ತಿಮ್ಮಪ್ಪನ ವಡವೆ ಎಲ್ಲಿದೆ ? ಕೇಂದ್ರ ಮಾಹಿತಿ ಹಕ್ಕು ಆಯೋಗದ ಪ್ರಶ್ನೆ

ನವದೆಹಲಿ: 
            ಹಂಪಿಯ ವಿಶ್ವವಿಖ್ಯಾತ ವಿಜಯನಗರದ ಅರಸು ಶ್ರೀ ಕೃಷ್ಣ ದೇವರಾಯ  ತಿರುಪತಿ ತಿಮ್ಮಪ್ಪನಿಗೆ ಕಾಣಿಕೆಯಾಗಿ ನೀಡಿದ್ದ  ಚಿನ್ನಾಭರಣಗಳು ಈಗ ಎಲ್ಲಿವೆ ಎಂದು ಕೇಂದ್ರ ಮಾಹಿತಿ ಹಕ್ಕು ಆಯೋಗ ಗಂಭೀರ ಪ್ರಶ್ನೆ ಎತ್ತಿದೆ.
ಕೆಲದಿನಗಳಿಂದ ದೇವಾಲಯದಲ್ಲಿ ಹಳೆಯ ಆಭರಣಗಳ ನಾಪತ್ತೆ ವಿವಾದಕ್ಕೆ ಸಿಲುಕಿದ್ದ ತಿರುಪತಿ ತಿರುಮಲ ದೇವಸ್ಥಾನ ಮಂಡಳಿಗೆ ಈಗ ಹೊಸ ತಲೆನೋವೊಂದು ಶುರುವಾಗಿದ್ದು, 16ನೇ ಶತಮಾನದ ವಿಜಯನಗರದ ಅರಸು ಶ್ರೀ ಕೃಷ್ಣ ದೇವರಾಯ ನೀಡಿದ್ದ ಆಭರಣಗಳು ಈಗ ಎಲ್ಲಿವೆ ಎಂದು ಕೇಂದ್ರೀಯ ಮಾಹಿತಿ ಹಕ್ಕು ಆಯೋಗವು ಪ್ರಶ್ನೆ ಮಾಡಿದೆ. ಈ ಬಗ್ಗೆ ಸಿಐಸಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ , ಕೇಂದ್ರ ಸಾಂಸ್ಕೃತಿಕ ಸಚಿವಾಲಯ , ಆಂಧ್ರ ಪ್ರದೇಶ ಸರ್ಕಾರ ಮತ್ತು ಟಿಟಿಡಿ ಗೆ  ಪ್ರಶ್ನೆ ಮಾಡಿದ್ದು, ಈ ಪ್ರಶ್ನೆ ಇದೀಗ ಹಲವು ಗೊಂದಲಕ್ಕೆ ಮತ್ತು ಕುತೂಹಲಕ್ಕೂ ಕಾರಣವಾಗಿದೆ. 
ತಿರುಪತಿ ತಿರುಮಲ ದೇವಾಲಯವನ್ನು ವಿಶ್ವ ಪಾರಂಪರಿಕ ಸ್ಮಾರಕಗಳು ಎಂದು ಘೋಷಿಸುವ ನಿಟ್ಟಿನಲ್ಲಿ ಪ್ರಧಾನಿ ಕಾರ್ಯಾಲಯ ಯಾವ ಕ್ರಮ ಜರುಗಿಸಿದೆ ಎಂಬ ಪ್ರಶ್ನೆ ಕೇಳಿ ಬಿಕೆಆರ್ ಎಸ್ ಅಯ್ಯಂಗಾರ್ ಎಂಬುವವರು ಕೇಂದ್ರೀಯ ಮಾಹಿತಿ ಆಯೋಗದ ಮೊರೆ ಹೋಗಿದ್ದರು. ಅಲ್ಲದೆ ತಮ್ಮ ಅರ್ಜಿಯಲ್ಲಿ ರಾಜ ಶ್ರೀ ಕೃಷ್ಣ ದೇವರಾಯ ಅವರು ತಿರುಮಲ ತಿರುಪತಿ ದೇಗುಲಕ್ಕೆ ನೀಡಿದ್ದ ಆಭರಣಗಳ ಕುರಿತು ತಾವು ಕೇಳಿದ್ದ ಪ್ರಶ್ನೆಗೆ ಟಿಟಿಡಿ ಸಮಂಜಸವಾಗಿ ಉತ್ತರಿಸಿಲ್ಲ ಎಂದೂ ದೂರಿದ್ದರು. 
            ಈ ಹಿನ್ನಲೆಯಲ್ಲಿ ಅಯ್ಯಂಗಾರ್ ಅವರ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ಮಾಹಿತಿ ಆಯುಕ್ತ ಶ್ರೀಧರ್ ಆಚಾರ್ಯುಲು ಅವರು, ತಿರುಮಲ ತಿರುಪತಿ ದೇವಸ್ಥಾನವನ್ನು ರಾಷ್ಟ್ರೀಯ ಸ್ಮಾರಕವನ್ನಾಗಿ ಮಾಡಲು ಸರ್ಕಾರ ಕೈಗೊಂಡ ಕ್ರಮಗಳ ಕುರಿತು ಬಹಿರಂಗ ಮಾಡುವಂತೆ ಪ್ರಧಾನಿ ಕಾರ್ಯಾಲಯಕ್ಕೆ ಸೂಚಿಸಿದೆ. ಅಲ್ಲದೆ ದೇವಾಲಯಕ್ಕೆ ಶ್ರೀ ಕೃಷ್ಣ ದೇವರಾಯ ನೀಡಿದ್ದ ಆಭರಣಗಳು ಈಗ ಎಲ್ಲಿದೆ ಎಂಬುದರ ಬಗ್ಗೆಯೂ ಸ್ಪಷ್ಟನೆ ನೀಡುವಂತೆ ಆಂಧ್ರ ಪ್ರದೇಶ ಸರ್ಕಾರವೂ ಸೇರಿದಂತೆ ಸಂಬಂಧಪಟ್ಟ ಸಚಿವಾಲಯ ಮತ್ತು ಇಲಾಖೆಗಳಿಗೆ ಸೂಚನೆ ನೀಡಿದೆ. 
