
ನವದೆಹಲಿ: ಕಾವೇರಿ ನದಿ ನೀರಿನ ವಿವಾದದ ಕುರಿತು ಸೋಮವಾರ ಸುಪ್ರೀಂ ಕೋರ್ಟ್ನಲ್ಲಿ ವಿಚಾರಣೆ ನಡೆಯಿತು. ಬಾಕಿ ನೀರು ಬಿಡುಗಡೆ ಮಾಡುವಂತೆ ಕರ್ನಾಟಕಕ್ಕೆ ನಿರ್ದೇಶನ ನೀಡುವಂತೆ ತಮಿಳುನಾಡು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರ ಪೀಠ ಆಲಿಸಿತು.
ತಮಿಳುನಾಡು ಸರ್ಕಾರ ಕೋರಿದಂತೆ 9 ಸಾವಿರ ಕ್ಯೂಸೆಕ್ಗಿಂತ ಹೆಚ್ಚಿನ ನೀರನ್ನು ಬಿಡುಗಡೆ ಮಾಡಲಾಗುತ್ತಿದೆ ಎಂದು ಕರ್ನಾಟಕ ಸರ್ಕಾರ ಸುಪ್ರೀಂ ಕೋರ್ಟ್ ಗಮನಕ್ಕೆ ತಂದಿತು. ಎರಡೂ ಕಡೆಯ ವಾದ ಆಲಿಸಿದ ಬಳಿಕ ಸೆಪ್ಟೆಂಬರ್ 15ಕ್ಕೆ ವಿಚಾರಣೆ ಮುಂದೂಡಲಾಯಿತು.
ತಮಿಳುನಾಡಿನ ವಾದ: ವಿಚಾರಣೆಯ ವೇಳೆ ತಮಿಳುನಾಡು ಪರವಾಗಿ ಹಿರಿಯ ವಕೀಲ ಸಿ.ಎಸ್. ವೈದ್ಯನಾಥನ್ ಹಾಜರಾದರು. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಸೂಚಿಸಿದ ಮಟ್ಟಕ್ಕಿಂತ ಕಡಿಮೆ ನೀರನ್ನು ಕರ್ನಾಟಕ ಬಿಡುಗಡೆ ಮಾಡುತ್ತಿದೆ. ಬಾಕಿ ನೀರು ಬಿಡುಗಡೆ ಮಾಡುವಲ್ಲಿ ಅದು ವಿಫಲವಾಗಿದೆ ಎಂದು ಆರೋಪಿಸಿದರು.
ತಮಿಳುನಾಡಿನಲ್ಲಿ ಸುಮಾರು 24,700 ಎಕರೆ ಕೃಷಿ ಭೂಮಿ ಕಾವೇರಿ ನೀರಿನ ಮೇಲೆ ಅವಲಂಬಿತವಾಗಿದೆ. ಬಿಳಿಗುಂಡ್ಲುವಿನಲ್ಲಿ ದಾಖಲಾಗಿರುವ ನೀರಿನಲ್ಲಿ ಗಣನೀಯ ಕೊರತೆ ಇದೆ ಎಂದು ಅವರು ಹೇಳಿದರು. ಸಂಚಿತ ಕೊರತೆ ನೀಗಿಸಲು ತಮಿಳುನಾಡಿನ ಕೋರಿಕೆ ಮರುಪರಿಶೀಲಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಇದೇ ವೇಳೆ ಒತ್ತಾಯಿಸಿದರು.
