ನವದೆಹಲಿ: ಭಾರತದಲ್ಲಿ ಸಮರಾಭ್ಯಾಸ ನಡೆಸಿ ಹಿಂತಿರುಗುತ್ತಿದ್ದ ಇರಾನ್ ನೌಕೆಯನ್ನು ಅಮೆರಿಕ ಶ್ರೀಲಂಕಾದ ಬಳಿ ಹೊಡೆದು ಹಾಕಿದ್ದಾಗ ಭಾರತ ನೌಕಾಪಡೆ ನೆರವಾಗಲಿಲ್ಲ ಎಂಬ ಆಪಾದನೆಯನ್ನು ವಿದೇಶಾಂಗ ವ್ಯವಹಾರಗಳ ಸಚಿವ ಡಾ.ಎಸ್. ಜೈಶಂಕರ್ ಅಲ್ಲಗಳೆದರು.
ಇರಾನ್ ಕೋರಿಕೆಯ ಮೇರೆಗೆ ಭಾರತದ ಬಂದರುಗಳಲ್ಲಿ ಅದರ ಮೂರು ನೌಕೆಗಳು ಲಂಗರು ಹಾಕಲು ತಕ್ಷಣವೇ ಅನುಮತಿ ನೀಡಲಾಗಿದೆ ಎಂದು ಸಂಸತ್ತಿನಲ್ಲಿ ಇಂದು ತಿಳಿಸಿದರು.
ಹಿಂದೂ ಮಹಾಸಾಗರದಲ್ಲಿ ಅಮೆರಿಕವು ಒಂದು ಹಡಗನ್ನು ಮುಳುಗಿಸಿದ ನಂತರ ಇರಾನ್ ತನ್ನ ಮೂರು ಹಡಗುಗಳನ್ನು ಭಾರತೀಯ ಬಂದರುಗಳಲ್ಲಿ ನಿಲ್ಲಿಸಲು ಅನುಮತಿ ಕೋರಿತ್ತು. ಮರುದಿನವೇ ಇದಕ್ಕೆ ಅನುಮೋದನೆ ನೀಡಲಾಗಿದೆ ಎಂದು ವಿದೇಶಾಂಗ ಸಚಿವರು ಸಂಸತ್ತಿನ ಉಭಯ ಸದನಗಳಿಗೆ ಮಾಹಿತಿ ನೀಡಿದ್ದಾರೆ.
ಇರಾನಿನ ಹಡಗಾದ ಐರಿಸ್ ಲವನ್ ಮಾರ್ಚ್ 4 ರಂದು ಕೊಚ್ಚಿ ಬಂದರಿನಲ್ಲಿ ನಿಲ್ಲಿಸಲು ಅನುಮತಿ ನೀಡಿದೆವು. ಇನ್ನೆರಡು ನೌಕೆಗಳು ನಮ್ಮ ಬಂದರುಗಳಲ್ಲಿ ಲಂಗರು ಹಾಕಿವೆ. ಈ ಪ್ರದೇಶದಲ್ಲಿ (ಹಿಂದೂ ಮಹಾಸಾಗರ) ಸಂಚರಿಸುತ್ತಿರುವ ಮೂರು ಹಡಗುಗಳನ್ನು ಭಾರತದಲ್ಲಿ ನಿಲ್ಲಿಸಲು ಇರಾನ್ ಫೆಬ್ರವರಿ 28 ರಂದು ಅನುಮತಿ ಕೋರಿತ್ತು. ಮಾರ್ಚ್ 1 ರಂದು ಅದಕ್ಕೆ ಅವಕಾಶ ನೀಡಲಾಯಿತು. ಆ ನೌಕೆಗಳ ಸಿಬ್ಬಂದಿ ಪ್ರಸ್ತುತ ಭಾರತೀಯ ನೌಕಾ ತಾಣಗಳಲ್ಲಿ ಇದ್ದಾರೆ. ನಾವು ಮಾಡಿದ್ದು ಸರಿಯಾದ ಕೆಲಸ ಎಂದು ನಾವು ನಂಬುತ್ತೇವೆ. ಈ ಮಾನವೀಯ ನಡೆಗೆ ಇರಾನ್ ಆಡಳಿತವು, ಭಾರತಕ್ಕೆ ಧನ್ಯವಾದ ತಿಳಿಸಿದೆ” ಎಂದು ಅವರು ಹೇಳಿದರು.
ಇಂಧನ ಭದ್ರತೆ ಕಾಪಾಡಲು ಯತ್ನ: ಮಧ್ಯಪ್ರಾಚ್ಯದಲ್ಲಿನ ಸಂಘರ್ಷದಿಂದ ಉಂಟಾಗಲಿರುವ ಇಂಧನ ಅಭದ್ರತೆ ಪರಿಹರಿಸಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ. ಇಂಧನದ ಲಭ್ಯತೆ, ಅವುಗಳ ದರದ ಮೇಲೆ ನಿಗಾ ಇಡಲಾಗಿದೆ. ಪರ್ಯಾಯ ವ್ಯವಸ್ಥೆಗಳ ಬಗ್ಗೆಯೂ ಕ್ರಮ ವಹಿಸಲಾಗಿದೆ. ದೇಶದ ಜನರ ಹಿತ ಕಾಯುವುದೇ ಸರ್ಕಾರದ ಮೊದಲ ಆದ್ಯತೆ ಎಂದು ವಿದೇಶಾಂಗ ಸಚಿವರು ತಿಳಿಸಿದರು.
ಇರಾನ್ ನೌಕಾಪಡೆ ಮುಳುಗಿಸಿದ್ದ ಅಮೆರಿಕ: ಕಳೆದ ವಾರ ಅಂದರೆ, ಮಾರ್ಚ್ 4 ರಂದು ಅಮೆರಿಕವು ತನ್ ಜಲಾಂತರ್ಗಾಮಿ ನೌಕೆ ಬಳಸಿ ಇರಾನ್ನ ಯುದ್ಧನೌಕೆಯಾದ IRIS Denaವನ್ನು ಮುಳುಗಿಸಿತ್ತು. ಈ ವೇಳೆ 87 ನಾವಿಕರು ಸಾವಿಗೀಡಾಗಿದ್ದರು. ಈ ಹಡಗು ಭಾರತದ ವಿಶಾಖಪಟ್ಟಣಂನಲ್ಲಿ ‘ಮಿಲನ್’ ಹೆಸರಿನಲ್ಲಿ ನಡೆದ ಜಂಟಿ ಸಮರಾಭ್ಯಾಸದಲ್ಲಿ ಪಾಲ್ಗೊಂಡಿತ್ತು. ಕಾರ್ಯಕ್ರಮದಲ್ಲಿ ಭಾಗಿಯಾಗಿ ವಾಪಸ್ ಇರಾನ್ಗೆ ತೆರಳುತ್ತಿದ್ದಾಗ ಅಮೆರಿಕವು ದಾಳಿ ಮಾಡಿ ಹಿಂದೂ ಮಹಾಸಾಗರ ಅಂತಾರಾಷ್ಟ್ರೀಯ ನೀರಿನಲ್ಲಿ ಹೊಡೆದು ಹಾಕಿತ್ತು.







