಣೆ ಮಾಡಿದಾಗ ಪ್ರಧಾನಮಂತ್ರಿಗಳು ಕೂಡ ನಮ್ಮ ರಾಜ್ಯ ದಿವಾಳಿಯಾಗಲಿದೆ ಎಂದು ಹೇಳಿದ್ದರು. ನಂತರ ನಡೆದ ಎಲ್ಲಾ ರಾಜ್ಯಗಳ ಚುನಾವಣೆಯಲ್ಲಿ ಅವರು ಗ್ಯಾರಂಟಿ ಯೋಜನೆ ನಕಲು ಮಾಡಿ ಯೋಜನೆಗಳನ್ನು ಘೋಷಿಸಿದ್ದಾರೆ.
ನಮ್ಮ ಸರ್ಕಾರ ಬೆಲೆ ಏರಿಕೆ ಹಾಗೂ ನಿರುದ್ಯೋಗ ಸಮಸ್ಯೆಯಿಂದ ಬಳಲಿದ್ದ ಜನಸಾಮಾನ್ಯರಿಗೆ ನೆರವಾಗಲು ಗ್ಯಾರಂಟಿ ಯೋಜನೆ ಘೋಷಣೆ ಮಾಡಿದೆಯೇ ಹೊರತು, ಮತಕ್ಕಾಗಿ ಅಲ್ಲ. ನಮ್ಮ ಸರ್ಕಾರದ ಆರ್ಥಿಕ ಪರಿಸ್ಥಿತಿ ಹಾಗೂ ದಿವಾಳಿ ವಿಚಾರ ಪಕ್ಕಕ್ಕಿರಲಿ. ಕೇಂದ್ರ ಸರ್ಕಾರದ ಬಜೆಟ್ ನಲ್ಲಿ ಕರ್ನಾಟಕ ರಾಜ್ಯಕ್ಕೆ ಅವರು ಯಾವ ಕೊಡುಗೆ ನೀಡಿದ್ದಾರೆ ಎಂದು ಮೊದಲು ಪಟ್ಟಿ ನೀಡಲಿ” ಎಂದು ತಿರುಗೇಟು ನೀಡಿದರು.
ಬಡವರ ರಕ್ಷಣೆ ನಮ್ಮ ಸರ್ಕಾರದ ಕರ್ತವ್ಯ. ಸಾಲ ವಸೂಲಿ ಹೆಸರಲ್ಲಿ ಮೈಕ್ರೊಫೈನಾನ್ಸ್ ಗಳಿಂದ ಬಡವರಿಗೆ ಆಗುತ್ತಿರುವ ಕಿರುಕುಳ ತಪ್ಪಿಸಲು ನಮ್ಮ ಸರ್ಕಾರ ಸುಗ್ರೀವಾಜ್ಞೆ ರೂಪಿಸಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು. ಸಾಲ ವಸೂಲಿ ಹೆಸರಲ್ಲಿ ಬಡವರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯ ಹಾಗೂ ಸುಗ್ರೀವಾಜ್ಞೆ ಬಗ್ಗೆ ಕೇಳಿದಾಗ, “ಸಾಲ ವಸೂಲಿ ಮಾಡಲು ರೌಡಿಗಳ ಮೂಲಕ ಬೆದರಿಸಿ, ಕಾನೂನು ಕೈಗೆ ತೆಗೆದುಕೊಂಡು, ಬಡವರ ಮೇಲೆ ದಬ್ಬಾಳಿಕೆ ನಡೆಸಲು ನಮ್ಮ ಸರ್ಕಾರ ಅವಕಾಶ ನೀಡುವುದಿಲ್ಲ. ಇದನ್ನು ನಿಯಂತ್ರಿಸಲು ಪೊಲೀಸರಿಗೆ ಹೆಚ್ಚಿನ ಅಧಿಕಾರ ನೀಡಲಾಗುವುದು” ಎಂದು ತಿಳಿಸಿದರು.