ಸಚಿವಸ್ಥಾನ ವಂಚಿತ ತ್ರಿಮೂರ್ತಿಗಳ ಗೌಪ್ಯ ಸಭೆ : ಡಾ.ಹೆಚ್.ಸಿ.ಮಹಾದೇವಪ್ಪ, ತನ್ವೀರ್ ಸೇಠ್, ಕೆ.ವೆಂಕಟೇಶ್ ಅವರ ರಾಜಕೀಯ ಮುಂದಿನ ನಡೆ ?

ಮೈಸೂರು: ನಮ್ಮನ್ನು ಸಚಿವ ಸ್ಥಾನದಿಂದ ವಂಚಿಸುವ ಮೂಲಕ ಮೈಸೂರು ಭಾಗಕ್ಕೆ ಅನ್ಯಾಯವಾಗಿದೆ, ನಮಗೆ ಸಚಿವರಾಗಲು ಅರ್ಹತೆ ಇಲ್ಲವೇ..?, ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆ, 2028 ಕ್ಕೆ ನಡೆಯುವ ಸಾರ್ವತ್ರಿಕ ಚುನಾವಣೆಯಲ್ಲಿ ನಾವು ಏನು ಮಾಡಬೇಕು …ಎಂಬಿತ್ಯಾದಿ ವಿಷಯಗಳ ಬಗ್ಗೆ ಮಾಜಿ ಸಚಿವರಾದ ಡಾ. ಹೆಚ್.ಸಿ. ಮಹದೇವಪ್ಪ, ತನ್ವೀರ್ ಸೇಠ್ ಹಾಗೂ ಕೆ. ವೆಂಕಟೇಶ್ ಅವರು ಗೌಪ್ಯವಾಗಿ ಮಾತುಕತೆ ನಡೆಸುವ ಮೂಲಕ ಬಂಡಾಯದ ಬಾವುಟವನ್ನು ಹಾರಿಸಿದ್ದಾರೆ.

ಮೈಸೂರು, ಚಾಮರಾಜನಗರ, ಮಂಡ್ಯ, ಹಾಸನ ಸೇರಿದಂತೆ ಇತರೆ ಜಿಲ್ಲೆಗಳಲ್ಲಿ ತಮ್ಮದೇ ಆದ ಪ್ರಭಾವ ಹೊಂದಿರುವ ಇವರ ಈ ಗೌಪ್ಯ ಸಭೆ ರಾಜಕೀಯ ವಲಯದಲ್ಲಿ ದೊಡ್ಡ ಚರ್ಚೆಗೆ ಗ್ರಾಸವಾಗಿದೆ.ರಾಜ್ಯದಲ್ಲಿ ಸಂಪುಟ ವಿಸ್ತರಣೆಯಲ್ಲಿ ಸಚಿವ ಸ್ಥಾನ ಕೈತಪ್ಪಿದ ನಾಯಕರ ಅಸಮಾಧಾನ ಹೆಚ್ಚಾಗುತ್ತಿರುವ ನಡುವೆ, ಈ ಸಭೆ ಬಹಳ ಮಹತ್ವ ಪಡೆದುಕೊಂಡಿದೆ.

ಈ ಹಿನ್ನೆಲೆಯಲ್ಲಿ ಮೈಸೂರಿನ ಸರ್ಕಾರಿ ಅತಿಥಿ ಗೃಹದಲ್ಲಿ ಸಚಿವ ಸ್ಥಾನದಿಂದ ವಂಚಿತರಾದ ಮೂವರು ಹಿರಿಯ ಕಾಂಗ್ರೆಸ್ ನಾಯಕರ ಸಭೆ ರಾಜಕೀಯ ಚರ್ಚೆ ನಡೆಸಿ ಸಭೆ ಬಳಿಕ ಅಸಮಾಧಾನ ಹೊರಹಾಕಿದ್ದು, ಮೂವರು ನಾಯಕರೂ ವಿವಿಧ ಸಮುದಾಯಗಳ ಪ್ರಭಾವಿ ನಾಯಕರಾಗಿರುವುದರಿಂದ ಅವರ ಈ ಜಂಟಿ ಸಭೆ ಹೈಕಮಾಂಡ್‌ಗೆ ಒತ್ತಡ ಹಾಕುವ ತಂತ್ರ ಎಂದೇ ವಿಶ್ಲೇಷಿಸಲಾಗುತ್ತಿದೆ.

