ಹಾವೇರಿ:
ಮಾಹಿತಿ ಹಕ್ಕು ಕಾಯ್ದೆ ಭ್ರಷ್ಟಾಚಾರ ರಹಿತ ಪಾರದರ್ಶಕ ಆಡಳಿತಕ್ಕೆ ಸಹಕಾರಿಯಾಗಿದೆ. ಸಾರ್ವಜನಿಕ ಆಡಳಿತದ ಮಾಹಿತಿ ತಿಳಿದುಕೊಳ್ಳುವ ಹಕ್ಕು ಸಾರ್ವಜನಿಕರಿಗೆ ಈ ಕಾಯ್ದೆ ಒದಗಿಸಿಕೊಟ್ಟಿದೆ. ಸರ್ಕಾರಿ ಕಚೇರಿಗಳಲ್ಲಿ ಮಾಹಿತಿ ಹಕ್ಕು ಕಾಯ್ದೆ ಜಾರಿಗೊಳಿಸದಿದ್ದರೆ ಅಪರಾಧವಾಗುತ್ತದೆ ಎಂದು ಕರ್ನಾಟಕ ರಾಜ್ಯ ಮಾಹಿತಿ ಹಕ್ಕು ಆಯೋಗದ ಆಯುಕ್ತರಾದ ಕೆ.ಎಂ.ಚಂದ್ರೇಗೌಡ ಅವರು ಹೇಳಿದರು.
ಕರ್ನಾಟಕ ಮಾಹಿತಿ ಹಕ್ಕು ಆಯೋಗದಿಂದ ಹಾವೇರಿ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಸಾರ್ವಜನಿಕರಿಗೆ ಮಾಹಿತಿ ಹಕ್ಕು ಕಾಯ್ದೆ ಕುರಿತ ಜಾಗೃತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರದ ವಿವಿಧ ಇಲಾಖೆಗಳಲ್ಲಿ ತಮಗೆ ಬೇಕಾದ ಮಾಹಿತಿಯ ದಾಖಲೆಗಳನ್ನು ಪಡೆದುಕೊಳ್ಳುವುದು ಪ್ರತಿಯೊಬ್ಬ ಜನಸಾಮಾನ್ಯನ ಹಕ್ಕಾಗಿದೆ. ಈ ಹಕ್ಕನ್ನು ಯಾವ ಅಧಿಕಾರಿಗಳು ನಿರಾಕರಿಸುವಂತಿಲ್ಲ. ಒಂದೊಮ್ಮೆ ಮಾಹಿತಿ ನೀಡಲು ನಿರಾಕರಿಸಿದರೆ ವಿಳಂಬಮಾಡಿದರೆ ಆಯೋಗ ಜನಸಾಮಾನ್ಯರಿಗೆ ಮಾಹಿತಿಯನ್ನು ಕೊಡಿಸುವ ಜವಾಬ್ದಾರಿಯನ್ನು ಹೊಂದಿದೆ. ಆದರೆ ತಪ್ಪು ಮಾಹಿತಿ ನೀಡಿದರೆ ನೀಡಿದ ಮಾಹಿತಿಯಲ್ಲಿ ಭ್ರಷ್ಟಾಚಾರ ನಡೆದಿರುವ ಬಗ್ಗೆ ಅರ್ಜಿದಾರರಿಗೆ ಅನುಮಾನಗಳಿದ್ದರೆ ಇಂತಹ ಪ್ರಕರಣಗಳ ತನಿಖೆಯನ್ನು ಮಾಹಿತಿಹಕ್ಕು ಆಯೋಗ ಮಾಡುವುದಿಲ್ಲ. ಇಂತಹ ಪ್ರಕರಣಗಳನ್ನು ಅರ್ಜಿದಾರರು ಆಯಾ ಇಲಾಖೆಯ ಮೇಲಾಧಿಕಾರಿಗಳಿಗೆ ದೂರು ಸಲ್ಲಿಸಿ ತನಿಖೆಗೆ ಮನವಿಮಾಡಿಕೊಳ್ಳಬಹುದು ಎಂದು ತಿಳಿಸಿದರು.