- ಕರ್ನಾಟಕದ ವಾದ:
ಕರ್ನಾಟಕದ ಪರವಾಗಿ ಹಾಜರಾದ ಹಿರಿಯ ವಕೀಲ ಶ್ಯಾಮ್ ದಿವಾನ್, ಆಗಸ್ಟ್ 30 ರಂದು ನಿಗದಿ ಮಾಡಿದ್ದ 9 ಸಾವಿರ ಕ್ಯೂಸೆಕ್ಗಳ ಬದಲಿಗೆ 9,888 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಸೋಮವಾರ 11,000 ಕ್ಯೂಸೆಕ್ಗಳಿಗೂ ಹೆಚ್ಚು ನೀರನ್ನು ಬಿಡುಗಡೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
“ಸೋಮವಾರ ಬೆಳಗ್ಗೆ 8 ಗಂಟೆಯ ಹೊತ್ತಿಗೆ ನಾವು ಹೆಚ್ಚುವರಿ ನೀರನ್ನು ಬಿಡುಗಡೆ ಮಾಡಿದ್ದೇವೆ. ತಮಿಳುನಾಡಿಗೆ ಅಗತ್ಯ ಇರುವ 9,000 ಕ್ಯೂಸೆಕ್ಗಳಷ್ಟು ನೀರನ್ನು ಬಿಡುಗಡೆ ಮಾಡಲು ಕರ್ನಾಟಕ ಸರ್ಕಾರ ಪ್ರಯತ್ನಿಸುತ್ತದೆ” ಎಂದು ಕೋರ್ಟ್? ಗಮನಕ್ಕೆ ತಂದರು.
ಕರ್ನಾಟಕ ಸರ್ಕಾರ ಆಗಸ್ಟ್ 12ನೇ ತಾರೀಖಿನಿಂದ 11,000 ರಿಂದ 12,000 ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡುತ್ತಿದೆಯಲ್ಲವೇ ಎಂದು ಸುಪ್ರೀಂ ಪೀಠವು ಹೇಳಿದಾಗ, ಬಾಕಿ ಇರುವ ನೀರನ್ನು ಬಿಡುಗಡೆ ಮಾಡಬೇಕು ಎಂದು ವೈದ್ಯನಾಥನ್ ಹೇಳಿದರು. ಇದಕ್ಕೆ ಮತ್ತೆ ಪ್ರತಿಕ್ರಿಯಿಸಿದ ಪೀಠವು, ಕರ್ನಾಟಕ ಈಗಾಗಲೇ ತಮಿಳುನಾಡಿನ ಕೋರಿಕೆಯಂತೆ 9 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡುತ್ತಿದೆ ಎಂದು ಹೇಳಿತು. ಹೆಚ್ಚುವರಿ ನೀರು ಬೇಕಾದಲ್ಲಿ ಕಾವೇರಿ ನದಿ ಪ್ರಾಧಿಕಾರದ ಮುಂದೆ ಮನವಿ ಸಲ್ಲಿಸಿ ಎಂದು ಇದೇ ವೇಳೆ ನ್ಯಾಯಪೀಠ ಸಲಹೆ ನೀಡಿತು.
ಇದಕ್ಕೆ ಉತ್ತರಿಸಿದ ವೈದ್ಯನಾಥನ್, ಆಗಸ್ಟ್ 27 ರಂದು ತಮಿಳುನಾಡು ಸಲ್ಲಿಸಿದ ಮನವಿಯು ಪ್ರಾಧಿಕಾರದ ಮುಂದೆ ಪರಿಶೀಲನೆಗೆ ಬರಲಿದೆ. ಅದರಲ್ಲಿ ನಮ್ಮ ಮನವಿಯನ್ನು ಮರುಪರಿಶೀಲಿಸುವಂತೆ ಕೋರಿದ್ದೇವೆ ಎಂದು ತಿಳಿಸಿದರು.
ನೀರಿನ ಸಮಸ್ಯೆಯ ಆಧಾರದ ಮೇಲೆ ಪ್ರಾಧಿಕಾರಗಳ ಅಧಿಕಾರಿಗಳು ಪ್ರತಿ 15 ದಿನಗಳಿಗೊಮ್ಮೆ ಆದೇಶಗಳನ್ನು ನೀಡುತ್ತಿದ್ದಾರೆ. ಮುಂದಿನ ಸಿಡಬ್ಲೂ÷್ಯಎಮ್ಎ ಆದೇಶವು ಎರಡೂ ರಾಜ್ಯಗಳ ಬೇಡಿಕೆಗಳನ್ನು ಇದೇ ರೀತಿ ಗಣನೆಗೆ ತೆಗೆದುಕೊಳ್ಳಬಹುದು ಎಂದು ಹೇಳಿತು. ಈ ಕುರಿತು ಸೆಪ್ಟೆಂಬರ್ 15ರಂದು ಮತ್ತೆ ವಿಚಾರಣೆ ನಡೆಸಲಾಗುವುದು ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.