ಮೈಸೂರು ರಾಜಕಾರಣದಲ್ಲಿ ಹೊಸ ಲೆಕ್ಕಾಚಾರ ಮೈಸೂರು ಜಿಲ್ಲೆಯಲ್ಲಿ ಕಾಂಗ್ರೆಸ್‌ನಿAದ ಸದ್ಯ ಒಬ್ಬರೇ ಸಚಿವರಿದ್ದಾರೆ. ಈ ಹಿಂದೆ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಜಿಲ್ಲೆಗೆ ಇಬ್ಬರು ಸಚಿವ ಸ್ಥಾನ ಸಿಕ್ಕಿತ್ತು. ಈ ಬಾರಿ ಯತೀಂದ್ರ ಸಿದ್ದರಾಮಯ್ಯಗೆ ಮಾತ್ರ ಸ್ಥಾನ ಸಿಕ್ಕಿರುವುದು ಹಿರಿಯರ ಅಸಮಾಧಾನಕ್ಕೆ ಕಾರಣವಾಗಿದೆ.

ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ – ತನ್ವೀರ್ ಸೇಠ್

ಸಭೆಯ ಬಳಿಕ ಮಾತನಾಡಿದ ಶಾಸಕ ತನ್ವೀರ್ ಸೇಠ್, ಪಕ್ಷದಲ್ಲಿ ಎಲ್ಲವೂ ಸರಿಯಿದೆ ಅಂತಾನೂ ಹೇಳಲ್ಲ, ಸರಿಯಿಲ್ಲ ಅಂತಾನೂ ಹೇಳಲ್ಲ. ಅನ್ಯಾಯ ಆಗಿರೋದು ನಿಜ. ನಾವು ಮೂವರು ಒಂದಾಗಿದ್ದೇವೆ. ನಮಗೆ ಯಾಕೆ ಅನ್ಯಾಯ ಆಗಿದೆ, ಎಲ್ಲಿ ಅನ್ಯಾಯ ಆಗಿದೆ ಎಂಬ ಬಗ್ಗೆ ಸುದೀರ್ಘವಾಗಿ ಚರ್ಚೆ ಮಾಡಿದ್ದೇವೆ ಎಂದು ಹೇಳಿದರು.
ಚಾಮುಂಡೇಶ್ವರಿ ಆಶೀರ್ವಾದದಿಂದ ನಾವು ಒಂದಾಗಿದ್ದೇವೆ. ಮೊದಲೂ ಕೂಡ ಒಂದಾಗಿದ್ದೇವು. ಆದರೆ, ಈಗ ಇನ್ನೂ ಹೆಚ್ಚಾಗಿ ಗಟ್ಟಿಯಾಗಿ ಒಗ್ಗಟ್ಟಾಗಿದ್ದೇವೆ. ನಮಗೆ ಯಾಕೆ ಅನ್ಯಾಯ ಆಯ್ತು ಅಂತ ಹೈಕಮಾಂಡ್ ಜೊತೆ ಮಾತುಕತೆ ಮಾಡುತ್ತೇವೆ. ಸದ್ಯಕ್ಕೆ ಯಾರ ಮೇಲೂ ದೂರು ಹೇಳಲ್ಲ. ಆದರೆ ಎಲ್ಲವೂ ಸರಿಯಿಲ್ಲ. ಮೂವರಿಗೆ ಪ್ರತ್ಯೇಕವಾಗಿ ಸಮುದಾಯದ ಬೆಂಬಲವಿದೆ. ನಮ್ಮ ಶಕ್ತಿ ಬಗ್ಗೆ ಮುಂದೆ ಮಾತನಾಡುತ್ತೇವೆ ಎಂದು ತಿಳಿಸಿದರು.

ಯಾಕೆ ಅನ್ಯಾಯ ಆಯ್ತು? – ಕೆ.ವೆಂಕಟೇಶ್
ಶಾಸಕ ಕೆ.ವೆಂಕಟೇಶ್ ಮಾತನಾಡಿ, ನಾವು ಯಾರ ಬಗ್ಗೆಯೂ ದೂರಲ್ಲ, ಪಿತೂರಿ ಅಂತಾನೂ ಹೇಳಲ್ಲ. ಯಾಕೆ ನಮಗೆ ಸಚಿವ ಸ್ಥಾನ ಕೈತಪ್ಪಿದೆ ಅಂತ ಸಭೆ ಮಾಡಿದ್ದೇವೆ. ಈ ಹಿಂದೆ ಸಿಎಂ ಇದ್ದಾಗಲೂ ಜಿಲ್ಲೆಗೆ ಇಬ್ಬರು ಸಚಿವರು ಇದ್ದರು. ಈಗ ಯಾಕೆ ಅನ್ಯಾಯ ಆಗಿದೆ? ಯತೀಂದ್ರಗೆ ಸಚಿವ ಸ್ಥಾನ ಕೊಟ್ಟಿರೋದಕ್ಕೆ ನಮಗೆ ತಕರಾರು ಇಲ್ಲ. ಆದರೆ ಇನ್ನೂ ಯಾರಿಗಾದರೂ ಕೊಡಬಹುದಿತ್ತು ಎಂದರು. ಸಿದ್ದರಾಮಯ್ಯ ಜೊತೆ ನಾವು ಚರ್ಚೆ ನಡೆಸಿಲ್ಲ. ನಾನು ಮತ್ತು ಮಹದೇವಪ್ಪ ಇಬ್ಬರೂ ಅವರ ಆತ್ಮೀಯರೇ. ಆದರೆ ಸಚಿವ ಸ್ಥಾನ ವಿಚಾರದಲ್ಲಿ ಏನಾಗಿದೆ ತಿಳಿದುಕೊಳ್ಳಬೇಕು. ಹೀಗಾಗಿ ಸಭೆ ಮಾಡಿದ್ದೇವೆ ಎಂದು ಹೇಳಿದರು.

