ಕೂದಲು ನೋಡಿ ಮೆಚ್ಚಿ ಮದುವೆಯಾದವಳಿಗೆ ಕಾದಿತ್ತು ಶಾಕ್; ಬೋಳು ತಲೆ ಪತಿ ವಿರುದ್ಧ ದೂರು ದಾಖಲಿಸಿದ ಪತ್ನಿ

ನೋಯ್ಡಾ:

     ದಪ್ಪ ಕೂದಲು ಇರುವುದಾಗಿ ಬಿಂಬಿಸಿ ವಂಚಿಸಿದ ಪತಿಯ ವಿರುದ್ಧ ಮಹಿಳೆಯೊಬ್ಬರು ದೂರು ದಾಖಲಿಸಿರುವ ಘಟನೆ ನೋಯ್ಡಾದಲ್ಲಿ ನಡೆದಿದೆ. ತನ್ನ ಗಂಡ ಬೋಳು ತಲೆಯನ್ನು  ಮರೆ ಮಾಡಿ ದಪ್ಪ ಕೂದಲು ಇದೆ ಎಂಬುದಾಗಿ ಬಿಂಬಿಸಿದ್ದಾನೆ. ಅಲ್ಲದೆ ತನ್ನ ಆದಾಯ, ಶೈಕ್ಷಣಿಕ ಹಿನ್ನೆಲೆಯ ಬಗ್ಗೆಯೂ ಸುಳ್ಳು ಹೇಳಿ ಮದುವೆಯಾಗಿದ್ದಾನೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ. 2024ರ ಜನವರಿಯಲ್ಲಿ ತಮ್ಮ ವಿವಾಹವಾಗಿದ್ದು, ಆತ ಅಂತಾರಾಷ್ಟ್ರೀಯ ಮಾದಕವಸ್ತು ಕಳ್ಳಸಾಗಣೆಯಲ್ಲೂ  ಭಾಗಿಯಾಗಿರುವುದಾಗಿ ಮಹಿಳೆ ದೂರಿದ್ದಾರೆ.

   ನೋಯ್ಡಾದ ಗೌರ್ ಸಿಟಿ ಅವೆನ್ಯೂ -1 ರ ನಿವಾಸಿಯಾಗಿರುವ ಲವಿಕಾ ಗುಪ್ತಾ ತನ್ನ ಗಂಡ ದಪ್ಪ ಕೂದಲು ಹೊಂದಿದ್ದಾನೆ ಎಂದು ಭಾವಿಸಿದ್ದರು. ಆದರೆ ಮದುವೆಯ ಬಳಿಕ ಆತ ಬೋಳು ತಲೆಯವನು ಎಂದು ಗೊತ್ತಾಗಿದೆ. ಆತ ನಕಲಿ ಕೂದಲು ಇಟ್ಟಿದ್ದ ಎಂಬುದು ತಿಳಿಯಿತು ಎಂಬುದಾಗಿ ಲವಿಕಾ ದೂರಿನಲ್ಲಿ ತಿಳಿಸಿದ್ದಾರೆ.

   2024ರ ಜನವರಿ 16ರಂದು ಮದುವೆಯಾಗಿದ್ದ ಲವಿಕಾ ಗುಪ್ತಾ ತನ್ನ ಗಂಡ ಹಾಗೂ ಮನೆಯವರು ತನಗೆ ವಂಚಿಸಿದ್ದಾರೆ ಎಂದು ಬಿಸ್ರಾಖ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

   ಮದುವೆಯ ಮೊದಲು ತನ್ನ ಗಂಡನ ಕುರಿತಾದ ಹಲವಾರು ಸತ್ಯಗಳನ್ನು ತನ್ನಿಂದ ಮುಚ್ಚಿಡಲಾಗಿದೆ. ಪತಿ ಸಂಪೂರ್ಣವಾಗಿ ಬೋಳಾಗಿದ್ದು, ನಕಲಿ ಕೂದಲನ್ನು ಬಳಸುತ್ತಿದ್ದನು. ಆದರೆ ಮದುವೆಯ ಸಮಯದಲ್ಲಿ ಅವನಿಗೆ ದಪ್ಪ ಕೂದಲು ಇದೆ ಎಂದು ಹೇಳಲಾಗಿತ್ತು. ಇವಿಷ್ಟೇ ಅಲ್ಲದೆ ಪತಿಯ ನಿಜವಾದ ಆದಾಯ, ಶೈಕ್ಷಣಿಕ ಹಿನ್ನೆಲೆಯನ್ನು ಕೂಡ ತನ್ನಿಂದ ಗೌಪ್ಯವಾಗಿಡಲಾಗಿದೆ. ಮದುವೆಯ ಬಳಿಕ ಪತಿ ತನ್ನ ಖಾಸಗಿ ಛಾಯಾಚಿತ್ರಗಳನ್ನು ತೆಗೆದು ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ದೈಹಿಕವಾಗಿಯೂ ಹಲ್ಲೆ ನಡೆಸಿದ್ದಾನೆ. ವಿದೇಶ ಪ್ರವಾಸದಲ್ಲಿದ್ದಾಗ ಪತಿ ತನ್ನ ಮೇಲೆ ಹಲ್ಲೆ ನಡೆಸಿದ್ದು, ಥೈಲ್ಯಾಂಡ್‌ನಿಂದ ಭಾರತಕ್ಕೆ ಗಾಂಜಾ ತರುವಂತೆ ಒತ್ತಡ ಹೇರಿದ್ದಾನೆ ಎಂದು ಲವಿಕಾ ದೂರಿನಲ್ಲಿ ತಿಳಿಸಿರುವುದಾಗಿ ಬಿಸ್ರಾಖ್ ಪೊಲೀಸ್ ಠಾಣೆಯ ಉಸ್ತುವಾರಿ ಮನೋಜ್ ಕುಮಾರ್ ಸಿಂಗ್ ತಿಳಿಸಿದ್ದಾರೆ.

   ಲವಿಕಾ ಅವರು ನೀಡಿರುವ ದೂರಿನ ಆಧಾರದಲ್ಲಿ ಆರೋಪಿ ಅವರ ಪತಿ, ಅತ್ತೆ, ಮಾವ ಸೇರಿದಂತೆ ಐವರ ವಿರುದ್ಧ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಅಡಿಯಲ್ಲಿ ದೂರು ದಾಖಲಿಸಲಾಗಿದೆ. ಆರೋಪಿಗಳ ವಿರುದ್ಧ ಸೆಕ್ಷನ್ 85, ಸೆಕ್ಷನ್ 352, ಸೆಕ್ಷನ್ 351, ಸೆಕ್ಷನ್ 316, ಸೆಕ್ಷನ್ 115 ಸೇರಿದಂತೆ ವರದಕ್ಷಿಣೆ ನಿಷೇಧ ಕಾಯ್ದೆಯ ಸೆಕ್ಷನ್ 3 ಮತ್ತು 4 ರ ಅಡಿಯಲ್ಲಿಯೂ ಪ್ರಕರಣ ದಾಖಲಿಸಲಾಗಿದೆ. ಈ ಕುರಿತು ಹೆಚ್ಚಿನ ತನಿಖೆ ನಡೆಸುವುದಾಗಿ ಸಿಂಗ್ ತಿಳಿಸಿದ್ದಾರೆ.

Recent Articles

spot_img

Related Stories

Share via
Copy link