ಅಧಿಕಾರ ಶಕ್ತಿ ಸಂಕೇತವಲ್ಲ, ಜವಾಬ್ದಾರಿ ಸಂಕೇತ : ಸಿಎಂ ಡಿಕೆಶಿ

ಪ್ರಜಾಪ್ರಗತಿ. ಕಾಂ

ಮೈಸೂರು: ದುಃಖವನ್ನು ಕಳೆದುಕೊಳ್ಳಲು ಧರ್ಮದ ದಾರಿಯನ್ನು ಹುಡುಕಿ ಹೋಗುತ್ತೇವೆ. ಕಷ್ಟಗಳನ್ನು ಕೇಳಲು ಮಠಗಳು ದಾರಿದೀಪವಾಗಿದೆ. ಜಾತಿಭೇದ ಮರೆತು ಎಲ್ಲರೂ ಮಠಕ್ಕೆ ಬರುತ್ತಾರೆ. ಶಿಕ್ಷಣದ ಕ್ರಾಂತಿ ರಾಜ್ಯದಲ್ಲಿ ನಡೆದಿದೆ ಅಂದರೆ, ಅದು ಮಠ ಮಾನ್ಯಗಳಿಂದ ಮಾತ್ರ ಸಾಧ್ಯ ಎಂದು ಹೇಳುವ ಮೂಲಕ ಸಿಎಂ ಡಿ.ಕೆ. ಶಿವಕುಮಾರ್ ರಾಜ್ಯದ ಮಠಗಳನ್ನು ಹಾಡಿ ಹೊಗಳಿದರು.

ಮೈಸೂರಿನ ಸುತ್ತೂರು ಶಾಖಾ ಮಠದಲ್ಲಿ ನಡೆದ ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮಿಗಳ ೧೧೧ನೇ ಜಯಂತಿ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ನಾನು ಸಿಎಂ ಆದಮೇಲೆ ಮೈಸೂರಿನಲ್ಲಿ ಇದು ಎರಡನೇ ಕಾರ್ಯಕ್ರಮ. ಪ್ರಧಾನಿ ಮೋದಿ ಅವರ ಜೊತೆ ಸ್ವಾಮಿ ವಿವೇಕಾನಂದ ಕೇಂದ್ರದ ಉದ್ಘಾಟನೆಗೆ ಬಂದಿದ್ದೆ. ಈಗ ಈ ಕಾರ್ಯಕ್ರಮಕ್ಕೆ ಬಂದಿದ್ದೇನೆ. ಇದು ಭಾಗ್ಯ ಇದು ಭಾಗ್ಯ ಇದು ಭಾಗ್ಯವಯ್ಯ ಎಂಬ ಪುರಂದರದಾಸರ ವಾಣಿಯಿದೆ. ಅಂತಹದೇ ಕೆಲಸ ಮಾಡಿದ್ದು ರಾಜೇಂದ್ರ ಶ್ರೀಗಳು ಅಕ್ಷರ ದಾಸೋಹ, ಅನ್ನ ದಾಸೋಹ ನೀಡಿದ್ದಾರೆ. ಅಂತ ಮಹನೀಯರ ಜಯಂತಿಯಲ್ಲಿ ಭಾಗಿಯಾಗಿದ್ದು ನನ್ನ ಭಾಗ್ಯ ಎಂದು ಹೇಳಿದರು.

ಕಳೆದ ೪೦ ವರ್ಷಗಳಿಂದ ಈಗಿನ ಶ್ರೀಗಳು ಮಠವನ್ನು ಮುನ್ನಡೆಸುತ್ತಿದ್ದಾರೆ. ಗುರುಗಳಲಿಲ್ಲದೆ, ಮಠಗಳಿಲ್ಲದೆ ನಾವ್ಯಾರು ಇಲ್ಲ. ಹೊಟ್ಟೆಗೆ ಹಸಿವಾದರೆ ಪ್ರಸಾದ ಬೇಕು. ಮನಸ್ಸಿಗೆ ಹಸಿವಾದರೆ ಪ್ರಾರ್ಥನೆ ಬೇಕು. ಇದೇ ಕೆಲಸವನ್ನು ನಾವೆಲ್ಲ ಮಾಡುತ್ತಿದ್ದೇವೆ. ಕರ್ಮ ಹಲವಾದರೂ ನಿಷ್ಠೆ ಒಂದೇ. ದೇವನೊಬ್ಬ ನಾಮ ಹಲವು. ಮನಸ್ಸಿಗೆ ನೆಮ್ಮದಿ ಬೇಕು ಅಂದರೆ ದೇವರಿಗೆ ಪ್ರಾರ್ಥನೆ ಮಾಡುತ್ತೇವೆ. ಕಷ್ಟ ಅಂದಾಗ ದೇವಸ್ಥಾನಕ್ಕೆ ಹೋಗುತ್ತೇವೆ. ಈ ಹಿಂದೆ ಚಾಮುಂಡಿ ಬೆಟ್ಟದಲ್ಲಿ ಒಂದು ಮಾತು ಹೇಳಿದ್ದೆ ಪ್ರಯತ್ನ ವಿಫಲವಾದರೂ ಪ್ರಾರ್ಥನೆ ವಿಫಲವಾಗಲ್ಲ ಎಂದು ಹೇಳಿದ್ದೆ ಎಂದು ಹಳೇಯ ಪ್ರಾರ್ಥನೆಯನ್ನು ನೆನೆದರು.