“ಮುಂದೆ ನೋಡೋಣ” – ಡಾ. ಹೆಚ್.ಸಿ. ಮಹದೇವಪ್ಪ :

ಮಾಜಿ ಸಚಿವ ಹಾಗೂ ಟಿ.ನರಸೀಪುರ ಕ್ಷೇತ್ರದ ಶಾಸಕ ಮಹದೇವಪ್ಪ ದಲಿತ ಸಿಎಂ ಆಗುವ ವಿಚಾರದ ಬಗ್ಗೆ ಕೇಳಿದಾಗ ಅವರು, ಸಚಿವ ಸ್ಥಾನ ತಪ್ಪಿದ ತಕ್ಷಣ ಮುಂದೆ ಸಿಎಂ ಆಗಲ್ಲ ಅಂತ ಇಲ್ಲ. ಸಾಮರ್ಥ್ಯವಿದೆ ಅಲ್ವಾ, ಮುಂದೆ ನೋಡೋಣ ಎಂದು ಪ್ರತಿಕ್ರಿಯಿಸಿದರು.

ಸಭೆಗೆ ಯತೀಂದ್ರ ದಿಢೀರ್ ಎಂಟ್ರಿ..! : ಕೂತುಹಲ

ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾದ ಡಾ. ಹೆಚ್.ಸಿ.ಮಹದೇವಪ್ಪ, ತನ್ವೀರ್ ಸೇಠ್ ಮತ್ತು ಕೆ.ವೆಂಕಟೇಶ್ ಅವರು ಸರ್ಕಾರಿ ಅತಿಥಿ ಗೃಹದಲ್ಲಿ ಸಭೆ ನಡೆಸುತ್ತಿದ್ದ ವೇಳೆ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ದಿಢೀರ್ ಆಗಿ ಅಲ್ಲಿಗೆ ಆಗಮಿಸಿ ಎಲ್ಲರಲ್ಲೂ ಕುತೂಹಲ ಮೂಡಿಸಿದರು. ಇದು ಔಪಚಾರಿಕ ಭೇಟಿ ಅಷ್ಟೇ. ನಾನು ಜಿಲ್ಲಾ ಉಸ್ತುವಾರಿ ಸಚಿವನಾದ ಮೇಲೆ ಹಿರಿಯ ಶಾಸಕರನ್ನು ಭೇಟಿ ಮಾಡಿದ್ದೇನೆ. ಅವರು ಸಭೆ ಮಾಡುತ್ತಿರುವುದು ನನಗೆ ಗೊತ್ತಿಲ್ಲ. ಅವರ ಮನೆಗೆ ಭೇಟಿ ಮಾಡಲು ಹೋಗಬೇಕಿತ್ತು. ಇಲ್ಲೇ ಇದ್ದೀವಿ ಬನ್ನಿ ಅಂದ್ರು, ಅದಕ್ಕಾಗಿ ಇಲ್ಲಿಗೆ ಬಂದೆ. ಸಚಿವ ಸ್ಥಾನ ಹೈಕಮಾಂಡ್ ನಿರ್ಧಾರ ಸಚಿವ ಸ್ಥಾನ ಕೈತಪ್ಪಿರುವ ಬಗ್ಗೆ ಪ್ರಶ್ನಿಸಿದಾಗ, ನಾನೇನು ಹೇಳಲ್ಲ. ಇದು ಹೈಕಮಾಂಡ್ ನಿರ್ಧಾರ. ಅವರು ಸಭೆ ಯಾಕೆ ಸೇರಿದ್ದು ಗೊತ್ತಿಲ್ಲ. ನಾನು ಆ ಬಗ್ಗೆ ಏನು ಕೇಳಿಲ್ಲ ಎಂದು ಹೇಳಿದರು.

Recent Articles

spot_img

Related Stories

Share via
Copy link