ಬಳ್ಳಾರಿ
ತುಂಗಭದ್ರಾ ಜಲಾಶಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಇಂಜಿನಿಯರುಗಳು ಕೇವಲ ಪುಸ್ತಕಕ್ಕೆ ಮಾತ್ರ ಸೀಮಿತವಾಗಿದ್ದು ಅವರಿಗೆ ಜಲಾಶಯದ ಹೂಳಿನ ವಾಸ್ತವ ಸ್ಥಿತಿಗಳ ಅರಿವು ಇಲ್ಲ ಎಂದು ತುಂಗಭದ್ರಾ ರೈತ ಸಂಘದ ಅಧ್ಯಕ್ಷ ಜಿ.ಪುರುಷೋತ್ತಮಗೌಡ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿ ನಡೆಸಿದ ಅವರು, ಕಳೆದ 25 ವರ್ಷಗಳಿಂದ ಒಂದು ಬೆಳೆಗೆ ಮಾತ್ರ ಜಲಾಶಯದ ನೀರು ಉಪಯೋಗಕ್ಕೆ ಬರುತ್ತಿದೆ. ಉಳಿದಂತೆ ವರ್ಷದಿಂದ ವರ್ಷಕ್ಕೆ ಅರ್ಧ ಟಿಎಂಸಿಯಷ್ಟು ಹೂಳು ತುಂಬಿ ಇದೀಗ ಅದು 33 ಟಿಎಂಸಿ ಆಗಿದೆ. 80 ಕಿ.ಮೀ. ವಿಸ್ತೀರ್ಣದ ಜಲಾಶಯದಲ್ಲಿ ತುಂಬಿರುವ ಹೂಳನ್ನು ಮೊದಲಿನಿಂದಲೂ ತೆಗೆದು ಎಡ ಮತ್ತು ಬಲ ನಾಲೆಗಳ ಹೊಲಗಳಿಗೆ ಹಾಕಿದ್ದರೆ ಹೂಳಿನ ತೊಂದರೆ ಇರುತ್ತಿರಲಿಲ್ಲ.
ನಿವೃತ್ತ ಇಂಜಿನಿಯರುಗಳಾದ ವಿಪಿ ಉದ್ದೀಹಾಳ್ ಮತ್ತು ಗೋವಿಂದಲು ಅವರ ಸಲಹೆ ಪಡೆಯದ ಇತ್ತೀಚಿನ ಇಂಜಿನಿಯರುಗಳು ಸಾಮಾನ್ಯ ರೈತನಿಗಿರುವಷ್ಟು ಅನುಭವ ಹೊಂದಿಲ್ಲ. ಹೂಳು ತೆಗೆಯಲು 66 ಸಾವಿರ ಎಕರೆ ಜಮೀನು ಬೇಕು ಎಂದು ಸರ್ಕಾರಕ್ಕೆ ಸುಳ್ಳು ವರದಿ ನೀಡಿದ್ದಾರೆ. ಇದರಿಂದ ಹೂಳೆತ್ತುವ ಯೋಜನೆಗೆ ಮಸಿ ಬಳಿದಿದ್ದಾರೆ. ಇದರಿಂದ ರೈತರಿಗೂ ಅನ್ಯಾಯವಾಗಿದೆ. ಈ ಕಾರಣಕ್ಕಾಗಿ ಕಳೆದ ಮೂರು ವರ್ಷಗಳಿಂದ ಸರ್ಕಾರದ ಗಮನ ಸೆಳೆಯಲು ಹೂಳಿನ ಜಾತ್ರೆ ಆರಂಭಿಸಿದ್ದೇವೆ ಎಂದರು.
ಕಳೆದ 3 ವರ್ಷಗಳಿಂದ ಸಾಂಕೇತಿಕ ಹೂಳೆತ್ತುವ ಕಾರ್ಯಕ್ರಮಕ್ಕೆ ದಾನಿಗಳಿಂದ ಒಟ್ಟು 5,77,428 ರೂ.ಗಳು ಸಂಗ್ರಹಗೊಂಡಿದ್ದು ಮುಂದಿನ ದಿನಗಳಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಗಮನ ಸೆಳೆಯಲು ಪ್ರಧಾನಮಂತ್ರಿಗಳನ್ನು ಭೇಟಿಯಾಗುವ ಉದ್ದೇಶ ತಿಳಿಸಿದರು. ಅದೇರೀತಿ ನದಿಗಳ ಜೋಡಣೆ, ಜಲಾಶಯದ ಹೂಳು ಎತ್ತಿಸುವುದು, ಪರ್ಯಾಯ ಜಲಾಶಯಗಳ ನಿರ್ಮಾಣ, ನೀರಿನ ಶೇಖರಣೆ ಕುರಿತು ಮೂರು ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸುವುದಾಗಿ ಹೇಳಿದರು.