ಬೆಂಗಳೂರು:
ಚಂದನವನದಲ್ಲಿ ಹೊಸ ಗಾಳಿ ಬೀಸಲು ಕಾರಣವಾಗಿರುವ, ರಾಜ್ ಬಿ. ಶೆಟ್ಟಿ ನಿರ್ಮಾಣದ ‘ಸು ಫ್ರಮ್ ಸೋ’ ಸಿನಿಮಾ 50 ಕೋಟಿ ರೂಪಾಯಿ ಕ್ಲಬ್ ಸೇರಿದೆ. ಅವರು ಈ ಚಿತ್ರದಿಂದ ದೊಡ್ಡ ಗೆಲುವು ಕಂಡಿದ್ದಾರೆ. ನಿರ್ದೇಶಕ ಜೆಪಿ ತುಮಿನಾಡ್ ಅವರ ಮೊದಲ ಪ್ರಯತ್ನದಲ್ಲೇ ಗೆಲುವಿನ ನಗೆ ಬೀರಿದ್ದಾರೆ. ನಗೆಗಡಲಿನಲ್ಲಿ ತೇಲಿಸುತ್ತಾ ಸಮಾಜಕ್ಕೆ ಒಂದು ಸಂದೇಶ ಕೊಡುವ ‘ಸು ಫ್ರಮ್ ಸೋ’ ಚಿತ್ರ ವಿವಿಧ ಹಂತಗಳಲ್ಲಿ ಗಳಿಕೆ ಮಾಡಿದೆ.
‘ಸು ಫ್ರಮ್ ಸೋ’ ಸಿನಿಮಾ ಮೊದಲ ದಿನ (ಜುಲೈ 25) ಕಲೆಕ್ಷನ್ ಮಾಡಿದ್ದು ಕೇವಲ 78 ಲಕ್ಷ ರೂಪಾಯಿ. ಆ ಬಳಿಕ ಸಿನಿಮಾಗೆ ಶೋಗಳ ಸಂಖ್ಯೆ ಹೆಚ್ಚಿದೆ. ಜುಲೈ 27ರಿಂದ ಆಗಸ್ಟ್ 5ರವರೆಗೆ ಸಿನಿಮಾ ನಿರಂತರವಾಗಿ 3 ಪ್ಲಸ್ ಕೋಟಿ ರೂಪಾಯಿ ಕಲೆಕ್ಷನ್ ಮಾಡಿರುವುದು ಚಿತ್ರದ ಹೆಚ್ಚುಗಾರಿಕೆ. ಆಗಸ್ಟ್ 6ರಂದು ಸುಮಾರು ಎರಡೂವರೆ ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಈ ಸಿನಿಮಾದ ಕಲೆಕ್ಷನ್ ಅನೇಕರಿಗೆ ಅಚ್ಚರಿ ತಂದಿದೆ. ಕನ್ನಡ ಸಿನಿಮಾ ನೋಡಲು ಪ್ರೇಕ್ಷಕರಿಲ್ಲ ಎಂದು ಬೇಸರ ಪಟ್ಟುಕೊಳ್ಳುತ್ತಿದ್ದವರು, ಈಗ ಟಿಕೆಟ್ ಸಿಗುತ್ತಿಲ್ಲ ಎಂದು ಒದ್ದಾಡುವ ಸ್ಥಿತಿ ನಿರ್ಮಾಣ ಆಗಿದೆ.
‘ಸು ಫ್ರಮ್ ಸೋ’ ಸಿನಿಮಾ ಈವರೆಗೆ 55 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ ಎಂದು sacnilk ವರದಿ ಹೇಳಿದೆ. ಕನ್ನಡ ಒಂದರಿಂದಲೇ ಚಿತ್ರಕ್ಕೆ ಸರಿ ಸುಮಾರು 50 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಆಗಿದೆ. ವಿದೇಶದಿಂದ ಸಿನಿಮಾಗೆ 4 ಕೋಟಿ ರೂಪಾಯಿ ಹರಿದು ಬಂದಿದೆ. ಮಲಯಾಳಂ ಭಾಷೆಯಿಂದ 1.35 ಕೋಟಿ ರೂಪಾಯಿ ಗಳಿಕೆ ಆಗಿದೆ. ಸಿನಿಮಾದ ಒಟ್ಟಾರೆ ಕಲೆಕ್ಷನ್ ಎಷ್ಟಾಗುತ್ತದೆ ಎಂಬ ಕುತೂಹಲ ಮೂಡಿದೆ.
ಸು ಫ್ರಮ್ ಸೋ’ ಸಿನಿಮಾ ನೋಡಿದ ಅನೇಕರು ಮೆಚ್ಚಿಕೊಂಡಿದ್ದಾರೆ. ಹಲವರು ಎರಡರಿಂದ ಮೂರು ಬಾರಿ ಸಿನಿಮಾ ವೀಕ್ಷಿಸಿ ಬಂದಿದ್ದಾರೆ. ಈ ಚಿತ್ರದಿಂದ ನಿರ್ಮಾಪಕರು ದೊಡ್ಡ ಲಾಭ ಕಂಡಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಅನೇಕ ಕಲಾವಿದರ ವೃತ್ತಿ ಜೀವನಕ್ಕೆ ಹೆಚ್ಚು ಮೈಲೇಜ್ ಸಿಕ್ಕಂತೆ ಆಗಿದೆ.
‘ಸು ಫ್ರಮ್ ಸೋ’ ಸಿನಿಮಾದ ಒಟಿಟಿ ಹಾಗೂ ಟಿವಿ ಹಕ್ಕಿನ ಮಾರಾಟದ ಬಗ್ಗೆ ಒಪ್ಪಂದ ಆಗಿದೆ ಎನ್ನಲಾಗುತ್ತಿದೆ. ಸಿನಿಮಾ ಥಿಯೇಟರ್ನಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿರುವುದರಿಂದ ಸದ್ಯಕ್ಕಂತೂ ಚಿತ್ರವನ್ನು ಒಟಿಟಿಯಲ್ಲಿ ರಿಲೀಸ್ ಮಾಡೋದು ಅನುಮಾನವೇ.








