ಕೊಡಗು ಸಂತ್ರಸ್ತರ ರಕ್ಷಣೆ ನಮ್ಮ ಕರ್ತವ್ಯ : ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ

ಕೊರಟಗೆರೆ

            ದೇಶದ ರಕ್ಷಣೆಗೆ ಸಾವಿರಾರು ಯೋಧರನ್ನು ಕೊಡುಗೆಯಾಗಿ ನೀಡಿದ ರಾಜ್ಯದ ಕೊಡಗು ಜಿಲ್ಲಾ ಸಂತ್ರಸ್ತರ ರಕ್ಷಣೆಗೆ ನಿಲ್ಲುವುದು ನಮ್ಮೆಲ್ಲರ ಪ್ರಮುಖ ಕರ್ತವ್ಯವಾಗಿದೆ ಎಂದು ಸಿದ್ದರಬೆಟ್ಟದ ರಂಭಾಪುರಿ ಖಾಸಾ ಶಾಖಾ ಮಠದ ಶ್ರೀವೀರಭದ್ರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

           ಕೊರಟಗೆರೆ ಪಟ್ಟಣದ ಕಟ್ಟೆಗಣಪತಿ ಸಮುದಾಯದ ಭವನದಲ್ಲಿ ಮಠಾಧೀಶರು, ಸಾರ್ವಜನಿಕರು ಮತ್ತು ಪತ್ರಕರ್ತರ ವತಿಯಿಂದ ಏರ್ಪಡಿಸಲಾಗಿದ್ದ ದೇಣಿಗೆ ಸಂಗ್ರಹಣಾ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಅತಿವೃಷ್ಟಿಯಿಂದ ನಿರಾಶ್ರಿತರಾದ ಕೊಡಗು ಜಿಲ್ಲೆಯ ಸಂತ್ರಸ್ತರಿಗೆ ಶಾಶ್ವತ ಸೂರು ಕಲ್ಪಿಸಿಕೊಡುವ ಉದ್ದೇಶದಿಂದ ತುಮಕೂರು ಜಿಲ್ಲೆಯಲ್ಲಿ ಪಕ್ಷ್ಷಾತೀತವಾಗಿ ನಿಧಿ ಸಂಗ್ರಹಣೆಗೆ ರೂಪುರೇಷೆ ಸಿದ್ದಪಡಿಸಲಾಗಿದೆ. ನೈಸರ್ಗಿಕ ದುರಂತಕ್ಕೆ ಸಿಲುಕಿ ಆಸ್ತಿ, ಪಾಸ್ತಿ, ಮನೆ, ಮಠ ಸೇರಿದಂತೆ ಸರ್ವಸ್ವವನ್ನೂ ಕಳೆದುಕೊಂಡು ವಾಸ ಮಾಡಲು ಸೂರು ಇಲ್ಲದೆ ಸಂಕಷ್ಟದಲ್ಲಿರುವ ನಮ್ಮ ಕನ್ನಡಿಗರಿಗೆ ಜನತೆಯ ಸಹಕಾರ ಅಗತ್ಯವಾಗಿದೆ ಎಂದು ಹೇಳಿದರು.

            ಎಲೆರಾಂಪುರ ನರಸಿಂಹಗಿರಿ ಕ್ಷೇತ್ರದ ಕುಂಚಿಟಿಗರ ಮಹಾಸಂಸ್ಥಾನ ಮಠದ ಡಾ. ಶ್ರೀಹನುಮಂತನಾಥ ಸ್ವಾಮೀಜಿ ಮಾತನಾಡಿ, ಪ್ರಕೃತಿ ವಿಕೋಪದಿಂದ ಆಸ್ತಿಪಾಸ್ತಿ ಕಳೆದುಕೊಂಡ ಕೊಡಗಿನ ಜನತೆಗೆ ವಾಸ ಮಾಡಲು ಸೂರು ಇಲ್ಲದೇ ತಾತ್ಕಲಿಕ ಶೇಡ್‍ನಲ್ಲಿಯೇ ಜೀವನ ಸಾಗಿಸುವ ಪರಿಸ್ಥಿತಿ ಎದುರಾಗಿದೆ. ಅಂತಹ ಕುಟುಂಬಗಳನ್ನು ಗುರುತಿಸಿ ನಮ್ಮ ಕೊರಟಗೆರೆ ಮತ್ತು ಮಧುಗಿರಿ ತಾಲ್ಲೂಕಿನಿಂದ ಸೂರು ಕಲ್ಪಿಸುವುದೇ ನಮ್ಮೆಲ್ಲರ ಉದ್ದೇಶವಾಗಿದೆ ಎಂದರು.

             ಮಧುಗಿರಿ ತಗ್ಗಿಹಳ್ಳಿ ಮಠದ ನಿರ್ಮಲಾನಂದ ಸ್ವಾಮೀಜಿ ಮಾತನಾಡಿ, ಪರಿಹಾರ ನಿಧಿ ಸಂಗ್ರಹಣೆಗೆ ಪ್ರತಿಯೊಬ್ಬರ ಸಹಕಾರ ಅಗತ್ಯವಾಗಿದೆ. ರಾಜಕೀಯ ಪ್ರೇರಿತವಿಲ್ಲದೆ ಪ್ರತಿಯೊಬ್ಬರು ಕೊಡಗಿಗೆ ಪರಿಹಾರ ನಿಧಿಯನ್ನು ನೀಡಬೇಕು. ಸಾರ್ವಜನಿಕರ ಜೊತೆ ಸಂಘ ಸಂಸ್ಥೆಗಳು ಸೇರಿದಂತೆ ಸರಕಾರಿ ಮತ್ತು ಖಾಸಗಿ ಸಂಸ್ಥೆಯ ಅಧಿಕಾರಿಗಳು ಕೈಜೋಡಿಸಬೇಕು ಎಂದು ಮನವಿ ಮಾಡಿದರು.

