ವಿದೇಶದಲ್ಲೂ ಭಾರತೀಯ ಇಂಜಿನಿಯರ್ಸ್‍ಗೆ ಬೇಡಿಕೆ ಶಾಸಕ ತಿಪ್ಪಾರೆಡ್ಡಿ ಅಭಿಮತ

ಚಿತ್ರದುರ್ಗ;
             ಇತ್ತೀಚಿನ ದಿನಗಳಲ್ಲಿ ಕೆಲವು ಇಂಜಿನಿಯರ್‍ಗಳು ಕಾಮಗಾರಿ ನಿರ್ವಹಿಸಿದ ಬಗ್ಗೆ ಪ್ರಮಾಣ ಪತ್ರ ಪಡೆಯುವ ಉದ್ದೇಶದಿಂದ ಅತ್ಯಂತ ಕಡಿಮೆ ಹಣದಲ್ಲಿ ಕಾಮಗಾರಿ ನಿರ್ವಹಿಸುವ ಟೆಂಡರ್ ಸಲ್ಲಿಸುತ್ತಾರೆ. ಇದು ಸರಿಯಾದ ಕ್ರಮವಲ್ಲ ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ತಿಳಿಸಿದ್ದಾರೆ.
              ಭಾರತ ರತ್ನ ಸರ್ ಎಂ.ವಿಶ್ವೇಶ್ವರಯ್ಯ ಅವರ ಜನ್ಮದಿನಾಚರಣೆ ಅಂಗವಾಗಿ ನಗರದ ತರಾಸು ರಂಗಮಂದಿರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಚಿತ್ರದುರ್ಗ ಡಿಸ್ಟ್ರಿಕ್ಟ್ ಪ್ರಾಕ್ಟಿಸಿಂಗ್ ಆರ್ಕಿಟೆಕ್ಟ್ಸ್ ಮತ್ತು ಸಿವಿಲ್ ಇಂಜಿಯರ್ಸ್ ಅಸೋಸಿಯೇಷನ್ ಉದ್ಘಾಟನಾ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಇಂಜಿನಿಯರ್‍ಗಳು ಹಾಗೂ ಗುತ್ತಿಗೆದಾರರು ಕೇವಲ ಹಣ ಉಳಿಸುವ ಕಡೆ ಗಮನ ನೀಡದೆ, ಗುಣಮಟ್ಟದ ಕಾಮಗಾರಿಯ ಬಗ್ಗೆ ಚಿಂತನೆ ನಡೆಸಬೇಕೆಂದು ಸಲಹೆ ಮಾಡಿದರು.
              ಕಡಿಮೆ ಪ್ರಮಾಣದ ಹಣದಲ್ಲಿ ಕಾಮಗಾರಿ ನಿರ್ವಹಿಸುವುದಾಗಿ ಟೆಂಡರ್ ಸಲ್ಲಿಸಿದಲ್ಲಿ ಗುಣಮಟ್ಟ ಕಾಪಾಡಲು ಹೇಗೆÉ ಸಾಧ್ಯ?. ಟೆಂಡರ್ ಪಡೆದ ಕೆಲಸದಲ್ಲಿ ಹಣ ಉಳಿಸುವ ನಿಟ್ಟಿನಲ್ಲಿ ಕಾಮಗಾರಿ ಗುಣಮಟ್ಟ ಕಳಪೆಯಾಗಬಹುದು. ಇದರಿಂದ ನೀವು ಮಾಡಿದ ಕೆಲಸ ವ್ಯರ್ಥವಾಗುತ್ತದೆ. ಅಲ್ಲದೇ ಸರ್ಕಾರ ಆ ಯೋಜನೆಗೆ ನೀಡುವ ಹಣವೂ ಸಹ ಅನಗತ್ಯ ವೆಚ್ಚ ಮಾಡಿದಂತಾಗುತ್ತದೆ. ಹಾಗಾಗಿ ಇಂಜಿನಿಯರ್‍ಗಳು ಟೆಂಡರ್ ಪಡೆಯುವಾಗ ಯೋಚನೆ ಮಾಡಿ ಪಡೆಯಬೇಕೆಂದು ಕಿವಿಮಾತು ಹೇಳಿದರು.
