
ಬೆಂಗಳೂರು: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ಸಾರಿಗೆ ನಿಮಗಳ ನೌಕರರು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಜಂಟಿ ಕ್ರಿಯಾ ಸಮಿತಿ ಮೂಲಕ ಮೇ 20ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ತೀರ್ಮಾನಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಂಟಿ ಕ್ರಿಯಾ ಸಮಿತಿ ಪದಾಧಿಕಾರಿಗಳಾದ ಬಿ. ಜಯದೇವರಾಜೇ ಅರಸು, ಜ್ಯೋತಿ ಅನಂತ ಸುಬ್ಬರಾವ್, ವಿಜಯ ಭಾಸ್ಕರ್ ಎಚ್.ಎಸ್. ಮಂಜುನಾಥ್, ಗಂಡಸಿ ಸದಾನಂದಸ್ವಾಮಿ, 2024ರ ಜನವರಿ 1ರಿಂದ ಬಾಕಿಯಿರುವ ವೇತನ ಪರಿಷ್ಕರಣೆ ಬೇಡಿಕೆಯನ್ನು ಜಾರಿಗೆ ತರಬೇಕು. ನಿವೃತ್ತ ನೌಕರರಿಗೆ ಬಾಕಿ ಇರುವ 12 ತಿಂಗಳ ವೇತನವನ್ನು ಪಾವತಿಸಬೇಕು. 26 ತಿಂಗಳ ಬಾಕಿ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ಇದೇ ವೇಳೆ, 2020ರಲ್ಲಿ ಕೋವಿಡ್ ಅವಧಿಯಲ್ಲಿ ಸೇವೆಯಲ್ಲಿದ್ದ ಸಿಬ್ಬಂದಿಗೆ ಪ್ರೋತ್ಸಾಹಧನ ನೀಡಬೇಕು. 2022ರ ಜುಲೈ 1ರಿಂದ ಬಾಕಿಯಿರುವ ಶೇ.31 ತುಟ್ಟಿ ಭತ್ಯೆಯನ್ನು ಮರು ವೇತನದಲ್ಲಿ ವಿಲೀನಗೊಳಿಸಿ ಬಾಕಿ ಹಣ ಪಾವತಿಸಬೇಕು. ಸಾರಿಗೆ ನಿಗಮಗಳ ಸಿಬ್ಬಂದಿಗೆ ಸರ್ಕಾರಿ ನೌಕರರ ಸ್ಥಾನಮಾನ ನೀಡಬೇಕು ಎಂಬ ಪ್ರಮುಖ ಬೇಡಿಕೆಯನ್ನು ಕೂಡ ಜಂಟಿ ಕ್ರಿಯಾ ಸಮಿತಿ ಮುಂದಿಟ್ಟಿದೆ ಎಂದರು.
ಅಲ್ಲದೆ, ನಾಲ್ಕು ನಿಗಮಗಳ ನೌಕರರಿಗೆ 4 ವರ್ಷಕ್ಕೊಮ್ಮೆ 7ನೇ ವೇತನ ಆಯೋಗದ ಮಾದರಿಯಲ್ಲಿ ಶೇ.27.5ರ ವೇತನ ಹೆಚ್ಚಳ ನೀಡಬೇಕು. ಈ ಕುರಿತು ಸರ್ಕಾರಕ್ಕೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಮುಷ್ಕರ ಅನಿವಾರ್ಯವಾಗಿದೆ ಎಂದು ಎಂದು ತಿಳಿಸಿದರು.