             ಕೃಷ್ಣ ದೇವರಾಯನು ತಿರುಪತಿ ದೇವಸ್ಥಾನಕ್ಕೆ ಆಭರಣಗಳನ್ನು ನೀಡಿದ್ದ ಎಂದು ದೇವಾಲಯದಲ್ಲಿನ ಕಲ್ಲಿನ ಕೆತ್ತನೆಗಳ ಮೇಲೆ ಇದೆ. ಹಾಗಿದ್ದಲ್ಲಿ ಕೃಷ್ಣ ದೇವರಾಯ ನೀಡಿದ್ದ ಆಭರಣಗಳು ಯಾವುವು ಮತ್ತು ಈಗ ಅವು ಎಲ್ಲಿವೆ  ಎಂದು ಅಯ್ಯಂಗಾರ್ ಅವರು ಈ ಹಿಂದೆ ಟಿಟಿಡಿಗೆ ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿ ಅರ್ಜಿ ಸಲ್ಲಿಕೆ ಮಾಡಿದ್ದರು. ಇದಕ್ಕೆ ಉತ್ತರಿಸಿದ್ದ ಟಿಟಿಡಿ 1956ಕ್ಕಿಂತ ಮುಂಚೆ ದೇಗುಲಕ್ಕೆ ಕಾಣಿಕೆಯಾಗಿ ಬಂದ ಆಭರಣಗಳ ಬಗ್ಗೆ ನೋಂದಣಿ ಪುಸ್ತಕ ಇಲ್ಲ ಎಂದು ಉತ್ತರಿಸಿತ್ತು.
              ಇದೇ ವಿಚಾರವಾಗಿ ಭುಗಿಲೆದ್ದಿದ್ದ ವಿವಾದಕ್ಕೆ ಸಂಬಂಧಿಸಿದಂತೆ ತಿರುಮಲ ದೇಗುಲಕ್ಕೆ ಯಾವ ರಾಜ ಯಾವ ಯಾವ ಆಭರಣಗಳನ್ನು ನೀಡಿದ್ದ ಎಂಬುದನ್ನು ತಿಳಿಯಲು ಪುರಾತತ್ವ ಇಲಾಖೆಯ ತಜ್ಞರ ಸಮಿತಿ ರಚನೆ ಮಾಡಿತ್ತು. ಸಮಿತಿ ಸದಸ್ಯರು ದೇಗುಲದ ಆವರಣದಲ್ಲಿರುವ ಕಲ್ಲಿನ ಕೆತ್ತನೆಗಳ ಆಧಾರದ ಮೇಲೆ ಇರುವ ಆಭರಣಗಳನ್ನು ತಾಳೆ ಮಾಡಿ ನೋಡಿದಾಗ ಅಲ್ಲಿ ಶ್ರೀ ಕೃಷ್ಣ ದೇವರಾಯ ನೀಡಿದ್ದ ಎನ್ನಲಾದ ಆಭರಣಗಳು ಇರಲಿಲ್ಲ ಅಥವಾ ಇರುವ ಆಭರಣಗಳು ಶ್ರೀ ಕೃಷ್ಣ ದೇವರಾಯ ನೀಡಿದ್ದ  ಅಭರಣ ಎಂದು ಸಾಬೀತಾಗಿಲ್ಲ. ಹೀಗಾಗಿ ಈ ಆಭರಣಗಳು ಕಳವಾಗಿರಬಹುದು ಅಥವಾ ಇಲ್ಲದೇ ಇರಬಹುದು ಇಲ್ಲವೇ ತಮ್ಮ ಮೂಲ ಸ್ವರೂಪ ಕಳೆದುಕೊಂಡಿರಬಹುದು ಎಂದು ಪುರಾತತ್ವ ಇಲಾಖೆ ತಿಳಿಸಿತ್ತು. ಅಂತೆಯೇ ಪ್ರಕರಣದಲ್ಲಿ ಸಂಸ್ಕೃತಿ ಇಲಾಖೆ ನಿರ್ದೇಶಕಿ ದಿವ್ಯ ನಿರ್ಲಕ್ಷ್ಯ ಕೂಡ ಎದ್ದುಕಾಣುತ್ತಿದೆ ಎಂದೂ ಸಮಿತಿ ಆರೋಪಿಸಿತ್ತು. ದೇಗುಲದಲ್ಲಿರುವ ತಿರುವಾಭರಣಂ ನೋಂದಣಿ ಪುಸ್ತಕದಲ್ಲಿ 1952ರಿಂದೀಚೆಗೆ ದೇಗುಲಕ್ಕೆ ನೀಡಿರುವ ಕಾಣಿಕೆಗಳ ಕುರಿತು ಮಾಹಿತಿ ಇದೆಯೇ ಹೊರತು ಅದಕ್ಕಿಂತ ಮೊದಲು ನೀಡಿದ್ದ ಆಭರಣಗಳ ಕುರಿತು ನೋಂದಣಿಯಾಗಿಲ್ಲ ಎಂದು ಹೇಳಿತ್ತು.
    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link