            ಪೂರ್ವಭಾವಿ ಸಭೆಯಲ್ಲಿಯೇ ಬೆಸ್ಕಾಂ ಇಲಾಖೆಯ ಎಇಇ ನಾಗರಾಜು ತಂಡದಿಂದ 31 ಸಾವಿರ ರೂ., ಎಲೆರಾಂಪುರ ಗ್ರಾಪಂಯಿಂದ 42 ಸಾವಿರ ರೂ., ಫ್ರೆಂಡ್ಸ್‍ಗ್ರೂಪ್ ಬಳಗದ ಅಧ್ಯಕ್ಷ ರವಿಕುಮಾರ್ ಒಂದು ತಿಂಗಳ ವೇತನ, ತಾಲ್ಲೂಕಿನ ಕಾರ್ಯನಿರತ ಪತ್ರಕರ್ತರ ಸಂಘ, ಎ.ಡಿ.ಬಲರಾಮಯ್ಯ, ಅರಕೆರೆ ಶಂಕರ್ ತಲಾ 10 ಸಾವಿರ ರೂ., ವೀರಶೈವ ಸಮುದಾಯ 30 ಸಾವಿರ ರೂ. ಸೇರಿದಂತೆ ಲಕ್ಷ್ಮೀನಾರಾಯಣ್, ವೆಂಕಟೇಶ್, ರವಿಶಂಕರ್, ಓಬಳರಾಜು, ಪುರುಷೋತ್ತಮ್ ಇನ್ನಿತರ ಮುಖಂಡರು ಸಹಾಯಹಸ್ತ ನೀಡಿದರು.

            ಆ.27ರ ಸೋಮವಾರ ನಿಧಿ ಸಂಗ್ರಹ: ಕೊರಟಗೆರೆ ಪಟ್ಟಣದಲ್ಲಿ ಆ.27ರ ಸೋಮವಾರ ಬೆಳಗ್ಗೆ 9 ಗಂಟೆಗೆ ಸಿದ್ದರಬೆಟ್ಟದ ಶ್ರೀವೀರಭದ್ರ ಶಿವಚಾರ್ಯ ಸ್ವಾಮೀಜಿ, ಎಲೆರಾಂಪುರದ ಹನುಮಂತನಾಥ ಸ್ವಾಮೀಜಿ ಮತ್ತು ತಗ್ಗಿಹಳ್ಳಿ ನಿರ್ಮಲಾನಂದ ಸ್ವಾಮೀಜಿ ಸೇರಿದಂತೆ ಪತ್ರಕರ್ತರ ಸಂಘ ಮತ್ತು ವಿವಿಧ ಸಂಘಸಂಸ್ಥೆಗಳು ಪಾದಯಾತ್ರೆಯ ಮೂಲಕ ಕೊಡಗಿನ ಸಂತ್ರಸ್ತರಿಗೆ ಶಾಶ್ವತ ಸೂರು ನಿರ್ಮಾಣ ಮಾಡಲು ನಿಧಿ ಸಂಗ್ರಹ ಮಾಡಲಾಗುವುದು. ಸಾರ್ವಜನಿಕರು ಹೆಚ್ಚಿನ ಸಹಕಾರ ನೀಡಬೇಕು ಎಂದು ಮನವಿ ಮಾಡಲಾಗಿದೆ. ಪೂರ್ವಭಾವಿ ಸಭೆಯಲ್ಲಿ ಬೆಸ್ಕಾಂ ಇಲಾಖೆಯ ಎಇಇ ನಾಗರಾಜು, ಎ.ಇ.ಪ್ರಸನ್ನಕುಮಾರ್, ನಟರಾಜು, ಮುಖಂಡ ಅರಕೆರೆ ಶಂಕರ್, ಶಂಕರನಾರಾಯಣಶ್ರೇಷ್ಠಿ, ರಮಾಮಣಿ ಬಲರಾಮಯ್ಯ, ನವೀನ್‍ಕುಮಾರ್, ಪರ್ವತಯ್ಯ, ಸದಾಶಿವಯ್ಯ, ಫ್ರೇಂಡ್ಸ್ ಗ್ರೂಪ್ ಮಲ್ಲಣ್ಣ, ಗಿರೀಶ್, ವಿನಯಕುಮಾರ್, ಪತ್ರಕರ್ತ ಸಂಘದ ಅಧ್ಯಕ್ಷ ಕೆ.ವಿ.ಪುರುಸೋತ್ತಮ್, ಎನ್.ಪದ್ಮನಾಭ್ ಸೇರಿದಂತೆ ಇತರರು ಇದ್ದರು.

 

Recent Articles

spot_img

Related Stories

Share via
Copy link