ಕೊರಟಗೆರೆ :-
ರಾಜಕಾರಣದಲ್ಲಿ ಏಳುಬೀಳು ಕಂಡಿರುವ ನನಗೆ ರಾಜಕಾರಣ ಪರಿಪಕ್ವವಾಗಿದೆ, 2 ಬಾರಿ ವಿಧಾನಸಭಾ ಚುನಾವಣೆಯನ್ನು ಎದುರಿಸಿ ಕಡಿಮೆ ಅಂತರದಲ್ಲಿ ಹಿನ್ನಡೆ ಕಂಡಿರುವ ನನಗೆ ಕೊರಟಗೆರೆ ವಿಧಾನಸಭಾ ಕ್ಷೇತ್ರದ ನಾಡಿಮಿಡಿತ ಅರಿತಿರುವುದರಿಂದ ಮುಂದಿನ ವಿಧಾನಸಭಾ ಕ್ಷೇತ್ರ ಸಾಮಾನ್ಯ ಕ್ಷೇತ್ರವಾದಲ್ಲಿ ನಾನಾಗಲಿ ಅಥವಾ ನನ್ನ ಮಡದಿಯಾಗಲಿ ಕಣಕಿಳಿಯುವುದು ನಿಶ್ಚಿತ ಎಂದು ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಪಿ ಎನ್ ಕೃಷ್ಣಮೂರ್ತಿ ಅಭಿಪ್ರಾಯಪಟ್ಟರು.
ಅವರು ಭಾನುವಾರ ಕೊರಟಗೆರೆ ತಾಲೂಕಿನ ಚಿಕ್ಕದೊಡ್ಡವಾಡಿ ಗ್ರಾಮದ ದೇವಸ್ಥಾನ, ಸಂಕೇನಹಳ್ಳಿ ಗಣಪತಿ ದೇವಸ್ಥಾನ, ದೊಡ್ಡಪಾಲನಹಳ್ಳಿ ರಾಮದೇವರ ದೇವಸ್ಥಾನಗಳ ಅಭಿವೃದ್ಧಿ ಕಾರ್ಯಗಳನ್ನು ವೀಕ್ಷಿಸಿ ಅಭಿವೃದ್ಧಿ ಕಾರ್ಯಗಳಿಗೆ ಕೈಜೋಡಿಸುವ ಭರವಸೆ ನೀಡಿದ್ದಲ್ಲದೆ ಕೊರಟಗೆರೆ ಪಟ್ಟಣದಲ್ಲಿ ಆಯೋಜಿಸಲಾಗಿದ್ದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಬಹುಮಾನಕ್ಕೆ ಸಂಬಂಧಪಟ್ಟಂತೆ 50,000 ವಿತರಣೆ ಮಾಡಿ ಅಭಿವೃದ್ಧಿ ವಿಚಾರದಲ್ಲಿ ಕೊರಟಗೆರೆ ಜನತೆಯ ಜೊತೆಯಲ್ಲಿ ಕೈಜೋಡಿಸುವುದಾಗಿ ಮನದಾಳದ ಇಂಗಿತ ವ್ಯಕ್ತಪಡಿಸಿದರು.
ಕೊರಟಗೆರೆ ಕ್ಷೇತ್ರದಲ್ಲಿ 2003-04ರ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಅಂದಿನ ಸಿ . ಚೆನ್ನಿಗಪ್ಪ ನವರ ವಿರುದ್ಧ ತೊಡೆತೊಟ್ಟಿ ಮೂರು ಜನ ಜಿಲ್ಲಾ ಪಂಚಾಯಿತಿ ಸದಸ್ಯರು ಕಾಂಗ್ರೆಸ್ ನಿಂದ ಆಯ್ಕೆ ಆದದ್ದನ್ನು ನೆನಪಿಸಿಕೊಂಡ ಪಿ ಎನ್ ಕೃಷ್ಣಮೂರ್ತಿಯವರು 2008ರ ಚುನಾವಣೆ ಮೀಸಲು ಕ್ಷೇತ್ರವಾಗದಿದ್ದರೆ ಡಾ. ಜಿ ಪರಮೇಶ್ವರ್ ಗೆಲ್ಲುವ ಜಾಗದಲ್ಲಿ ನಾನು ಅಂದು ವಿಧಾನ ಸಭಾ ಸದಸ್ಯನಾಗಿ ಆಯ್ಕೆಯಾಗುತ್ತಿದ್ದೆ, ನನ್ನ ದುರಾದೃಷ್ಟಕರ ಕೊರಟಗೆರೆ ಮೀಸಲು ಕ್ಷೇತ್ರದ ಕಾರಣ ನನ್ನ ರಾಜಕಾರಣ ಹಿನ್ನಡೆಯಾಯಿತು, ನನ್ನ ರಾಜಕೀಯ ಗುರು ಆರ್ ಎಲ್ ಜಾಲಪ್ಪನವರು ನಾನು ಶಾಸಕನಾಗಬೇಕು ಎಂದು ಕನಸು ಕಂಡಿದ್ದರು ಅದು ನನಸಾಗಲಿಲ್ಲ ಅದು ನನ್ನ ದುರಾದೃಷ್ಟಕರ ಎಂದು ಬೇಸರ ವ್ಯಕ್ತಪಡಿಸಿದ್ದರು.
ಕೊರಟಗೆರೆ ತಾಲೂಕಿನ ಇತಿಹಾಸ ಪ್ರಸಿದ್ಧ ಮಾವತ್ತೂರಿನ ಶ್ರೀ ಅರಸೇಶ್ವರಿ ದೇವಸ್ಥಾನದ ಬಳಿ 50 ಲಕ್ಷ ಕ್ಕೂ ಹೆಚ್ಚು ಮೌಲ್ಯದ ಸಮುದಾಯ ಭವನವನ್ನು ನಮ್ಮ ತಂದೆ ತಾಯಿಯ ಹೆಸರಿನಲ್ಲಿ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಕೊರಟಗೆರೆ ತಾಲೂಕಿನ ಬಹಳಷ್ಟು ಹಿಂದುಳಿದ ಗ್ರಾಮಗಳ ದೇವಸ್ಥಾನಗಳ ಜೀರ್ಣೋದ್ಧಾರಗಳ ಜೊತೆಗೆ ಬಡಜನರ ಶುಭಕಾರ್ಯಗಳ ಹಿತದೃಷ್ಟಿಯಿಂದ ಸಮುದಾಯ ಭವನಗಳ ಅಭಿವೃದ್ಧಿಗೆ ಕೈಜೋಡಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ತಾ. ಪಂ ಅಧ್ಯಕ್ಷ ಆರ್ ಎಸ್ ರಾಜಣ್ಣ, ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ರಮೇಶ್ , ಲಂಬು ರಾಜಣ್ಣ, ಪ.ಪಂ ಮಾಜಿ ಸದಸ್ಯ ರಘು , ಮುಖಂಡರುಗಳಾದ ಕರಿಬಸಯ್ಯ, ರಫೀಕ್ ,ಆರಾಧ್ಯಣ್ಣ, ಕಾಂತಣ್ಣ, ರಂಗನಾಥ್, ಶಿವಕುಮಾರ್, ಚೌಡಪ್ಪ ಸೇರಿದಂತೆ ಹಲವರು ಹಾಜರಿದ್ದರು .








