ಬ್ಯಾಡಗಿ:
ಪದಕಗಳನ್ನು ತಂದು ಕೊಟ್ಟಾಗಲಷ್ಟೇ ಗೆದ್ದು ಸಂಭ್ರಮಿಸುವ ಬದಲು ಅಂತರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಸಾಧನೆ ತೋರಿದ ಕ್ರೀಡಾಪಟುಗಳನ್ನು ಸ್ವಾತಂತ್ರ್ಯ ಹೋರಾಟಗಾರರ ಮಾದರಿಯಲ್ಲಿ ಜಯಂತಿ ಆಚರಣೆ ಸೇರಿದಂತೆ ಜೀವನ ಚರಿತ್ರೆಗಳು ಶಾಲಾ ಪಠ್ಯಪುಸ್ತಕಗಳಲ್ಲಿ ಪ್ರಕಟಿಸುವ ಕೆಲಸ ಸರ್ಕಾರಗಳಿಂದಾಗಬೇಕು ಎಂದು ಪ್ರಾಚಾರ್ಯ ಲಿಂಗಯ್ಯ ಹಿರೇಮಠ ಅಭಿಪ್ರಾಯ ವ್ಯಕ್ತಪಡಿಸಿದರು.
ತಾಲೂಕಿನ ಶಿಡೇನೂರ ಗ್ರಾಮದ ಡಾ.ಬಿ.ಆರ್.ಅಂಬೇಡ್ಕರ ಸ್ವತಂತ್ರ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಹಾಕಿ ಮಾಂತ್ರಿಕ ಧ್ಯಾನಚಂದ್ ಇವರ ಸವಿನೆನಪಿಗಾಗಿ ಆಯೋಜಿಸಿದ್ದ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡಿದರು.
ಖ್ಯಾತ ಹಾಕಿ ಕ್ರೀಡಾಪಟು, ಧ್ಯಾನಚಂದ್ ಸೇರಿದಂತೆ ಹಾರುವ ಕುದುರೆ ಎಂದೇ ಖ್ಯಾತರಾಗಿದ್ದ ಮಿಲ್ಕಾಸಿಂಗ್, ಸ್ಪ್ರಿಂಟ್‍ರ ಪಿ.ಟಿ.ಉಷಾ, ಅಶ್ವಿನಿ ನಾಚಪ್ಪ ಇನ್ನಿತರ ದೇಶದ ಬಹಳಷ್ಟು ಕ್ರೀಡಾ ತಾರೆಯರು ತಮ್ಮ ಜೀವವನ್ನೇ ಮುಡುಪಾಗಿಟ್ಟು ವಿವಿಧ ಕ್ರೀಡೆಗಳಲ್ಲಿ ಉತ್ತಮ ಸಾಧನೆಯನ್ನು ತೋರಿದ್ದಾರೆ, ಆದರೆ ಕೆಲವೇ ವರ್ಷಗಳಲ್ಲಿ ಅವರ ಹೆಸರು, ಸಾಧನೆ, ನೆನಪುಗಳು ಕೆಲ ದಿನಗಳಷ್ಟೇ ಉಳಿದಿವೆ, ನಂತರದ ಪೀಳಿಗೆ ಈ ಹೆಸರುಗಳು ಯಾರದ್ದು ಎಂದು ಕೇಳುವಂತಹ ಸ್ಥಿತಿ ಎದುರಾಗಿದೆ ಎಂದರು.
ಬಲಿಷ್ಟ ಭಾರತಕ್ಕಾಗಿ ಕ್ರೀಡೆಗಳು ಬೇಕು: ಕಬಡ್ಡಿ ತರಬೇತುದಾರಳಾದ ಮಂಜುಳ ಬಣಕಾರ ಮಾತನಾಡಿ, ತಂತ್ರಜ್ಞಾನದ ಹಿಂದೆ ಬಿದ್ದಿರುವ ಯುವ ಜನಾಂಗವು ಕ್ರೀಡಾಂಗಣದಿಂದ ದೂರ ಉಳಿಯುತ್ತಿರುವುದು ಖೇದದ ಸಂಗತಿ, ಇದರಿಂದಾಗಿ ಜಗತ್ತಿನ ಪ್ರಮುಖ ಕ್ರೀಡಾಕೂಟಗಳಲ್ಲಿ ಭಾರತ ಪದಕ ಗಳಿಸಲು ಇಂದಿಗೂ ಪರದಾಡುತ್ತಿದೆ, ದೇಶದಲ್ಲಿ ಕ್ರೀಡೆ ಎಂದರೆ ಕೇವಲ ಕ್ರಿಕೆಟ್ ಎನ್ನುವಂತಾಗಿದ್ದು ಇದೊಂದು ದುರಂತದ ಸಂಗತಿ ಇದರ ಹಾವಳಿಗೆ ದೇಶಿಯ ಕ್ರೀಡೆಗಳಾದ ಕಬಡ್ಡಿ, ಕೋಕೋ, ಕುಸ್ತಿ ಸೇರಿದಂತೆ ಮಲ್ಲಕಂಬ ಕ್ರೀಡೆಗಳು ಮಂಕಾಗಿದ್ದು ಕ್ರಮೇಣವಾಗಿ ನೇಪಥ್ಯಕ್ಕೆ ಸರಿಯುತ್ತಿವೆ, ಇತ್ತಿಚೇಗೆ ಪ್ರೋ ಕಬಡ್ಡಿ ಕ್ರೀಡಾ ಆಯೋಜನೆಯಿಂದ ವಿಶ್ವದಲ್ಲಿಯೇ ಕಬಡ್ಡಿ ಕ್ರೀಡೆ ಫಿನಿಕ್ಸ್‍ನಂತೆ ಎದ್ದು ನಿಂತಿದ್ದು ದೇಶಿಯ ಕ್ರೀಡೆಗಳಿಗಿರುವ ತಾಕತ್ತನ್ನು ಮತ್ತೊಮ್ಮೆ ಸಾಬಿತುಪಡಿಸುವ ಮೂಲಕ ಭಾರತವನ್ನು ಇನ್ನಿತರ ದೇಶಗಳು ತಿರುಗಿ ನೋಡುವಂತೆ ಮಾಡಿದೆ ಎಂದರು.
ವೇದಿಕೆಯಲ್ಲಿ ಉಪನ್ಯಾಸಕರಾದ ರಾಮಪ್ಪ, ತಿಪ್ಪಣ್ಣ, ಬಿ.ಆರ್.ಕಡೇಮನಿ, ಎಸ್.ಎನ್.ಕಬ್ಬೂರ, ಎಲ್.ಎಸ್.ನಾಯಕ್, ಶಿವಾನಂದ ಬೆನ್ನೂರ, ಕ್ರೀಡಾಪಟುಗಳಾದ ಕಾರ್ತಿಕ್, ನಿರ್ಮಲ, ನವೀನ್, ಅಶ್ವಿನಿ, ರವಿ, ಚೇತನ್, ಗಣೇಶ, ಶಿವರಾಜ್, ಅಂಜು ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