ಖಾಸಗಿ ಬಸ್ ದರ ಏರಿಕೆ

ಉಡುಪಿ: ರಾಜ್ಯಾದ್ಯಂತ ಖಾಸಗಿ ಬಸ್‌ಗಳ ಪ್ರಯಾಣ ದರವನ್ನು ಶೇ. 5ರಿಂದ 8ರಷ್ಟು ಹೆಚ್ಚಿಸಲಾಗಿದ್ದು, ಪರಿಷ್ಕöÈತ ದರವು ಇಂದು ಜೂನ್ 9 ರಿಂದ ಜಾರಿಗೆ ಬರಲಿದೆ ಎಂದು ರಾಜ್ಯ ಖಾಸಗಿ ಮಜಲು ವಾಹನ ಬಸ್ ಮಾಲೀಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದರು.

ನಗರದ ಡಯಾನ ಹೋಟೆಲ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡೀಸೆಲ್ ದರದಲ್ಲಿ ನಿರಂತರ ಏರಿಕೆ, ವಾಹನಗಳ ನಿರ್ವಹಣಾ ವೆಚ್ಚ, ಬಿಡಿಭಾಗಗಳ ಬೆಲೆ ಹಾಗೂ ನೌಕರರ ವೇತನ ಹೆಚ್ಚಳದಿಂದಾಗಿ ಬಸ್ ಉದ್ಯಮವು ಆರ್ಥಿಕ ಒತ್ತಡಕ್ಕೆ ಸಿಲುಕಿದೆ. ಹೀಗಾಗಿ ಪ್ರಯಾಣ ದರ ಪರಿಷ್ಕರಣೆ ಅನಿವಾರ್ಯವಾಗಿದೆ ಎಂದು ಹೇಳಿದರು.

ರಾಜ್ಯ ಸರ್ಕಾರವು ಒಂದು ವರ್ಷದ ಹಿಂದೆ ಡೀಸೆಲ್ ಮೇಲಿನ ತೆರಿಗೆಯನ್ನು ಲೀಟರ್‌ಗೆ 3 ಹೆಚ್ಚಳ ಮಾಡಿತ್ತು. ಕೇಂದ್ರ ಸರ್ಕಾರವೂ ನಾಲ್ಕು ಹಂತಗಳಲ್ಲಿ ಒಟ್ಟಾರೆ 8.17ರಷ್ಟು ದರ ಹೆಚ್ಚಳ ಮಾಡಿದೆ. ಇದರ ಪರಿಣಾಮವಾಗಿ ಟೈರ್ ರಿಸೋಲಿಂಗ್, ವಾಹನಗಳ ದುರಸ್ತಿ, ಬಿಡಿಭಾಗಗಳ ಖರೀದಿ ಹಾಗೂ ದೈನಂದಿನ ನಿರ್ವಹಣಾ ವೆಚ್ಚಗಳು ಗಣನೀಯವಾಗಿ ಏರಿಕೆಯಾಗಿವೆ ಎಂದು ವಿವರಿಸಿದರು.

ನೌಕರರ ವೇತನ, ವಿಮೆ, ರಸ್ತೆ ತೆರಿಗೆ ಹಾಗೂ ಇತರ ಕಡ್ಡಾಯ ಶುಲ್ಕಗಳ ಹೆಚ್ಚಳದಿಂದ ಬಸ್ ಮಾಲೀಕರ ಮೇಲಿನ ಆರ್ಥಿಕ ಹೊರೆ ಮತ್ತಷ್ಟು ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ 2020ರ ಅಧಿಸೂಚನೆ ಅನ್ವಯ ಪ್ರಯಾಣ ದರವನ್ನು ಪರಿಷ್ಕರಿಸಲಾಗಿದೆ ಎಂದು ತಿಳಿಸಿದರು.

ಶಾಲಾ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿರುವ ಪ್ರಯಾಣ ದರ ರಿಯಾಯಿತಿ ಎಂದಿನ0ತೆ ಮುಂದುವರಿಯಲಿದ್ದು, ವಿದ್ಯಾರ್ಥಿಗಳ ಮೇಲೆ ಯಾವುದೇ ಹೆಚ್ಚುವರಿ ಹೊರೆ ಬೀಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಪ್ರಯಾಣ ದರ ಪರಿಷ್ಕರಣೆ ಕುರಿತಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದ್ದು, ಅದರ ಅನ್ವಯವೇ ದರ ಹೆಚ್ಚಳಕ್ಕೆ ಅನುಮೋದನೆ ದೊರೆತಿದೆ ಎಂದರು. ಕೆನರಾ ಬಸ್ ಮಾಲಕರ ಸಂಘದ ಅಧ್ಯಕ್ಷ ರಾಜವರ್ಮ ಬಲ್ಲಾಳ್, ಸದಾನಂದ ಚಾತ್ರ ಹಾಗೂ ಇತರರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Recent Articles

spot_img

Related Stories

Share via
Copy link