ಉಡುಪಿ :
ಉಡುಪಿ ಸಮೀಪದ ಸಮುದ್ರದಲ್ಲಿ ಇಂದು ಘೋರವಾದ ದುರಂತ ಸಂಭವಿಸಿದ್ದು, ನಾಡದೋಣಿ ಮಗುಚಿ ಮೂವರು ಮೀನುಗಾರರು ನೀರು ಪಾಲಾಗಿದ್ದಾರೆ. ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಗಂಗೊಳ್ಳಿಯಲ್ಲಿ ಈ ದುರ್ಘಟನೆ ಸಂಭವಿಸಿದೆ. ನೀರು ಪಾಲಾದ ಮೂವರು ಮೀನುಗಾರರನ್ನು ಸುರೇಶ್ ಖಾರ್ವಿ (45), ರೋಹಿತ್ ಖಾರ್ವಿ (38) ಹಾಗೂ ಜಗ್ಗು ಅಲಿಯಾಸ್ ಜಗದೀಶ್ ಖಾರ್ವಿ (36) ಎಂದು ಗುರುತಿಸಲಾಗಿದೆ.
ಮೀನುಗಾರಿಕೆಗೆ ಈ ಮೂವರು ಮೀನುಗಾರರು ಸಮುದ್ರಕ್ಕೆ ಇಳಿದಿದ್ದರು. ಕಡಲಬ್ಬರ ಕಂಡು ಮೀನುಗಾರರು ವಾಪಸ್ ಆಗುತ್ತಿದ್ದರು. ಈ ವೇಳೆ ಓರ್ವ ಮೀನುಗಾರ ಅಲೆಗಳ ಅಬ್ಬರಕ್ಕೆ ಸಮುದ್ರಕ್ಕೆ ಬಿದ್ದಿದ್ದಾನೆ. ನೀರಿಗೆ ಬಿದ್ದ ಒಬ್ಬನನ್ನು ರಕ್ಷಿಸಲು ಇನ್ನಿಬ್ಬರು ಮುಂದಾಗಿದ್ದಾರೆ. ಈ ವೇಳೆ ಮೂವರೂ ಸಮುದ್ರ ಪಾಲಾಗಿದ್ದಾರೆ. ಈಜು ಗೊತ್ತಿದ್ದರೂ ಮೂವರೂ ಅಲೆಗಳ ಅಬ್ಬರದಿಂದಾಗಿ ದೋಣಿಗೆ ಮರಳಲು ಸಾಧ್ಯವಾಗದೆ ನೀರುಪಾಲಾಗಿದ್ದಾರೆ ಎನ್ನಲಾಗಿದೆ. ಮೂವರಿಗಾಗಿ ಸಮುದ್ರದಲ್ಲಿ ಹುಡುಕಾಟ ನಡೆಸಲಾಗುತ್ತಿದೆ. ಈ ಕುರಿತು ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಲೆನಾಡು ಹಾಗೂ ಕರಾವಳಿಯಲ್ಲಿ ಭಾರಿ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಭಾರಿ ಪ್ರಮಾಣದಲ್ಲಿ ಹಳ್ಳಕೊಳ್ಳ ಮತ್ತು ನದಿಗಳು ತುಂಬಿ ಹರಿಯುತ್ತಿವೆ ಹಾಗೂ ಅಪಾರ ಪ್ರಮಾಣದ ನೀರು ಕಡಲನ್ನು ಸೇರುತ್ತಿದೆ. ಕಡಲ ತೀರದಲ್ಲಿ ಅಲೆಗಳ ಅಬ್ಬರ ಜೋರಾಗಿದ್ದು, ಮೀನುಗಾರಿಕೆಗೆ ತೆರಳದಂತೆ ಎಚ್ಚರಿಕೆ ನೀಡಲಾಗಿದೆ. ಆದರೂ ಎಚ್ಚರಿಕೆಯನ್ನು ನಿರ್ಲಕ್ಷಿಸಿ ಸಮುದ್ರಕ್ಕೆ ಇವರು ತೆರಳಿದ್ದರು ಎನ್ನಲಾಗಿದೆ.