ಮಾಹಿತಿ ಹಕ್ಕಿನಡಿ ಅರ್ಜಿ ಸಲ್ಲಿಸಿದರೆ ಇಲಾಖಾ ಅಧಿಕಾರಿಗಳಿಗೆ 30 ದಿನಗಳ ಕಾಲಾವಕಾಶವಿದೆ. ಆದರೆ ಈ ಅವಧಿಯ ಪೂರ್ವದಲ್ಲೇ ಅರ್ಜಿದಾರರಿಗೆ ಅಧಿಕಾರಿಗಳು ಮಾಹಿತಿ ಒದಗಿಸಬೇಕು. ನಿಮ್ಮ ಇಲಾಖೆಗೆ ಸಂಬಂಧವಿಲ್ಲದ ವಿಷಯವಿದ್ದರೆ ಅರ್ಜಿದಾರರಿಗೆ ಐದು ದಿನಗಳೊಳಗಾಗಿ ಹಿಂಬರಹ ನೀಡಬೇಕು ಅಥವಾ ಸಂಬಂಧಿಸಿದ ಇಲಾಖೆಗೆ ಅರ್ಜಿ ವರ್ಗಾಯಿಸಬೇಕು ಎಂದು ತಿಳಿಸಿದರು.
ಮಾಹಿತಿ ಹಕ್ಕಿನಡಿ ಅರ್ಜಿ ಸ್ವೀಕರಿಸಿದ ತಕ್ಷಣವೇ ಯಾವುದೇ ಅಂಜಿಕೆ ಇಲ್ಲದೆ ಮೊದಲು ಅರ್ಜಿಯನ್ನು ಪೂರ್ಣವಾಗಿ ಅಧಿಕಾರಿಗಳೇ ಓದಬೇಕು. ತಕ್ಷಣವೇ ವಿಲೇವಾರಿಗೆ ಕ್ರಮವಹಿಸಬೇಕು. ನಿಗಧಿತ ಅವಧಿಯಲ್ಲಿ ಮಾಹಿತಿ ಒದಗಿಸದಿದ್ದರೆ ಸಂಬಂಧಿಸಿದ ಅಧಿಕಾರಿಗಳಿಗೆ ದಿನವೊಂದಕ್ಕೆ 250ರೂ. ದಂಡ ಹಾಕಲು ಮಾಹಿತಿ ಹಕ್ಕು ಕಾಯ್ದೆಯಡಿ ಅವಕಾಶವಿದೆ ಎಂದು ಎಚ್ಚರಿಸಿದರು.
ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದ ಅರ್ಜಿದಾರರ ಮೇಲೆ ದ್ವೇಷಸಾಧಿಸಬೇಡಿ. ಅವರೊಂದಿಗೆ ಸೌಹಾರ್ದತೆಯನ್ನು ಕಾಪಾಡಿಕೊಳ್ಳಿ, ಸಂಬಂಧಗಳನ್ನು ಹಾಳುಮಾಡಿಕೊಳ್ಳಬೇಡಿ. ಸಂವಿಧಾನದತ್ತ ಹಕ್ಕಾಗಿರುವ ಮಾಹಿತಿಯನ್ನು ನೀಡುವುದು ನಮ್ಮ ಕರ್ತವ್ಯವಾಗಿದೆ ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು.
