ಹರಪನಹಳ್ಳಿ :
ಡಾ.ಸರ್ವಪಲ್ಲಿ ರಾಧಾಕೃಷ್ಣ ಜನ್ಮದಿನದ ಅಂಗವಾಗಿ ಬುಧುವಾರ ತಾಲೂಕಿನಾಧ್ಯಂತ ಶಿಕ್ಷಕರ ದಿನಾಚರಣೆಯನ್ನು ಸಡಗರ, ಸಂಭ್ರಮದಿಂದ ಆಚರಿಸಿದರು.
ಪಟ್ಟಣದಲ್ಲಿ ಶಿಕ್ಷಣ ಇಲಾಖೆ ಹಾಗೂ ವಿವಿಧ ಶಿಕ್ಷಕರ ಸಂಘಟನೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆಯಲ್ಲಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಿಂದ ತರಳಬಾಳು ಕಲ್ಯಾಣಮಂಟಪದವರೆಗೂ ಮೆರವಣಿಗೆ ಮಾಡಲಾಯಿತು. ಗುರುಕುಲ, ಮದ್ಯಕಾಲೀನ ಹಾಗೂ ಆಧುನಿಕ ಶಿಕ್ಷಣ ಪದ್ದತಿ ಬಿಂಬಿಸುವ ಪೋಷಾಕು ಧರಿಸಿದ ಮಕ್ಕಳ ತಂಡಗಳು ಮೆರವಣಿಗೆಯಲ್ಲಿ ಗಮನ ಸೆಳೆದವು.
ಬಳಿಕ ತರಳಬಾಳು ಕಲ್ಯಾಣ ಮಂಟಪದ ಆವರಣದಲ್ಲಿ ಜರುಗಿದ ಸಮಾರಂಭವನ್ನು ಉದ್ಘಾಟಿಸಿ ಶಾಸಕ ಜಿ.ಕರುಣಾಕರ ರೆಡ್ಡಿ ಮಾತನಾಡಿ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ, ಗುರುಭವನ ಸ್ಥಿತಿಗತಿ ಸ್ವಯಂ ಪರಿಶೀಲಿಸಿ ಶಾಸಕರ, ಸಂಸದ ಅನುದಾನದಲ್ಲಿ ಹಂತ ಹಂತವಾಗಿ ಅಭಿವೃದ್ದಿ ಕೈಗೊಳ್ಳಲಾಗುವುದು. ರಾಜ್ಯಾಧ್ಯಂತ ಇರುವ ಶಿಕ್ಷಕರ ಸಮಸ್ಯೆಗಳ ಕುರಿತು ವಿವಿಧ ಸಂಘಟನೆಗಳು ಸಲ್ಲಿಸಿರುವ ಮನವಿಯನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರುವುದಾಗಿ ತಿಳಿಸಿದರು.
ಮುಖ್ಯಶಿಕ್ಷಕರಿಗೆ ಬಿಸಿಯೂಟ ಜವಾಬ್ದಾರಿ ವಹಿಸಿದ್ದು ಶಾಲೆಯಲ್ಲಿ ಸಮಸ್ಯೆಗಳ ಸಂಖ್ಯೆ ಹೆಚ್ಚಾಗಿದೆ, ಇವುಗಲ ಪರಿಹಾರಕ್ಕೆ ಪ್ರತ್ಯೇಕ ಹುದ್ದೆ ಸೃಷ್ಟಿಸುವ ಬಗ್ಗೆ ಸರ್ಕಾರದ ಗಮನಸೆಳೆಯುವ ಕೆಲಸ ಮಾಡುವೆ ಎಂದರು.
