ಎಸ್‌ಐಟಿ ವಿಚಾರಣೆಗೆ ಹಾಜರಾದ ನಟ ವಿಜಯ್ ದೇವರಕೊಂಡ

ಹೈದರಾಬಾದ್: 

    ಆನ್‌ಲೈನ್ ಬೆಟ್ಟಿಂಗ್ ಅಪ್ಲಿಕೇಶನ್‌ಗಳನ್ನು  ಪರ ಪ್ರಚಾರ ನಡೆಸಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಟಾಲಿವುಡ್ ನಟ ವಿಜಯ್ ದೇವರಕೊಂಡ  ಮಂಗಳವಾರ ತೆಲಂಗಾಣ ಸರ್ಕಾರದ ವಿಶೇಷ ತನಿಖಾ ತಂಡದ  ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ ಎಂದು ಪೊಲೀಸ್ ಮೂಲಗಳು ಖಚಿತಪಡಿಸಿವೆ.ಈ ಆಪ್‌ಗಳನ್ನು ಅನುಮೋದಿಸುವ ಅಥವಾ ಪ್ರಚಾರ ಮಾಡುವಲ್ಲಿ ನಟ ಭಾಗಿಯಾಗಿದ್ದಾರೆ ಎಂಬ ಆರೋಪದ ಬಗ್ಗೆ ಅಧಿಕಾರಿಗಳು ಅವರನ್ನು ಪ್ರಶ್ನಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಇಂತಹ ಆ್ಯಪ್‌ಗಳ ಪರ ಪ್ರಚಾರ ನಡೆಸಿದ ರಾಣಾ ದಗ್ಗುಬಾಟಿ, ಪ್ರಕಾಶ್ ರಾಜ್ ಮತ್ತು ಮಂಚು ಲಕ್ಷ್ಮಿ ಸೇರಿದಂತೆ ಇತರ ಸೆಲೆಬ್ರಿಟಿಗಳು ತನಿಖೆಯಲ್ಲಿದ್ದಾರೆ. ತೆಲಂಗಾಣ ರಾಜ್ಯ ಗೇಮಿಂಗ್ ಕಾಯ್ದೆ ಮತ್ತು ಹಣ ವರ್ಗಾವಣೆ ತಡೆ ಕಾಯ್ದೆ ಸೇರಿದಂತೆ ಹಲವು ಕಾನೂನುಗಳ ಅಡಿಯಲ್ಲಿ ದಾಖಲಾದ ಪ್ರಕರಣಗಳನ್ನು ತನಿಖೆ ಒಳಗೊಂಡಿದೆ.

    ತೆಲಂಗಾಣ ಸರ್ಕಾರವು ರಾಜ್ಯದಲ್ಲಿ ಅಕ್ರಮ ಬೆಟ್ಟಿಂಗ್ ಚಟುವಟಿಕೆಗಳನ್ನು ನಿಭಾಯಿಸಲು ನಿರ್ದಿಷ್ಟವಾಗಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರ (ಸಿಐಡಿ) ಮೇಲ್ವಿಚಾರಣೆಯಲ್ಲಿ ಎಸ್‌ಐಟಿಯನ್ನು ರಚಿಸಿತ್ತು. ಹೆಚ್ಚುತ್ತಿರುವ ಆನ್‌ಲೈನ್ ಬೆಟ್ಟಿಂಗ್ ಅಪ್ಲಿಕೇಶನ್ ಪ್ರಕರಣಗಳ ಬಗ್ಗೆ ಸಮಗ್ರ ತನಿಖೆ ನಡೆಸುವುದು ಮತ್ತು ಉಲ್ಲಂಘಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವ ಕಾರ್ಯವನ್ನು ಈ ತಂಡಕ್ಕೆ ವಹಿಸಲಾಗಿದೆ. 