              ಸರ್ ಎಂ.ವಿಶ್ವೇಶ್ವರಯ್ಯ ಓರ್ವ ಶ್ರೇಷ್ಠ ಇಂಜಿನಿಯರ್ ಆಗಿದ್ದರು. ಅಸಾಧ್ಯವಾದ ಕೆಲಸಗಳನ್ನು ಸಾಧ್ಯ ಮಾಡಿ ತೋರಿಸುತ್ತಿದ್ದರು. ಇವರ ಬಗ್ಗೆ ತಿಳಿಯದಿರುವ ವ್ಯಕ್ತಿಗಳೇ ಇಲ್ಲ ಎನ್ನಬಹುದು. ಇವರ ಕಾಲದಲ್ಲಿ ನಮ್ಮ ರಾಜ್ಯ ಉತ್ತಮ ಪ್ರಗತಿ ಕಂಡಿತು. ಮೈಸೂರಿನ ಕೃಷ್ಣರಾಜ ಸಾಗರಕ್ಕೆ ನಿರ್ಮಿಸಿರುವ ಕನ್ನಂಬಾಡಿ ಕಟ್ಟೆ, ಭದ್ರಾವತಿ ಐರನ್ ಅಂಡ್ ಸ್ಟೀಲ್ ಕಾರ್ಖಾನೆ, ಜೋಗ ಜಲಪಾತದಲ್ಲಿ ಜಲ ವಿದ್ಯುತ್ ಉತ್ಪಾದನಾ ಘಟಕ ಸೇರಿದಂತೆ ಅನೇಕ ಮಹತ್ವದ ಕೆಲಸಗಳನ್ನು ಮಾಡಿದರು ಎಂದು ಸ್ಮರಿಸಿದರು.
            ಕನ್ನಂಬಾಡಿ ಕಟ್ಟುವಾಗ ಮೈಸೂರು ಅರಸರು ತುಂಬಾ ಶ್ರಮಪಟ್ಟಿದ್ದರು. ಹಣದ ಕೊರತೆಯಾದ ಸಂದರ್ಭದಲ್ಲಿ ತಮ್ಮ ಖಜಾನೆಯಲ್ಲಿದ್ದ ಒಡವೆಗಳನ್ನು ಒತ್ತೆ ಇಟ್ಟು ಹಣ ಕೂಡಿಸಿದ್ದರು. ಮೈಸೂರು ಅರಸರ ಇಂತಹ ಪ್ರೋತ್ಸಾಹದಿಂದ ವಿಶ್ವೇಶ್ವರಯ್ಯ ಉತ್ತಮ ಡ್ಯಾಂ ನಿರ್ಮಾಣ ಮಾಡಿದರು. ಇಂದಿನ ದಿನಗಳಲ್ಲಿ ಭದ್ರಾ ಮೇಲ್ದಂಡೆ ಯೋಜನೆ, ಕೃಷ್ಣಾ ಮೇಲ್ದಂಡೆ ಯೋಜನೆ ಸೇರಿದಂತೆ ಹಲವು ಯೋಜನೆಗಳು ಅನೇಕ ವರ್ಷಗಳಿಂದ ಆಮೆಗತಿಯಲ್ಲಿ ಸಾಗುತ್ತಿವೆ. ಆದರೆ ವಿಶ್ವೇಶ್ವÀ್ವರಯ್ಯ ಅವರು ಉತ್ತಮವಾಗಿ ಕೆಲಸ ಮಾಡಿದ್ದರೆಂದು ಸ್ಮರಿಸಿದರು.
