ಬೆಂಗಳೂರು :
ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳ ಮೇಲೆ ಆರೋಪ ನಿಗದಿಯಾಗಲಿದ್ದು ಬೆಂಗಳೂರಿನ ಸಿಸಿಹೆಚ್ ನ್ಯಾಯಾಲಯಕ್ಕೆ ಡಿಗ್ಯಾಂಗ್ ಇಂದು ಹಾಜರಾಗಲಿದೆ. ಇಂದು ಕೋರ್ಟ್ನಲ್ಲಿ ಕೊಲೆ ಕೇಸ್ ಸಂಬಂಧ ವಿಚಾರಣೆ ನಡೆಯಲಿದ್ದು, ಕೊಲೆ ಪ್ರಕರಣದ ಆರೋಪಿಗಳ ಮೇಲೆ ದೋಷಾರೋಪ ನಿಗದಿಯಾಗಲಿದೆ ಎನ್ನಲಾಗಿದೆ.
ಆರೋಪ ನಿಗದಿಯ ಬಳಿಕ ಬಳಿಕ ಟ್ರಯಲ್‌ಗೂ ದಿನಾಂಕ ಫಿಕ್ಸ್ ಆಗಲಿದೆ ಎನ್ನಲಾಗಿದೆ. ದರ್ಶನ್ ಕಾನೂನು ಹೋರಾಟಕ್ಕೆ ಸಜ್ಜಾಗಬೇಕಿರುವ ಸಂದರ್ಭದಲ್ಲಿ ನಿನ್ನೆಯಷ್ಟೇ ದರ್ಶನ್ ಪತ್ನಿ ವಿಜಯಲಕ್ಷ್ಮಿ ಇನ್‌ಸ್ಟಾದಲ್ಲಿ ಮಹತ್ವದ ಸಂದೇಶವನ್ನು ಪೋಸ್ಟ್ ಮಾಡಿದ್ದರು.ಕಾಮಾಕ್ಯ ದೇವಿಯ ದೇವಸ್ಥಾನದಲ್ಲಿ ದೇವಿಗೆ ಪ್ರಿಯ ಕಮಲದ ಹೂ ಹಿಡಿದ ಫೋಟೋ ಪೋಸ್ಟ್ ಮಾಡಿರುವ ವಿಜಯಲಕ್ಷ್ಮಿ, ನಮಗೆ ಕಾಣದೇ ಇರುವುದು ಬಹಳಷ್ಟಿದೆ, ಆದ್ದರಿಂದ ಯಾವಾಗಲೂ ರಕ್ಷಣೆಗಾಗಿ ಪ್ರಾರ್ಥಿಸಿ ಎಂಬ ಸಂದೇಶದೊಂದಿಗೆ ಸ್ಟೋರಿ ಪೋಸ್ಟ್ ಮಾಡಿದ್ದರು.
ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ 17 ಆರೋಪಿಗಳು ಇಂದು ಕೋರ್ಟ್ಗೆ ಕಡ್ಡಾಯವಾಗಿ ಹಾಜರಾಗಬೇಕಿದೆ. ಒಂದು ವೇಳೆ ದೋಷಾರೋಪ ಒಪ್ಪಿಕೊಂಡ್ರೆ ಆರೋಪಿಗಳಿಗೆ ಶಿಕ್ಷೆ ಪ್ರಕಟವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಕೊಲೆ ಕೇಸ್ಗೆ ಸಂಬಂಧಿಸಿದಂತೆ ಪೊಲೀಸರು ಕಲೆ ಹಾಕಿರುವ ಟೆಕ್ನಿಕಲ್ ಎವಿಡೆನ್ಸ್ಗಳು ದರ್ಶನ್‌ಗೆ ಮುಳುವಾಗುವ ಸಾಧ್ಯತೆ ಇದೆ ಎನ್ನಲಾಗ್ತಿದೆ. ಸದ್ಯ ದರ್ಶನ್ ಪರಪ್ಪನ ಅಗ್ರಹಾರ ಜೈಲಲ್ಲಿದ್ದಾರೆ. ಹಿಂದೆ ದರ್ಶನ್‌ಗೆ ಜಾಮೀನು ಕೊಡಿಸಲು ವಿಜಯಲಕ್ಷ್ಮಿ ಕಾನೂನು ಹೋರಾಟದ ಜೊತೆ ದೇವರಿಗೆ ಹರಕೆ ಹೊತ್ತಿದ್ದರು. ಪೂಜೆ ಪುನಸ್ಕಾರ ಸಲ್ಲಿಸಿದ್ದರು. ಕಾಮಾಕ್ಯ ದೇವಿ ದರ್ಶನ ಮಾಡಿದ್ದರು. ಇದೀಗ ದರ್ಶನ್ ಪ್ರಕರಣದಲ್ಲಿ ಮಹತ್ವದ ಘಟ್ಟ ತಲುಪಿದೆ.
