![]()
ಬೆಳಗಾವಿ: ಸತೀಶ್ ಜಾರಕಿಹೊಳಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೊಟ್ಟರೇ ಒಳ್ಳೆಯದು. ಒಳ್ಳೆಯ ಕೆಲಸ ಮಾಡುತ್ತಾರೆ. ಪಕ್ಷ ಮತ್ತೆ ಅಧಿಕಾರಕ್ಕೆ ಬರಲು ಸಹಕಾರಿಯಾಗಲಿದೆ ಎನ್ನುವ ಮೂಲಕ ಸವದತ್ತಿ ಶಾಸಕ ವಿಶ್ವಾಸ ವೈದ್ಯ ಅವರು ಸಚಿವ ಸತೀಶ್ ಜಾರಕಿಹೊಳಿ ಪರ ಬ್ಯಾಟಿಂಗ್ ಬೀಸಿದ್ದಾರೆ.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಜೊತೆಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಅವರು ಬ್ರೇಕ್ ಫಾಸ್ಟ್ ಮೀಟಿಂಗ್ ಕರೆದಿರುವ ಬಗ್ಗೆ ಮಾಹಿತಿ ಇಲ್ಲ. ಯಲ್ಲಮ್ಮ ಪ್ರಾಧಿಕಾರದ ಸಭೆ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಇದ್ದೇನೆ. ಸಿಎಂ ಸಿದ್ದರಾಮಯ್ಯ ಬದಲಾವಣೆ ಬಗ್ಗೆ ಮಾಹಿತಿ ಇಲ್ಲ. ಸಿಎಲ್ ಪಿ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಇಲ್ಲ ಎಂದರು.
ನಮ್ಮವರಿಗೂ ಅವಕಾಶ ಕೊಡಿ ಎಂದು ಕೇಳಿದ್ದೇವೆ. ಆದರೆ, ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ಸತೀಶ್ ಜಾರಕಿಹೊಳಿ ಅವರಿಗೆ ಸಿಎಂ, ಕೆಪಿಸಿಸಿ ಹುದ್ದೆ ನೀಡುವುದು ಹೈಕಮಾಂಡ್ಗೆ ಬಿಟ್ಟಿದ್ದು ಎಂದು ಎಂಎಲ್ಎ ವಿಶ್ವಾಸ ವೈದ್ಯ ಹೇಳಿದರು.
ದೆಹಲಿಯಲ್ಲಿ ಸಚಿವ ಸತೀಶ್ ಹೇಳಿದ್ದು ಹೀಗೆ: ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ಸಂಭಾವ್ಯ ಅಭ್ಯರ್ಥಿಯಾಗಿ ಅವರ ಹೆಸರು ಕೇಳಿಬರುತ್ತಿರುವ ಬಗ್ಗೆ ನವದೆಹಲ್ಲಿಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಚಿವ ಸತೀಶ್ ಜಾರಕಿಹೊಳಿ, ಈ ಬಗ್ಗೆ ಕುರಿತು ಗೊತ್ತಿಲ್ಲ. ಅದರ ಬಗ್ಗೆ ಇನ್ನೂ ಯಾವುದೇ ನಿರ್ದಿಷ್ಟ ಚರ್ಚೆ ನಡೆದಿಲ್ಲ. ಕೆಲವು ಚರ್ಚೆಗಳು ನಡೆಯುತ್ತಿವೆ. ಆದರೆ, ಹಿರಿಯ ನಾಯಕರು ಇಲ್ಲಿಯವರೆಗೆ ನನಗೆ ವೈಯಕ್ತಿಕವಾಗಿ ಕರೆ ಮಾಡಿ, ನನ್ನೊಂದಿಗೆ ಚರ್ಚಿಸಿಲ್ಲ. ಅವರು ಕರೆ ಮಾಡಿದರೆ, ನಿಮಗೆ ತಿಳಿಸುತ್ತೇನೆ. ಪಕ್ಷದ ನಿರ್ಧಾರ ಎಲ್ಲರಿಗೂ ಅಂತಿಮ. ಪಕ್ಷ ಯಾವುದೇ ನಿರ್ಧಾರ ತೆಗೆದುಕೊಂಡರೂ, ಎಲ್ಲರೂ ಅದಕ್ಕೆ ಬದ್ಧರಾಗಿರಬೇಕು. ಆದ್ದರಿಂದ ನಾವು ಸ್ವಲ್ಪ ಕಾಯಬೇಕಾಗಿದೆ ಎಂದು ತಿಳಿಸಿದರು.
ನಾಯಕತ್ವ ಬದಲಾವಣೆ ಬಗ್ಗೆ ಸಿಎಂ ಹೇಳಿದ ಬಳಿಕವೇ ಎಲ್ಲವೂ ಗೊತ್ತಾಗಲಿದೆ. ಗುರುವಾರ ಬೆಂಗಳೂರಿನಲ್ಲಿ ನಡೆಯಲಿರುವ ಬ್ರೇಕ್ಫಾಸ್ಟ್ ಮೀಟಿಂಗ್ ಸಿಎಂ ಸಿದ್ದರಾಮಯ್ಯ ಈ ಕುರಿತು ಮಾತನಾಡಲಿದ್ದಾರೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.







