ಕೂಡ್ಲಿಗಿ:
ಶಿಶು ಮತ್ತು ಬಾಣಂತಿ ಮರಣ ಪ್ರಮಾಣ ಇಳಿಕೆಗೆ ಅಂಗನವಾಡಿ, ಆಶಾ ಕಾರ್ಯಕರ್ತೆಯರು ಪ್ರಾಮಾಣಿಕ ಕೆಲಸ ಮಾಡಬೇಕೆಂದು ಹಿರಿಯ ಸಿವಿಲ್ ನ್ಯಾಯಾಧೀಶ ನಿತಿನ್ ಯಶವಂತರಾವ್ ಹೇಳಿದರು. ಅವರು ಮಂಗಳವಾರ ತಾಲ್ಲೂಕು ಕಾನೂನು ಸೇವೆಗಳ ಸಮಿತಿ, ತಾಲ್ಲೂಕು ವಕೀಲರ ಸಂಘ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಏರ್ಪಡಿಸಿದ್ದ ಪೋಷಣಾ ಮಾಸ ಅಭಿಯಾನ, ಮಾತೃವಂದನಾ ಸಪ್ತಾಹ ಹಾಗೂ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಆರೋಗ್ಯವಂತ ತಾಯಿಯಿಂದ ಮಾತ್ರ ಆರೋಗ್ಯವಂತ ಶಿಶು ಜನಿಸಲು ಸಾಧ್ಯ. ಈ ನಿಟ್ಟಿನಲ್ಲಿ ಗರ್ಭಿಣಿಯರ ಆರೋಗ್ಯ ರಕ್ಷಣೆಗೆ ಪೂರಕ ಯೋಜನೆಯನ್ನು ಸಾಕಾರಗೊಳಿಸಲು ಶ್ರಮ ಹಾಕಬೇಕು. ಸರ್ಕಾರ ವಿವಿಧ ಇಲಾಖೆಗಳ ಮುಖಾಂತರ ಗರ್ಭಿಣಿಯರಿಗೆ, ಬಾಣಂತಿಯರಿಗೆ, ಮಕ್ಕಳಿಗೆ ಪೌಷ್ಟಿಕ ಆಹಾರ ನೀಡಲಾಗುತ್ತಿದೆ. ಇದರಿಂದ ಇತ್ತೀಚೆಗೆ ದೇಶದ ಶಿಶು ಮರಣ ಪ್ರಮಾಣ ಇಳಿಕೆಯಾಗಿದೆ. ಇದು ಇನ್ನಷ್ಟು ಸುಧಾರಣೆಯಾಗಲು ಎಲ್ಲರು ಶ್ರಮಿಸಬೇಕು. ಜನ ಸಾಮಾನ್ಯರಲ್ಲಿ ಕಾನೂನು ಅರಿವು ಮೂಡಿಸಲು ಪ್ರತಿ ತಿಂಗಳು 5 ಕಾನೂನು ಅರಿವು, ನೆರವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ಎ.ಆರ್. ಮಧುಸೂದನ್ ಮಾತನಾಡಿ, ಪ್ರಧಾನ ಮಂತ್ರಿ ಮಾತೃವಂದನಾ ಯೋಜನೆಯಡಿ ಗರ್ಭಿಣಿಯರಿಗೆ ಮೂರು ಕಂತಿನಲ್ಲಿ ಒಟ್ಟು 5 ಸಾವಿರ ರೂ. ಆರ್ಥಿಕ ನೆರವು ನೀಡಲಾಗುತ್ತದೆ ಎಂದರು.
ತಾಲ್ಲೂಕು ಆರೋಗ್ಯಧಿಕಾರಿ ಡಾ. ಷಣ್ಮುಖ ನಾಯ್ಕ್, ವಕೀಲರ ಸಂಘದ ಉಪಾಧ್ಯಕ್ಷ ಟಿ.ಎ. ಸಲೀಂ, ಕಾರ್ಯದರ್ಶಿ ಡಿ.ಕೆ.ಬಿ. ರಾಜ, ಖಜಾಂಚಿ ಜಿ.ಎಂ. ಮಲ್ಲಿಕಾರ್ಜುನಯ್ಯ, ಕೆ.ಎಚ್.ಎಂ. ಶೈಲಜಾ ವೇದಿಕೆಯಲ್ಲಿದ್ದರು. ವಕೀಲರಾದ ಬಿ.ಎಸ್. ಕೋಟ್ರಗೌಡ, ಎಲ್.ಎಸ್. ಬಷೀರ್ ಆಹಮದ್, ಎಸ್. ಮಲ್ಲಿಕಾರ್ಜುನ, ಯು. ಚಂದ್ರಶೇಕರ್, ಅಂಗನವಾಡಿ ಮೇಲ್ವಿಚಾರಕಿಯರಾದ ರೇಣುಕಾ ಜುಟ್ಲೆ, ಅನುಪಮ, ಅನ್ನಪೂರ್ಣ, ಬಸಮ್ಮ ಈರಣ್ಣನವರು ಹಾಗೂ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