ಹುಳಿಯಾರು
ಹಸಿರು ಕರ್ನಾಟಕ ಯೋಜನೆಯಡಿ ತಾಲ್ಲೂಕಿನ ಮುದ್ದೇನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಅರಣ್ಯ ಇಲಾಖೆ ವತಿಯಿಂದ ಗ್ರಾಮದಲ್ಲಿ ಸಸಿಗಳನ್ನು ವಿತರಿಸಲಾಯಿತು.
ಯೋಜನೆಗೆ ಗ್ರಾಪಂ ಅಧ್ಯಕ್ಷ ಎಂ.ಕೆ.ಈಶ್ವರಯ್ಯ ಚಾಲನೆ ನೀಡಿದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಿದ್ದರಾಮಣ್ಣ ಮಾತನಾಡಿ ಮನೆಗೊಂದು ಮರ, ಊರಿಗೊಂದು ತೋಪು, ತಾಲ್ಲೂಕಿಗೊಂದು ಕಿರು ಅರಣ್ಯ, ಜಿಲ್ಲೆಗೊಂದು ಕಾಡು ಎನ್ನುವ ಧ್ಯೇಯ ವಾಕ್ಯ ಹಸಿರು ಕರ್ನಾಟಕ ಯೋಜನೆಯದಾಗಿದ್ದು ತಾಲ್ಲೂಕಿನ ಮುದ್ದೇನಹಳ್ಳಿ ಗ್ರಾಮ ಪಂಚಾಯಿತಿ ಈ ಯೋಜನೆಯಡಿ ಆಯ್ಕೆಯಾಗಿದೆ ಎಂದರು.
ಗ್ರಾಮೀಣ ಪ್ರದೇಶದಲ್ಲಿ ಸಸಿಗಳನ್ನು ವಿತರಿಸುವುದು, ಸಸಿಗಳನ್ನು ನಾಟಿ ಮಾಡುವುದು ಮತ್ತು ಬೀಜದ ಉಂಡೆಗಳ ಬಿತ್ತನೆ ಕಾರ್ಯಕ್ರಮಗಳನ್ನು ಈ ಯೋಜನೆಯಡಿ ಹಮ್ಮಿಕೊಳ್ಳಲಾಗುವುದು ಎಂದ ಅವರು, ಹಸಿರು ಕರ್ನಾಟಕ ಯೋಜನೆ ಮೂಲಕ ಸರ್ಕಾರಿ ಇಲಾಖೆ, ಕಚೇರಿ ಆವರಣ, ಶಾಲಾ ಕಾಲೇಜು, ವಸತಿ ನಿಲಯ ಆವರಣ, ರೈತರ ಜಮೀನು, ಸ್ಥಳ ಅವಕಾಶ ಹೊಂದಿರುವ ಗ್ರಾಮ ಪಂಚಾಯಿತಿ ಕಚೇರಿ ಆವರಣ ಮತ್ತು ಹಂತ ಹಂತವಾಗಿ ಮನೆಗಳ ಅಂಗಳದಲ್ಲಿ ಮರಗಿಡಗಳನ್ನು ಬೆಳೆಸುವ ಮೂಲಕ ಹಸಿರು ಹೊದಿಕೆಯನ್ನು ಹೆಚ್ಚಿಸಲಾಗುತ್ತದೆ. ಈ ನಿಟ್ಟಿನಲ್ಲಿ ಎಲ್ಲ ಇಲಾಖೆಗಳು, ಶಾಲಾ ಕಾಲೇಜುಗಳು, ಸಾರ್ವಜನಿಕರು, ಸ್ವಯಂ ಸೇವಕರು ಸಕ್ರಿಯವಾಗಿ ಭಾಗವಹಿಸಬೇಕಿದೆ ಎಂದರು.
ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯರಾದ ಬಸವರಾಜು, ಸಾಮಾಜಿಕ ಅರಣ್ಯ ಇಲಾಖೆಯ ಕು.ಸುಜಾತ, ಗ್ರಾ.ಪಂ. ಸಿಬ್ಬಂದಿ, ಅರಣ್ಯ ಇಲಾಖೆ ಸಿಬ್ಬಂದಿಗಳು ಭಾಗವಹಿಸಿದ್ದರು.