    ಅಪ್ಲಿಕೇಶನ್ ಪ್ರಚಾರ ತಂತ್ರಗಳು, ಹಣಕಾಸಿನ ವಹಿವಾಟುಗಳು ಮತ್ತು ಈ ಪ್ಲಾಟ್‌ಫಾರ್ಮ್‌ಗಳನ್ನು ನಿರ್ವಹಿಸುವ ವ್ಯಕ್ತಿಗಳು ಅಥವಾ ಗುಂಪುಗಳೊಂದಿಗಿನ ಸಂಪರ್ಕಗಳು ಸೇರಿದಂತೆ ಪ್ರಕರಣಗಳ ಬಹು ಅಂಶಗಳನ್ನು ಎಸ್‌ಐಟಿ ಪರಿಶೀಲಿಸುತ್ತಿದೆ. ಆನ್‌ಲೈನ್ ಬೆಟ್ಟಿಂಗ್ ಅಪ್ಲಿಕೇಶನ್‌ಗಳ ಪ್ರಚಾರವು, ಭಾರತೀಯ ಕಾನೂನಿನಡಿಯಲ್ಲಿ ಶಿಕ್ಷಾರ್ಹ ಅಪರಾಧವಾಗಿದೆ. ಅಂತಹ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಸೆಲೆಬ್ರಿಟಿಗಳು ಮತ್ತು ಪ್ರಭಾವಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಅಧಿಕಾರಿಗಳು ನಿರ್ಧರಿಸಿದ್ದಾರೆ. ಅಕ್ರಮ ಬೆಟ್ಟಿಂಗ್ ಆರ್ಥಿಕ ಮತ್ತು ಸಾಮಾಜಿಕ ಪರಿಣಾಮಗಳನ್ನು ಬೀರುವ ಗಂಭೀರ ಅಪರಾಧ ಎಂದು ತೆಲಂಗಾಣ ಸರ್ಕಾರ ಪ್ರತಿಪಾದಿಸುತ್ತಲೇ ಇದೆ.

    ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ, ನಟ ವಿಜಯ್ ದೇವರಕೊಂಡ ಅವರ ಹೊಸ ಸಿನಿಮಾ ಇತ್ತೀಚೆಗೆ ಸೆಟ್ಟೇರಿದೆ.‌ ಹೈದರಾಬಾದ್‍ನಲ್ಲಿ ಅಕ್ಟೋಬರ್ 11 ರಂದು ಮುಹೂರ್ತ ನೆರವೇರಿದೆ. ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಯಶಸ್ವಿ ನಿರ್ಮಾಪಕರಾದ ದಿಲ್ ರಾಜು ಮತ್ತು ಶಿರೀಶ್ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ರಾಜಾ ವಾರು ರಾಣಿ ಗಾರು ಚಿತ್ರದ ಮೂಲಕ ಖ್ಯಾತಿ ಪಡೆದ ಪ್ರತಿಭಾನ್ವಿತ ನಿರ್ದೇಶಕ ರವಿಕಿರಣ್ ಕೋಲಾ ಈ ಪ್ರಾಜೆಕ್ಟ್ ಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.

   ವಿಜಯ್ ದೇವರಕೊಂಡ ಇತ್ತೀಚೆಗೆ ಮಾಡಿದ ಸಿನಿಮಾಗಳಿಗೆ ಸೋಲಿನ ಮೇಲೆ ಸೋಲುಗಳು ಎದುರಾಗುತ್ತಲೇ ಇವೆ. ಆದರೆ, ಇದೀಗ ಅವರ ಹೊಸ ಸಿನಿಮಾದ ಬಗ್ಗೆ ಭಾರಿ ನಿರೀಕ್ಷೆಗಳು ಮೂಡಿವೆ. ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಮೂಡಿ ಬರುತ್ತಿರುವ 59ನೇ ಚಿತ್ರ ಇದಾಗಿದೆ. ವಿಜಯ್ ದೇವರಕೊಂಡಗೆ ಜೋಡಿಯಾಗಿ ಮಹಾನಟಿ ಖ್ಯಾತಿಯ ಕೀರ್ತಿ ಸುರೇಶ್ ಸಾಥ್ ಕೊಡಲಿದ್ದಾರೆ.

Recent Articles

spot_img

Related Stories

Share via
Copy link