ಚಿಕ್ಕನಾಯಕನಹಳ್ಳಿ
ಮನುಷ್ಯನ ಹುಟ್ಟಿನಿಂದಲೇ ಮಾನವ ಹಕ್ಕುಗಳು ಪ್ರಾರಂಭವಾಗುತ್ತವೆ. ಜೀವಿಸುವ ಹಕ್ಕು, ಸ್ವಚ್ಛ ಪರಿಸರ ಹೊಂದುವುದು ಮುಖ್ಯವಾದ ಮಾನವ ಹಕ್ಕುಗಳಾಗಿದೆ ಎಂದು ವಿಶ್ವ ಮಾನವ ಹಕ್ಕುಗಳ ಸೇವಾ ಕೇಂದ್ರದ ಸಂಸ್ಥಾಪಕ ಅಧ್ಯಕ್ಷ ಸಿದ್ದಲಿಂಗೇಗೌಡ ಹೇಳಿದರು.
ತಾಲ್ಲೂಕಿನ ಹಂದನಕೆರೆ ಹೋಬಳಿ ಬೆಳಗುಲಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಮಾನವ ಹಕ್ಕುಗಳ ಅರಿವು ಹಾಗೂ ಸಂರಕ್ಷಣೆ ಕುರಿತು ಆಯೋಜಿಸಲಾಗಿದ್ದ ಕಾರ್ಯಗಾರದಲ್ಲಿ ಮಾತನಾಡಿದ ಅವರು, ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಅತಿಯಾಗಿ ಕಂಡು ಬರುತ್ತಿದ್ದು, ಇದು ಕೂಡ ಮಾನವ ಹಕ್ಕು ಉಲ್ಲಂಘನೆಯಾಗುತ್ತದೆ ಎಂದರು.
ಮಾನವ ಹಕ್ಕುಗಳ ಸಂರಕ್ಷಣೆ ಪ್ರತಿಯೊಬ್ಬ ವ್ಯಕ್ತಿಯದ್ದೂ ಆಗಿದೆ. ನಮ್ಮ ಎದುರಿನಲ್ಲಿ ನಡೆಯುವ ಅನ್ಯಾಯ ಅಕ್ರಮಗಳನ್ನು ಧೈರ್ಯದಿಂದ ಪ್ರಶ್ನಿಸುವ ಮನಸ್ಥಿತಿಯನ್ನು ಬೆಳೆಸಿಕೊಂಡಾಗ ಮಾತ್ರ ಶೋಷಣೆ ದೌರ್ಜನ್ಯಗಳು ನಿಲ್ಲುತ್ತವೆ. ಆದ್ದರಿಂದ ಕಣ್ಣೆದುರು ನಡೆಯುವ ಮಾನವ ಹಕ್ಕು ಉಲ್ಲಂಘನೆಗಳನ್ನು ಪ್ರಶ್ನೆ ಮಾಡಿ ಎಂದರು.
ಶಾಲೆಗಳಲ್ಲಿ ಶೌಚಾಲಯಗಳ ಸ್ಥಿತಿ ಶೋಚನೀಯವಾಗಿದೆ. ಶೌಚಾಲಯಕ್ಕೆ ಸಂಬಂಧಪಟ್ಟಂತೆ 800 ಕ್ಕೂ ಹೆಚ್ಚು ಮನವಿ ಪತ್ರಗಳು ನನಗೆ ಬಂದಿವೆ. ಕುಡಿಯುವ ನೀರು ಸ್ವಚ್ಛ ಪರಿಸರ ಆಟದ ಮೈದಾನ ಹಾಗೂ ಒಳ್ಳೆಯ ಗಾಳಿ ಬೆಳಕು ಇರುವ ಕೊಠಡಿಗಳನ್ನು ಒದಗಿಸುವುದು ಸರ್ಕಾರದ ಜವಾಬ್ದಾರಿ ಎಂದರು.
ಲಂಚ ಮುಕ್ತ ಕರ್ನಾಟಕ ವೇದಿಕೆಯ ರಾಜ್ಯ ಕಾರ್ಯದರ್ಶಿ ಭಟ್ಟರಹಳ್ಳಿ ಮಲ್ಲಿಕಾರ್ಜುನ್ ಮಾತನಾಡಿ, ಸುಸಜ್ಜಿತ ಬದುಕನ್ನು ನಡೆಸುವ ಮೂಲಭೂತ ಸೌಕರ್ಯಗಳು ಹಾಗೂ ವಾತಾವರಣವನ್ನು ಹೊಂದುವುದೇ ಮಾನವ ಹಕ್ಕು ಆಗಿದ್ದು, ಈ ಹಕ್ಕು ಪ್ರತಿ ವ್ಯಕ್ತಿಗೂ ಇರಬೇಕು ಎಂಬ ಎಚ್ಚರವನ್ನು ಇಟ್ಟುಕೊಂಡು ಅನ್ಯಾಯಗಳನ್ನು ಪ್ರಶ್ನಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಮಾನವ ಹಕ್ಕುಗಳ ಹೋರಾಟಗಾರ ಸಿದ್ದಲಿಂಗೇಗೌಡರವರನ್ನು ಸನ್ಮಾನಿಸಲಾಯಿತು. ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಸಿ.ನಾಗರಾಜು, ಶ್ರೀ ರಂಗನಾಥ ಗ್ರಾಮಂತರ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಎಸ್.ಶಂಕರಪ್ಪ, ಸರ್ಕಾರಿ ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯ ನಾಗರಾಜು, ಗ್ರಾ.ಪಂ. ಸದಸ್ಯ ವಿಶ್ವನಾಥ್, ಮಂಜುನಾಥ್ ಹಾಜರಿದ್ದರು