ಒಂದೊಮ್ಮೆ ಆರೋಪಿಗಳು ಆರೋಪಗಳನ್ನು ನಿರಾಕರಿಸಿದರೆ ಸಾಕ್ಷ್ಯಗಳ ವಿಚಾರಣೆ ನಡೆಯಲಿದೆ. ಸಾಕ್ಷ್ಯಗಳ ವಿಚಾರಣೆಗೆ ದಿನಾಂಕವನ್ನು ನಿಗದಿ ಪಡಿಸಲಾಗುತ್ತದೆ. ಈ ಪ್ರಕರಣದಲ್ಲಿ ಸಾಕಷ್ಟು ಸಂಖ್ಯೆಯ ಸಾಕ್ಷ್ಯಗಳು ಇರುವ ಕಾರಣ ಸಹಜವಾಗಿಯೇ ಎಲ್ಲರ ವಿಚಾರಣೆ, ಮರು ವಿಚಾರಣೆಗಳಿಗೆ ಸುಮಾರು ಒಂದಿರಂದ ಎರಡು ವರ್ಷ ಸಮಯ ಹಿಡಿಯುವ ಸಾಧ್ಯತೆ ಇದೆ.
ದರ್ಶನ್ ವಿರುದ್ಧ ಯಾವ ಯಾವ ಆರೋಪಗಳನ್ನು ಹೊರಿಸಲಿದ್ದಾರೆ ಎಂಬುದು ಕುತೂಹಲಕಾರಿ ವಿಷಯವಾಗಿದೆ. ಈಗ ಜೈಲಿನಲ್ಲಿರುವ ಏಳು ಜನರು ಮಾತ್ರವೇ ಅಲ್ಲದೆ ಪ್ರಕರಣದ ಎಲ್ಲ ಆರೋಪಿಗಳ ಮೇಲೂ ದೋಷಾರೋಪದ ನಿಗದಿ ಆಗಲಿದೆ. ಇವರಲ್ಲಿ ಕೆಲವರ ಹೆಸರನ್ನು ಕೈಬಿಡುವ ಸಾಧ್ಯತೆಯೂ ಸಹ ಇದೆ.ದರ್ಶನ್ ಪರ ವಕೀಲರು ಈ ಹಿಂದೆಯೇ ವಿಚಾರಣೆ ವೇಳೆ ಶೀಘ್ರವಾಗಿ ದೋಷಾರೋಪ ನಿಗದಿ ಮಾಡಿ ಸಾಕ್ಷ್ಯಗಳ ವಿಚಾರಣೆ ಆರಂಭ ಮಾಡುವಂತೆ ಒತ್ತಾಯ ಮಾಡಿದ್ದರು. ಆದರೆ ಸರ್ಕಾರಿ ವಕೀಲರು ದೋಷಾರೋಪ ನಿಗದಿಗೆ ಸಮುಯ ಕೇಳಿದ್ದರು. ದರ್ಶನ್ ಪರ ವಕೀಲರು, ತಾವು ವಿಚಾರಣೆ ಎದುರಿಸಿಯೇ ನ್ಯಾಯಾಲಯದಿಂದ ಹೊರಬರುವುದಾಗಿ ಹೇಳಿದ್ದರು. ಅಲ್ಲದೆ, ನ್ಯಾಯಾಧೀಶರು ಸಹ, ಎರಡೂ ಕಡೆಯವರು ಸಾಕ್ಷ್ಯಗಳ ವಿಚಾರಣೆಗೆ ಸಹಕರಿಸಬೇಕು ಎಂದು ಮನವಿಯನ್ನು ಸಹ ಮಾಡಿದ್ದರು.








