ಹೊಸಪೇಟೆ :
ಇಲ್ಲಿನ ಅಮರಾವತಿ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ರಾಜ್ಯ ರೈತ ಸಂಘ ಹಾಗು ಹಸಿರು ಸೇನೆಯ ಪದಾಧಿಕಾರಿಗಳು ಕೃಷಿ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ರೈತ ಸಂಘದ ಜಿಲ್ಲಾಧ್ಯಕ್ಷ ಜೆ.ಕಾರ್ತಿಕ್ ಮಾತನಾಡಿ, ಜಿಲ್ಲೆಯ ಕೆಲ ತಾಲೂಕುಗಳಲ್ಲಿ ಸಕಾಲಕ್ಕೆ ಮಳೆಯಾಗದೇ, ಹತ್ತಿ, ಮೆಕ್ಕೆಜೋಳ, ಜೋಳ, ಸೂರ್ಯಕಾಂತಿ ಬೆಳೆ ಒಣಗಿ ಸುಮಾರು 52 ಸಾವಿರ ಹೆಕ್ಟೇರ್ ಬೆಳೆ ನಾಶವಾಗಿದೆ. ಹೀಗಾಗಿ ಜಿಲ್ಲೆಯ ಹೊಸಪೇಟೆ, ಕೂಡ್ಲಿಗಿ, ಹ.ಬೊ.ಹಳ್ಳಿ, ಹಡಗಲಿ ಹಾಗು ಸಂಡೂರು ತಾಲೂಕುಗಳನ್ನು ಬರಪೀಡಿತ ಪ್ರದೇಶವೆಂದು ಘೋಷಿಸಬೇಕು.
ಜಿಲ್ಲೆಯಲ್ಲಿ ಕಳಪೆ ಬೀಜ, ರಸಗೊಬ್ಬರ, ಕ್ರಿಮಿನಾಶಕ ಔಷಧಿಗಳು ಮಾರಾಟವಾಗುತ್ತಿವೆ. ಸರ್ಕಾರ ಇದಕ್ಕೆ ಕಡಿವಾಣ ಹಾಕಬೇಕು. ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕು. ಕೃಷಿ ಯಂತ್ರೋಪಕರಣಗಳಿಗೆ ಹೆಚ್ಚಿನ ಅನುದಾನ ಹಾಗು ಸಬ್ಸಿಡಿ ನೀಡಬೇಕು ಎಂದು ಒತ್ತಾಯಿಸಿದರು.
ಜಿಲ್ಲೆಯ ಕಂಪ್ಲಿ, ಸಿರುಗುಪ್ಪ, ಕುರುಗೋಡು, ಹಾಗು ಬಳ್ಳಾರಿ ತಾಲೂಕುಗಳಲ್ಲಿ ಹೆಚ್ಚಾಗಿ ಭತ್ತ ಬೆಳೆಯುತ್ತಿದ್ದು, ಇದನ್ನು ಕಟಾವು ಮಾಡುವ ಸಮಯದಲ್ಲಿ ಹಾರ್ವೇಸ್ಟರ್(ಭತ್ತ ಕಟಾವು ಯಂತ್ರ)ಗೆ ದುಬಾರಿ ಬೆಲೆ ಕೊಟ್ಟು ಕಟಾವು ಮಾಡಿಸಬೇಕಾಗುತ್ತದೆ. ಇದರಿಂದ ಸಣ್ಣ ರೈತರಿಗೆ ಹೊರೆಯಾಗುತ್ತದೆ. ಆದ್ದರಿಂದ ಹಾರ್ವೇಸ್ಟರ್‍ನ್ನು ಕೃಷಿ ಇಲಾಖೆ ವತಿಯಿಂದ ಸಬ್ಸಿಡಿ ಧರದಲ್ಲಿ ಒದಗಿಸಿದರೆ ರೈತರಿಗೆ ಹೆಚ್ಚಿನ ಅನುಕೂಲವಾಗುತ್ತದೆ ಎಂದರು.
ಇದೇ ವೇಳೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕೃಷಿ ಸಚಿವ ಶಿವಶಂಕರರೆಡ್ಡಿಯವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂಧರ್ಭದಲ್ಲಿ ಉಪಾಧ್ಯಕ್ಷ ವಿ.ಟಿ.ನಾಗರಾಜ, ತಾಲೂಕು ಅಧ್ಯಕ್ಷ ಸಣ್ಣಕ್ಕಿ ರುದ್ರಪ್ಪ, ನಗರ ಘಟಕ ಅಧ್ಯಕ್ಷ ಚಿನ್ನದೊರೆ ಸೇರಿದಂತೆ ಇತರರು ಇದ್ದರು.
