ಮುಂಬಯಿ
ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಶಿಖರ್ ಧವನ್ ಅವರು ಐರ್ಲೆಂಡ್‌ನ ಸೋಫಿ ಶೈನ್ ಜತೆ ಡೇಟಿಂಗ್ ಮಾಡುತ್ತಿರುವ ವಿಚಾರವನ್ನು ಕಳೆದ ವರ್ಷವೇ ಖಚಿತಪಡಿಸಿದ್ದರು. ಇದೀಗ ಈ ಜೋಡಿ ಸದ್ಯದಲ್ಲೇ ಹಸೆಮಣೆ ಏರುತ್ತಿದ್ದಾರೆ. ಮೂಲಗಳ ಪ್ರಕಾರ, ಫೆಬ್ರವರಿ ಮೂರನೇ ವಾರದಲ್ಲಿ ದೆಹಲಿ-ಎನ್‌ಸಿಆರ್‌ನಲ್ಲಿ ಅದ್ದೂರಿ ವಿವಾಹ ಸಮಾರಂಭ ನಡೆಯಲಿದ್ದು, ಕ್ರಿಕೆಟ್ ಮತ್ತು ಬಾಲಿವುಡ್‌ನ ಸ್ಟಾರ್‌ಗಳು ಭಾಗವಹಿಸಲಿದ್ದಾರೆ. ವಿವಾಹ ಸಮಾರಂಭದ ಸಿದ್ಧತೆಗಳು ಈಗಾಗಲೇ ನಡೆಯುತ್ತಿವೆ, ಆದರೂ ದಂಪತಿಗಳು ಹೆಚ್ಚಿನ ವಿವರಗಳನ್ನು ಗೌಪ್ಯವಾಗಿಟ್ಟಿದ್ದಾರೆ.
ಧವನ್ ಈ ಹಿಂದೆ ಆಸ್ಟ್ರೇಲಿಯಾ ಮೂಲದ ಆಯೇಶಾ ಮುಖರ್ಜಿ ಜತೆ ಮದುವೆಯಾಗಿ ವಿಚ್ಛೇದನ ಪಡೆದಿದ್ದರು. ಪತ್ನಿಯ ಅತಿಯಾದ ಕಿರುಕುಳದಿಂದ ಬೇಸತ್ತು ಧವನ್ ಕೊನೆಗೆ ಕೋರ್ಟ್ ಮೊರೆ ಹೋಗಿ ವಿಚ್ಛೇದನ ಪಡೆದಿದ್ದರು. 2024 ಅಕ್ಟೋಬರ್ 4 ರಂದು ದೆಹಲಿಯ ಕೌಟುಂಬಿಕ ನ್ಯಾಯಾಲಯವು ಧವನ್‌ಗೆ ಆಯೇಷಾ ಮುಖರ್ಜಿಯಿಂದ ಅಧಿಕೃತವಾಗಿ ವಿಚ್ಛೇದನವನ್ನು ನೀಡಿತ್ತು.
ಐರ್ಲೆಂಡ್‌ನ ಸೋಫಿ ಶೈನ್ ಜತೆ ಧವನ್ ಕಳೆದೊಂದು ವರ್ಷದಿಂದ ಡೇಟಿಂಗ್ ನಡೆಸುತ್ತಿದ್ದರು. ಅಲ್ಲದೆ ಹಲವು ಬಾರಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರು. ಶಿಖರ್ ಮತ್ತು ಸೋಫಿ ಕೆಲವು ವರ್ಷಗಳ ಹಿಂದೆ ದುಬೈನಲ್ಲಿ ಭೇಟಿಯಾಗಿದ್ದರು. ಅಲ್ಲಿ ಅವರ ಸ್ನೇಹ ಕ್ರಮೇಣ ಸಂಬಂಧವಾಗಿ ಬದಲಾಯಿತು. ಇಬ್ಬರೂ ಒಂದು ವರ್ಷಕ್ಕೂ ಹೆಚ್ಚು ಕಾಲ ಒಟ್ಟಿಗೆ ವಾಸಿಸುತ್ತಿದ್ದಾರೆ. ಧವನ್ ಜತೆಗೆ ಆತ್ಮೀಯವಾಗಿರುವ ಫೋಟೊಗಳನ್ನು ಕೂಡ ಸೋಫಿ ಶೈನ್ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಚಿಕೊಳ್ಳುತ್ತಿದ್ದಾರೆ.