ಮಾಹಿತಿ ಹಕ್ಕು ಕಾಯ್ದೆಯಡಿ ಬರುವ ಅರ್ಜಿಗಳ ತ್ವರಿತ ವಿಲೇವಾರಿಗೆ ಪ್ರತಿಯೊಂದು ಕಚೇರಿಯಲ್ಲೂ ಕಡಿತಗಳ ವರ್ಗೀಕಣ ಹಾಗೂ ಕಚೇರಿ ಕೈಪಿಡಿ ಅನುಸಾರ ಕಾರ್ಯನಿರ್ವಹಿಸಬೇಕು. ಇದರಿಂದ ಸರಳ ಹಾಗೂ ವೇಗವಾಗಿ ಮಾಹಿತಿ ಕೊಡಲು ಸಾಧ್ಯವಾಗುತ್ತದೆ. ಪ್ರತಿ ಕಚೇರಿಯಲ್ಲೂ ತಮ್ಮ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿ ಸಿಬ್ಬಂದಿಗಳ ಮಾಹಿತಿ, ಕಚೇರಿಯ ಕಾರ್ಯಗಳು, ಸಾರ್ವಜನಿಕ ಮಾಹಿತಿ ಅಧಿಕಾರಿ ಹಾಗೂ ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿ ಹಾಗೂ ಮೇಲ್ಮನವಿ ಪ್ರಾಧಿಕಾರದ ಹೆಸರು, ಹುದ್ದೆ, ಸಂಪರ್ಕ ವಿಳಾಸ ಒಳಗೊಂಡ ಫಲಕಗಳನ್ನು ಹಾಕಬೇಕು. ಈ ಎಲ್ಲ ಮಾಹಿತಿಯನ್ನು ತಮ್ಮ ಇಲಾಖೆಯ ವೆಬ್‍ಸೈಟ್‍ಗಳಲ್ಲಿ ಅಪ್‍ಲೋಡ್ ಮಾಡಬೇಕು ಎಂದು ಸೂಚಿಸಿದರು.
ಅರ್ಜಿದಾರರು ಅರ್ಜಿಯೊಂದಿಗೆ ಕಡ್ಡಾಯವಾಗಿ ರೂ.10 ಮೌಲ್ಯದ ಐ.ಪಿ.ಓ. ಸಲ್ಲಿಸಬೇಕು. ಪ್ರತಿ ಪುಟದ ಮಾಹಿತಿಗೆ ನಿಗಧಿಪಡಿಸಿದ ಶುಲ್ಕ ಪಾವತಿಸಬೇಕು. ಆದಾಯ ಪ್ರಮಾಣಪತ್ರ ಒದಗಿಸದೆ ಕೇವಲ ರೇಷನ್ ಕಾರ್ಡ್ ಸಲ್ಲಿಸಿದರೆ ಉಚಿತವಾಗಿ ಮಾಹಿತಿ ನೀಡಲು ಬರುವುದಿಲ್ಲ. ನೌಕರರ ವಯಕ್ತಿಕ ವಿವರ, ಆಸ್ತಿ ವಿವರ, ಸೇವಾ ವಿವರ, ಮನೆ ವಿಳಾಸ, ದೇಶದ ಭದ್ರತೆಗೆ ಸಂಬಂಧಪಟ್ಟ ವಿಚಾರಗಳು, ಸಚಿವ ಸಂಪುಟದ ನಡಾವಳಿಗಳು ಮಾಹಿತಿ ಹಕ್ಕಿನಡಿ ನೀಡಲು ಬರುವುದಿಲ್ಲ. ಸಂಘ ಸಂಸ್ಥೆಗಳ ಹೆಸರಿನಲ್ಲಿ ಮಾಹಿತಿ ಹಕ್ಕು ಕಾಯ್ದೆಯಡಿ ಬರುವ ಅರ್ಜಿಗಳನ್ನು ಮಾನ್ಯ ಮಾಡುವಂತಿಲ್ಲ. ಈ ಕಾಯ್ದೆಯಡಿ ಮಾಹಿತಿ ಸಂಗ್ರಹಣೆ ಮಾಡಿ ಒದಗಿಸಲು ಅವಕಾಶವಿಲ್ಲ. ಒಂದು ಅರ್ಜಿ ಸಲ್ಲಿಸಿ ಹಲವು ಮಾಹಿತಿ ಕೇಳಿದರೆ ಒಂದೇ ಮಾಹಿತಿಗೆ ಉತ್ತರ ನೀಡುವುದು. ಉಳಿದಂತೆ ಪ್ರತ್ಯೇಕ ಅರ್ಜಿಗಳನ್ನು ಅರ್ಜಿದಾರರು ಸಲ್ಲಿಸಬೇಕಾಗುತ್ತದೆ ಎಂದು ವಿವರಿಸಿದ ಅವರು ಮಾಹಿತಿ ಹಕ್ಕು ಅಧಿನಿಯಮದಡಿ ವಿವಿಧ ಸೆಕ್ಸನ್‍ಗಳಡಿ ಯಾವುದನ್ನು ಮಾಡಬೇಕು, ಯಾವುದನ್ನು ಮಾಡಬಾರದು ಎಂಬ ಮಾಹಿತಿಯನ್ನು ವಿವರಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಅವರು 2005 ರಿಂದ ಜಾರಿಗೆ ಬಂದಿರುವ ಮಾಹಿತಿ ಹಕ್ಕು ಕಾಯ್ದೆ ಪಾರದರ್ಶಕ ಆಡಳಿತ, ಭ್ರಷ್ಟಾಚಾರ ರಹಿತ ಆಡಳಿತ ವ್ಯವಸ್ಥೆಯ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸಲು ಈ ಕಾಯ್ದೆ ಸಹಕಾರಿ. ಈ ಕಾಯ್ದೆಯಿಂದ ಸಾಮಾನ್ಯರಿಗೆ ಮುಖ್ಯವಾಹಿನಿಯಿಂದ ದೂರ ಹೋಗುವವರಿಗೆ ಅನುಕೂಲಕರವಾಗಿದೆ. ಆಡಳಿತದ ಆಗುಹೋಗುಗಳನ್ನು ತಿಳಿಯಲು ಹಾಗೂ ತಮಗೆ ಬೇಕಾದ ಅಗತ್ಯ ಮಾಹಿತಿಯನ್ನು ಪಡೆಯಲು ಈ ಕಾಯ್ದೆ ಸಹಾಯಕವಾಗಿದೆ. ಈ ಕಾಯ್ದೆಯಡಿ ಮಾಹಿತಿ ನೀಡಲು 30 ದಿನಗಳ ಕಾಲಾವಕಾಶವಿದ್ದರೂ ಅರ್ಜಿ ಸಲ್ಲಿಸಿದ 24 ತಾಸಿನೊಳಗಾಗಿ ತ್ವರಿತವಾಗಿ ಮಾಹಿತಿ ನೀಡುವ ವ್ಯವಸ್ಥೆಯನ್ನು ಅಧಿಕಾರಿಗಳು ಮುಂದಿನ ದಿನಗಳಲ್ಲಿ ಅಳವಡಿಸಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಕರೆ ನೀಡಿದರು.
ಸಂವಾದ:
ಸಭೆಯ ಕೊನೆಯಲ್ಲಿ ಅಧಿಕಾರಿಗಳು ಹಾಗೂ ಸಾರ್ವಜನಿಕರೊಂದಿಗೆ ಮಾಹಿತಿ ಹಕ್ಕು ಕಾಯ್ದೆಯ ಕುರಿತಂತೆ ಆಯುಕ್ತರು ಸಂವಾದ ನಡೆಸಿದರು.
ವಿಚಾರಣೆ:
ಇಂದು ಬೆಳಿಗ್ಗೆ 11 ಗಂಟೆಯಿಂದ ಮಾಹಿತಿ ಹಕ್ಕು ಕಾಯ್ದೆಯಡಿ ಸ್ವೀಕೃತವಾದ ಅರ್ಜಿಗಳ ಕುರಿತಂತೆ ವಿಚಾರಣೆ ನಡೆಸಿದರು. 22 ಅರ್ಜಿಗಳು ಆಯೋಗದಿಂದ ಸ್ವೀಕೃತವಾಗಿದ್ದವು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶ್ರೀಮತಿ ಶಿಲ್ಪಾ ನಾಗ್, ಅಪರ ಜಿಲ್ಲಾಧಿಕಾರಿ ಶ್ರೀಮತಿ ಶಾಂತಾ ಹುಲ್ಮನಿ, ಜಿ.ಪಂ.ಉಪಕಾರ್ಯದರ್ಶಿ ಜಿ.ಗೋವಿಂದಸ್ವಾಮಿ ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