ಮಕ್ಕಳು ಕಾನೂನಿನ ತಿಳುವಳಿಕೆ, ಉತ್ತಮ ಜೀವನ ಮೌಲ್ಯ ಬೆಳೆಸಿಕೊಳ್ಳಬೇಕು

ಹಾವೇರಿ::

             ಇಂದಿನ ಮಕ್ಕಳೆ ನಾಳಿನ ಪ್ರಜೆಗಳು ಹಾಗಾಗಿ ಪ್ರತಿಯೊಬ್ಬರೂ ಕಾನೂನಿನ ಅರಿವು ಹೊಂದುವುದು ಅತ್ಯಗತ್ಯವಾಗಿದೆ ಹಾಗೂ ಉತ್ತಮ ಜೀವನ ಮೌಲ್ಯಗಳನ್ನು ರೂಢಿಸಿಕೊಳ್ಳಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀಮತಿ ಎಸ್.ಎಚ್. ರೇಣುಕಾದೇವಿ ಅವರು ಹೇಳಿದರು.

              ಶನಿವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ, ಪೊಲೀಸ್ ಹಾಗೂ ಅರಣ್ಯ ಇಲಾಖೆ ವತಿಯಿಂದ ನಗರದ ಸೇಂಟ್ ಆನ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಆಯೋಜಿಸಲಾದ ಆಸಿಡ್ ದಾಳಿಗೊಳಗಾದವರಿಗೆ ಕಾನೂನು ಸೇವೆಗಳು, ಮೂಲ ಭೂತ ಕಾನೂನುಗಳು, ಮಧ್ಯಸ್ಥಿಕೆ ಜನತಾ ನ್ಯಾಯಾಲಯ ಕುರಿತು ಕಾನೂನು ಸಾಕ್ಷರತಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

              ಪರಿಸರ ಸಂರಕ್ಷಣೆ ಹಿನ್ನೆಲೆಯಲ್ಲಿ ವನ ಸಂರಕ್ಷಣೆ ಸಹ ನಮ್ಮ ಮೂಲಭೂತ ಕರ್ತವ್ಯವಾಗಿದೆ. ಗಿಡಗಳನ್ನು ನೆಡುವ ಮೂಲಕ ನಮ್ಮ ಕರ್ತವ್ಯಮಾಡಬೇಕು. ಪ್ರತಿದಿನ ಗಿಡನೆಡುವ ಕೆಲಸವಾಗಬೇಕು ಹಾಗೂ ನೆಟ್ಟ ಗಿಡಗಳನ್ನು ಪೋಷಿಸಿ ಮರವಾಗಿ ಬೆಳೆಸುವ ಕೆಲಸವಾಗಬೇಕು. ಮನುಷ್ಯ ಸಂಘ ಜೀವಿ ಮೊದಲು ನಮ್ಮ ಮನೆ ಸುಧಾರಿಸಬೇಕು, ಮನೆ ಸುಧಾರಿಸಿದರೆ ಓಣಿ, ಊರು, ಹೋಬಳಿ, ತಾಲೂಕು ಹಾಗೂ ಜಿಲ್ಲೆಗಳು ಸುಧಾರಿಸುತ್ತವೆ. ವಿದ್ಯಾರ್ಥಿಗಳು ಚನ್ನಾಗಿ ಓದಿದರೆ ಅರಿವು ಮೂಡುತ್ತದೆ. ವಿದ್ಯಾರ್ಥಿ ಜೀವನದಿಂದಲೇ ಒಳ್ಳೆಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಹಾಗೂ ಸಹೋದರತ್ವ ಮನೋಭಾವನೆ ರೂಢಿಸಿಕೊಂಡು ಉತ್ತಮ ಪ್ರಜೆಗಳಾಗಿ ಬಾಳಬೇಕು ಎಂದು ಹೇಳಿದರು.