ನಾನು, ಸಿದ್ದರಾಮಯ್ಯ ಪಂಚ ಗ್ಯಾರಂಟಿ ಕೊಡಬೇಕು ಅಂತ ತೀರ್ಮಾನ ಮಾಡಿದವು. ೫೦ ಸಾವಿರ ಕೋಟಿ ಹಣವನ್ನು ಅದಕ್ಕಾಗಿ ಮೀಸಲಿಟ್ಟಿದ್ದೇವೆ. ಶಕ್ತಿ ಯೋಜನೆ, ವಿದ್ಯುತ್ ಫ್ರೀ ಎಲ್ಲವನ್ನೂ ಜನರಿಗಾಗಿ ಮಾಡಿದ್ದೇವೆ. ಆದರೆ ಇದನ್ನು ವಿರೋಧ ಪಕ್ಷಗಳು ಟೀಕೆ ಮಾಡಿದವು. ಕೊನೆಗೆ ನಮ್ಮ ರಾಜ್ಯದ ಯೋಜನೆಗಳನ್ನು ಬೇರೆ ರಾಜ್ಯದವರು ಕಾಪಿ ಮಾಡಿದರು. ನಮ್ಮ ಮಾದರಿಯನ್ನು ಅವರು ಫಾಲೋ ಮಾಡುತ್ತಿದ್ದಾರೆ. ಬೇರೆ ಕಡೆ ನಮ್ಮ ರೀತಿ ನುಡಿದಂತೆ ನಡೆದುಕೊಂಡಿಲ್ಲ. ಮಹಾರಾಷ್ಟದಲ್ಲಿ ಗ್ಯಾರೆಂಟಿ ಕೊಡಲು ಆಗಿಲ್ಲ. ಇದು ಬಸವಣ್ಣನ ನಾಡು. ಅವರಂತೆ ನುಡಿದಂತೆ ನಡೆದಿದ್ದೇವೆ. ಕಾಯಕದಿಂದ ನಾಯಕತ್ವ ಸಿಗತ್ತೆ. ಅಧಿಕಾರ ಶಕ್ತಿ ಸಂಕೇತವಲ್ಲ. ಜವಾಬ್ದಾರಿ ಸಂಕೇತ. ಇದು ನನ್ನ ನಂಬಿಕೆ. ಅಧಿಕಾರ ಕೂಡ ಶಾಶ್ವತವಲ್ಲ.
ಡಿ.ಕೆ. ಶಿವಕುಮಾರ್, ಮುಖ್ಯಮಂತ್ರಿ

ನನ್ನ ಕಷ್ಟದಲ್ಲಿ, ಸುಖದಲ್ಲಿ, ಜೈಲಿಗೆ ಹೋದಾಗ ನನ್ನ ಮನೆಗೆ ಬಂದು ಶ್ರೀಗಳು ಆರೋಗ್ಯ ವಿಚಾರಿಸಿ ನನಗೆ ಆಶೀರ್ವಾದ ಮಾಡಿದ್ದಾರೆ. ಇದನ್ನು ನಾನು ಎಂದಿಗೂ ಮರೆಯುವುದಿಲ್ಲ. ಹಾಗಾಗಿ, ಶ್ರೀಗಳಿಗೆ ನಾನು ಸಾಷ್ಟಾಂಗ ನಮಸ್ಕಾರ ಮಾಡುತ್ತೇನೆ.
ಡಿ.ಕೆ.ಶಿವಕುಮಾರ್, ಮುಖ್ಯಮಂತ್ರಿ.

 

Recent Articles

spot_img

Related Stories

Share via
Copy link