ಬೆಂಗಳೂರು
ವೈಜ್ಞಾನಿಕವಾಗಿ ಸಾರ್ವಜನಿಕ ಸಾರಿಗೆ ದರ ನಿಗದಿ ಮಾಡಲು ಕರ್ನಾಟಕ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಸಾರಿಗೆ ದರ ನಿಯಂತ್ರಣ ಸಮಿತಿಯನ್ನು ರಚಿಸಿ ಅಧಿಕೃತವಾಗಿ ಸೋಮವಾರ ಗೆಜೆಟ್ ಅಧಿಸೂಚನೆ ಹೊರಡಿಸಿದೆ. ಇದುವರೆಗೆ ಬಸ್ ಪ್ರಯಾಣ ದರ ಏರಿಕೆಗೆ ಯಾವುದೇ ಸ್ವತಂತ್ರ ಸಮಿತಿ ಇರಲಿಲ್ಲ. ಇದೀಗ ಸರ್ಕಾರವು ವೈಜ್ಞಾನಿಕ ಆಧಾರದ ಮೇಲೆ ದರ ನಿಗದಿಪಡಿಸಲು ಸಮಿತಿಯನ್ನು ರಚಿಸಿದೆ. ಹೀಗಾಗಿ ಇನ್ನು ಮುಂದೆ ರಾಜಕೀಯ ಇಚ್ಛಾಶಕ್ತಿಯಂತೆ ಒಟ್ಟಾರೆ ಬಸ್ ಟಿಕೆಟ್ ದರ ಏರಿಕೆ ಮಾಡಲು ಸಾಧ್ಯವಾಗದು. ರಾಜಕೀಯ ಒತ್ತಡ ಅಥವಾ ತಾತ್ಕಾಲಿಕ ನಿರ್ಧಾರಗಳಿಂದ ಬಸ್ ದರ ಏರಿಕೆ ಸಾಧ್ಯವಾಗುವುದಿಲ್ಲ.
ಸಾರಿಗೆ ದರ ನಿಯಂತ್ರಣ ಸಮಿತಿ ರಚಿಸುವ ಬಗ್ಗೆ ಸೆಪ್ಟೆಂಬರ್ ತಿಂಗಳಲ್ಲಿ ಸರ್ಕಾರ ಕರಡು ಅಧಿಸೂಚನೆ ಹೊರಡಿಸಿ, ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಿತ್ತು. ಈಗ ಸರ್ಕಾರವು ಅಂತಿಮ ಗೆಜೆಟ್ ನೋಟಿಫಿಕೇಶನ್ ಹೊರಡಿಸಿದೆ. ಇದಕ್ಕಾಗಿ ಕರ್ನಾಟಕ ಮೋಟಾರು ವಾಹನ ನಿಯಮಗಳು 1989 ರಲ್ಲಿ ತಿದ್ದುಪಡಿ ಮಾಡಲಾಗಿದೆ.
ಕಾಲಕಾಲಕ್ಕೆ ಹೆಚ್ಚಳವಾಗುವ ಡೀಸೆಲ್ ಬೆಲೆ ಮತ್ತು ಇತರೆ ವೆಚ್ಚವನ್ನು ಸರಿದೂಗಿಸಲು ಟಿಕೆಟ್ ದರ ಹಚ್ಚಿಸುವ ಅನಿವಾರ್ಯತೆಯ ಕಾರಣ ಸರ್ಕಾರ ಈ ಸಮಿತಿ ರಚನೆಗೆ ಮುಂದಾಗಿದೆ. ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ (KERC) ಮಾದರಿಯಲ್ಲೇ ಸಾರಿಗೆ ದರ ನಿಯಂತ್ರಣ ಸಮಿತಿ ರಚನೆಯಾಗಲಿದೆ.
ಸಾರಿಗೆ ದರ ನಿಯಂತ್ರಣ ಸಮಿತಿಯಲ್ಲಿ ಅಧ್ಯಕ್ಷರು ಹಾಗೂ ಇಬ್ಬರು ಸದಸ್ಯರು ಇರಲಿದ್ದು, ಅಧ್ಯಕ್ಷರಾಗಲು ಸರ್ಕಾರದ ನಿವೃತ್ತ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಥವಾ ಕರ್ನಾಟಕ ಹೈಕೋರ್ಟ್ನ ನಿವೃತ್ತ ನ್ಯಾಯಾಧೀಶರು ಅರ್ಹರಾಗಿರುತ್ತಾರೆ. ಒಬ್ಬ ಸದಸ್ಯರು ಕಾನೂನು ಅಥವಾ ಆಡಳಿತ ಹಿನ್ನೆಲೆಯುಳ್ಳ ನಿವೃತ್ತ ಪ್ರಧಾನ ಕಾರ್ಯದರ್ಶಿ ಅಥವಾ ಕಾರ್ಯದರ್ಶಿಯಾಗಿರಬೇಕು. ಮತ್ತೊಬ್ಬ ಸದಸ್ಯರು ಕೈಗಾರಿಕಾ ಅಥವಾ ಹಣಕಾಸು ತಜ್ಞರಾಗಿರಬೇಕು. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಸದಸ್ಯ-ಕಾರ್ಯದರ್ಶಿ ಆಗಿರುತ್ತಾರೆ.