              ಅತಿಥಿಗಳಾಗಿ ಭಾಗವಹಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ ಅವರು ಮಾತನಾಡಿ, ಯುವತಿಯರೇ ಆಸಿಡ್ ದಾಳಿಗೆ ಒಳಗಾಗುತ್ತಿದ್ದಾರೆ. ಈ ದಾಳಿಗಳು ಆಸ್ತಿ ವಿಷಯಕ್ಕೆ ಇನ್ನಾವುದೋ ವಿಷಯಕ್ಕೆ ನಡೆಯುವುದಿಲ್ಲ, ಯುವತಿಯರು ಪ್ರೇಮ ನಿವೇದನೆ ನಿರಾಕರಿಸಿದಾಗ ಯುವಕರು ಆಸಿಡ್ ದಾಳಿ ನಡೆಸುತ್ತಾರೆ. ಇದೊಂದು ಅಮಾನವೀಯ ಕೃತ್ಯವಾಗಿದೆ. ವಿಜ್ಞಾನ ಮತ್ತು ತಂತ್ರಜ್ಞಾನದಿಂದ ಜೀವನ ಉತ್ತಮ ಪಡಿಸಲು ಕಂಡುಹಿಡಿದ ರಾಸಾಯನಿಕಗಳ ದುರುಪಯೋಗವಾಗುತ್ತಿದೆ. ಕಿಶೋರಾವಸ್ಥೆಯಲ್ಲಿ ಕನಸುಗಳು ಗರಿಗೆದರುತ್ತವೆ. ಅದಕ್ಕೆ ಪೂರಕವೆಂಬಂತೆ ಮಾಧ್ಯಮಗಳಲ್ಲಿ ಭಿತ್ತರವಾಗುವ ದೃಶ್ಯಗಳು ಕಾರಣವಾಗುತ್ತಿವೆ. ವೈಯಕ್ತಿಕ ಪರಿವರ್ತನೆ ಹಾಗೂ ಸಚ್ಚಾರಿತ್ರದಿಂದ ಉತ್ತಮ ಹಾಗೂ ಅಪರಾಧ ಮುಕ್ತ ಸಮಾಜ ನಿರ್ಮಾಣ ಸಾಧ್ಯ. ಪ್ರತಿಯೊಬ್ಬರಿಗೂ ಒಳಿತು ಕೆಡಕು ಯೋಚಿಸುವ ಶಕ್ತಿ ಇದೆ. ಸಚ್ಚಾರಿತ್ರ ಬದುಕು ನಡೆಸಲು ಕಾನೂನು ಬದ್ಧ ಜೀವನ ನಡೆಸಬೇಕು ಎಂದು ಹೇಳಿದರು.

                ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ವೈ.ಎಲ್.ಲಾಡಖಾನ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಕೋಮುಗಲಭೆ ಸಂತ್ರಸ್ಥರು, ನೆರೆ ಸಂತ್ರಸ್ಥರು ಹಾಗೂ ಒಂದು ಲಕ್ಷ ರೂ.ಗಿಂತ ಕಡಿಮೆ ಆದಾಯ ಹೊಂದಿದವರು ತಾಲೂಕು, ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಕಾನೂನು ಸೇವೆಗಳ ಪ್ರಾಧಿಕಾರದಿಂದ ಉಚಿತ ಕಾನೂನು ಸೇವೆ ಪಡೆಯಬಹುದು. ಕಾನೂನು ಎಲ್ಲರಿಗೂ ಒಂದೆ ಆಗಿರುತ್ತದೆ. ಜೀವನದ ಪ್ರತಿ ಹಂತದಲ್ಲೂ ಕಾನೂನಿನ ಅವಶ್ಯಕತೆ ಇದೆ. ಎಲ್ಲರೂ ಕಾನೂನು ಪಾಲನೆ ಮಾಡಬೇಕು ಎಂದರು.
ಪೆನಲ್ ವಕೀಲರಾದ ಸಿ.ಜಿ.ನೆಗಳೂರ ಅವರು ಅಸಿಡ್ ದಾಳಿಗೊಳಗಾದವರಿಗೆ ಕಾನೂನು ಸೇವೆಗಳ ಕುರಿತು, ಕುಮಾರಿ ಆರ್.ಐ.ಚನ್ನಪಟ್ಟಣ ಅವರು ಮೂಲಭೂತ ಹಕ್ಕುಗಳು ಹಾಗೂ ಕರ್ತವ್ಯಗಳ ಕುರಿತು ಹಾಗೂ ಸಿ.ಎ.ಶಿರಸಪ್ಪನವರ ಅವರು ಮಧ್ಯಸ್ಥಿಕೆ ಕೇಂದ್ರ ಮತ್ತು ಜನತಾ ನ್ಯಾಯಾಲಯಗಳ ಕುರಿತು ಉಪನ್ಯಾಸ ನೀಡಿದರು.

               ಪ್ರಾಂಶುಪಾಲರಾದ ಸಿಸ್ಟರ್ ಸೋಲಿ ಅವರು ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಅಶೋಕ ಸಿ.ನೀರಲಗಿ, ಕಾರ್ಯದರ್ಶಿ ದೇವರಾಜ ನಾಯ್ಡು, ಹಾವೇರಿ ವಿಭಾಗದ ಉಪ ಸಂರಕ್ಷಣಾಧಿಕಾರಿ ಗಿರೀಶ ಎಸ್.ಸಿ., ಶಾಲಾ ಶಿಕ್ಷಕರು ಭಾಗವಹಿಸಿದ್ದರು.

Recent Articles

spot_img

Related Stories

Share via
Copy link