1990 ರಲ್ಲಿ ಜನಿಸಿದ ಐರಿಶ್ ಪ್ರಜೆ ಸೋಫಿ ಶೈನ್, ಪ್ರಸ್ತುತ ಶಿಖರ್ ಧವನ್ ಫೌಂಡೇಶನ್‌ನ ಮುಖ್ಯಸ್ಥರಾಗಿದ್ದಾರೆ. ಇದು ಅವರ ಸಂಘಟನೆಯಾದ ಡಾ ಒನ್ ಸ್ಪೋರ್ಟ್ಸ್‌ನ ಲೋಕೋಪಕಾರಿ ಅಂಗವಾಗಿದೆ. ಜುಲೈ 2025 ರಲ್ಲಿ, ಅವರು ಸಂಘಟನೆಯ ಮುಖ್ಯ ಕಾರ್ಯಾಚರಣಾ ಅಧಿಕಾರಿ (COO) ಆಗಿ ಅಧಿಕಾರ ವಹಿಸಿಕೊಂಡರು. ಪ್ರಭಾವಶಾಲಿ ವೃತ್ತಿಪರ ಹಿನ್ನೆಲೆಯನ್ನು ಹೊಂದಿರುವ ಸೋಫಿ, ಈ ಹಿಂದೆ ಬಹುರಾಷ್ಟ್ರೀಯ ಸಂಸ್ಥೆಯೊಂದಕ್ಕೆ ಉತ್ಪನ್ನ ಸಲಹೆಗಾರರಾಗಿ ಕೆಲಸ ಮಾಡಿದ್ದರು. ಅವರು ಲಿಮೆರಿಕ್ ಇನಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಮಾರ್ಕೆಟಿಂಗ್ ಮತ್ತು ಮ್ಯಾನೆಜ್‌ಮೆಂಟ್ ಪದವಿ ಪಡೆದಿದ್ದಾರೆ.
ಸೋಫಿ ಐರ್ಲೆಂಡ್‌ನ ಕ್ಯಾಸಲ್‌ರಾಯ್ ಕಾಲೇಜಿನಿಂದ ಪದವಿ ಪಡೆದರು ಮತ್ತು ಮಾರ್ಚ್ 2025 ರವರೆಗೆ ಅಬುಧಾಬಿಯ ನಾರ್ದರ್ನ್ ಟ್ರಸ್ಟ್ ಕಾರ್ಪೊರೇಷನ್‌ನಲ್ಲಿ ಎರಡನೇ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಸಾಮಾಜಿಕ ಜಾಲತಾಣಗಳಲ್ಲಿ ಪ್ರಬಲವಾಗಿದ್ದು, ಇನ್‌ಸ್ಟಾಗ್ರಾಮ್‌ನಲ್ಲಿ 343,000 ಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ, ಅವರು ಧವನ್ ಜತೆಗಿನ ತಮ್ಮ ಜೀವನದ ಕೆಲವು ಕ್ಷಣಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ನಿಯಮಿತವಾಗಿ ಪೋಸ್ಟ್ ಮಾಡಿದ್ದಾರೆ.
ಶಿಖರ್ ಧವನ್ ಅವರು 2024 ಆಗಸ್ಟ್‌ನಲ್ಲಿ ಎಲ್ಲ ಮಾದರಿಯ ಅಂತಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಹೇಳಿದ್ದರು. ಭಾರತ ಪರ ಧವನ್ ಒಟ್ಟು 167 ಏಕದಿನ ಪಂದ್ಯಗಳನ್ನು ಆಡಿದ್ದು, 6793 ರನ್ ಬಾರಿಸಿದ್ದಾರೆ. ಇದರಲ್ಲಿ 39 ಅಧರ್ಶತಕ ಮತ್ತು 17 ಶತಕ ಒಳಗೊಂಡಿದೆ. 143 ರನ್ ಅವರ ಗರಿಷ್ಠ ಮೊತ್ತವಾಗಿದೆ. ಟೆಸ್ಟ್ ಕ್ರಿಕೆಟ್ನಲ್ಲಿ 34 ಪಂದ್ಯ ಆಡಿ 2315 ಗಳಿಸಿದ್ದಾರೆ. 7 ಶತಕ ಮತ್ತು 5 ಅರ್ಧಶತಕ ಒಳಗೊಂಡಿದೆ. ಟಿ20ಯಲ್ಲಿ ಉತ್ತಮ ದಾಖಲೆ ಹೊಂದಿರುವ ಧವನ್ 68 ಪಂದ್ಯ ಆಡಿ 1759 ರನ್ ಕಲೆಹಾಕಿದ್ದಾರೆ. 11 ಅರ್ಧಶತಕ ಬಾರಿಸಿದ್ದಾರೆ.