ತಾಲೂಕಿನಲ್ಲಿರುವ 125 ಶಿಕ್ಷಕರ ಕೊರತೆ, ಶಿಥಿಲಗೊಂಡ ಶಾಲೆಗಳ ದುರಸ್ಥಿ ಮಾಡಿಸುತ್ತೇನೆ. ವಿದ್ಯೆ ಕಳ್ಳತನ ಮಾಡುವ ವಸ್ತುವಲ್ಲ. ಇಂದಿನ ಪತ್ರಿಕೆಗಳಲ್ಲಿ ಕೆಲ ದೊಡ್ಡ ವ್ಯಕ್ತಿಗಳು ತಮ್ಮ ನೆಚ್ಚಿನ ಶಿಕ್ಷಕರ ಬಗ್ಗೆ ಹೇಳಿಕೊಂಡಿದ್ದಾರೆ. ದೇಶದ ಅಭಿವೃದ್ದಿ ಶಿಕ್ಷಣ ಕ್ಷೇತ್ರದಿಂದ ಸಿಗುತ್ತದೆ. ಡಾ.ಸರ್ವಪಲ್ಲಿ ರಾಧಕೃಷ್ಣನ್ ಅವರು ಜ್ಞಾನ ಪಂಡಿತರಾಗಿ ಇಡೀ ವಿಶ್ವದ ಗಮನ ಸೆಳೆದಿದ್ದಾರೆ ಎಂದರು.
ಉಪನ್ಯಾಸ ನೀಡಿದ ತುಮಕೂರು ಸಂಸ್ಕøತಿ ಚಿಂತಕ ಡಾ.ನಟರಾಜ ಬೂದಾಳು, ಅವರು ರಾಧಕೃಷ್ಣ ಅವರ ಮೆಚ್ಚಿನ ತತ್ವಶಾಸ್ತ್ರ ಕೋರ್ಸ್‍ನ್ನು ರಾಷ್ಟ್ರದ ಎಲ್ಲ ವಿವಿಗಳಲ್ಲಿ ಮುಚ್ಚುವ ಕೆಲಸ ಮಾಡಲಾಗುತ್ತಿದೆ. ಜೈನ, ಬೌಧ್ಧ, ವೇದ, ಉಪನಿಷತ್ತುಗಳಂತಹ ವಿಷಯಗಳ ಪಾಶ್ಚಾತ್ಯರಾಷ್ಟ್ರಗಳಲ್ಲಿ ಅಸ್ತಿತ್ವದಲ್ಲಿ ಆದರೆ ಭಾರತದಲ್ಲಿ ಉಳಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು. ಇದೆ ವೇಳೆ ನಿವೃತ್ತ ನೌಕರರು, ಮೃತ ಶಿಕ್ಷಕರ ಕುಟುಂಬದವರನ್ನು ಸನ್ಮಾನಿಸಿದರು. ತಾ.ಪಂ.ಅಧ್ಯಕ್ಷೆ ಅನ್ನಪೂರ್ಣಮ್ಮ, ಪುರಸಭೆ ಅಧ್ಯಕ್ಷ ಎಚ್.ಕೆ.ಹಾಲೇಶ್, ಜಿ.ಪಂ.ಅಧ್ಯಕ್ಷೆ ಕೆ.ಆರ್.ಜಯಶೀಲ, ಉಪಾಧ್ಯಕ್ಷ ರಶ್ಮಿ ರಾಜಪ್ಪ, ಸದಸ್ಯರಾದ ಡಾ.ಮಂಜುನಾಥ್ ಉತ್ತಂಗಿ, ಅರುಂಡಿ ಸುವರ್ಣ, ಡಿ.ಸಿದ್ದಪ್ಪ, ಎಚ್.ಬಿ.ಪರಶುರಾಮಪ್ಪ ಮಾತನಾಡಿದರು.
ತಾ.ಪಂ.ಉಪಾಧ್ಯಕ್ಷ ಮಂಜನಾಯ್ಕ, ಪುರಸಭೆ ಉಪಾಧ್ಯಕ್ಷ ಸತ್ಯನಾರಾಯಣ, ನೌಕರರ ಸಂಘದ ಅಧ್ಯಕ್ಷ ಬಸವರಾಜ ಸಂಗಪ್ಪನವರ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಅಂಜಿನಪ್ಪ, ರಾಜಶೇಖರ, ಸಿ.ಗಂಗಾಧರ, ಆಂಜನೇಯ, ಸಿದ್ದಲಿಂಗನಗೌಡ, ಜನಾರ್ಧನರೆಡ್ಡಿ, ರೇಣುಕಾಬಾಯಿ ಇತರರಿದ್ದರು.