             ಇಂತಹ ಉತ್ತಮ ಇಂಜಿನಿಯರ್ ಅವರ ಹುಟ್ಟು ಹಬ್ಬದ ದಿನದಂದು ಎಲ್ಲ ಇಂಜಿನಿಯರ್‍ಗಳು ಸೇರಿ ಸಂಘÀ ಸ್ಥಾಪಿಸಿರುವುದು ಉತ್ತಮ ಬೆಳವಣಿಗೆ. ರಸ್ತೆ, ಕಟ್ಟಡ ಸೇರಿದಂತೆ ಎಲ್ಲ ಕೆಲಸಗಳಲ್ಲಿ ಗುಣಮಟ್ಟದ ಕಾಮಗಾರಿ ನಡೆಸುವಲ್ಲಿ ಸಂಘ ಶ್ರಮಿಸಬೇಕು. ಸಿವಿಲ್ ಇಂಜಿನಿಯರ್‍ಗಳಿಗೆ ಸರ್ಕಾರಿ ನೌಕರಿ ಸಿಗದಿದ್ದರೂ ಸಹ ಖಾಸಗಿ ವಲಯದಲ್ಲಿ ಸಾಕಷ್ಟು ಅವಕಾಶಗಳು ದೊರೆಯುತ್ತವೆ. ಭಾರತದ ಇಂಜಿನಿಯರ್‍ಗಳಿಗೆ ವಿದೇಶಗಳಲ್ಲಿ ಉತ್ತಮ ಬೇಡಿಕೆ ಇದೆ ಎಂದರು.
             ಶಾಸಕ ಟಿ.ರಘುಮೂರ್ತಿ ಮಾತನಾಡಿ, ಇಂದು ಕಾಳ ಬದಲಾಗಿದೆ. ಅಂದ ಮಾತ್ರಕ್ಕೆ ಇಂಜಿನಯರ್‍ಗಳು ವ್ಯವಸ್ಥೆಯನ್ನು ದೂಷಿಸುವುದು ಸರಿಯಲ್ಲ. ಏನೇ ಒತ್ತಡವಿದ್ದರೂ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ಗುಣಮಟ್ಟ ಗಮನದಲ್ಲಿಟ್ಟುಕೊಂಡು ಕೆಲಸ ಮಾಡಬೇಕು. ತಪ್ಪಿದಲ್ಲಿ ನಿಮಗೆ ಕಾಮಗಾರಿ ಕೊಟ್ಟವರು ತೊಂದರೆ ಅನುಭವಿಸಬೇಕಾಗುತ್ತದೆ. ನೀವು ಮಾಡುವ ಕೆಲಸ ಶಾಶ್ವತವಾಗಿರಬೇಕು. ಕೇವಲ ಲಾಭ ಮಾಡುವುದೇ ಉದ್ದೇಶವಲ್ಲ. ಉತ್ತಮ ಕೆಲಸ ಮಾಡಿ ಹೆಸರು ಗಳಿಸಿ ಎಂದು ಹೇಳಿದರು.
               ರಾಜಕಾರಣಿಗಳ ಅಥವಾ ಬೇರೆ ಯಾರದೋ ಒತ್ತಡಕ್ಕೆ ಮಣಿದು ಕಳಪೆ ಕಾಮಗಾರಿ ಮಾಡಿದರೆ ತೊಂದರೆಗೆ ಸಿಲುಕುವುದು ಇಂಜಿನಿಯರ್ಸ್ ಅಥವಾ ಗುತ್ತಿಗೆದಾರರು. ಇದಕ್ಕೆ ಅವಕಾಶ ಮಾಡಿಕೊಡದೆ ಗುಣಮಟ್ಟ ಹಾಗೂ ಶಾಶ್ವತ ಕಾಮಗಾರಿ ಮಾಡಿ ಜನರ ವಿಶ್ವಾಸ ಗಳಿಸುವಂತೆ ಸಲಹೆ ನೀಡಿ, ಇಂಜಿನಿಯರ್‍ಗಳು ಗುಣಮಟ್ಟದ ಕಾಮಗಾರಿ ಮಾಡದಿದ್ದರೆ ಒಂದಲ್ಲ ಒಂದು ದಿನ ತೊಂದರೆಗೆ ಸಿಲುಕುವುದು ಗ್ಯಾರಂಟಿ. ಒತ್ತಡಕ್ಕೆ ಸಿಲುಕಿ ಕಳಪೆ ಕಾಮಗಾರಿ ಮಾಡಿದರೆ ಸಮಸ್ಯೆದ ಸುಳಿಗೆ ಸಿಲುಕಿ ಒದ್ದಾಡಬೇಕಾಗುತ್ತದೆ. ಏಕೆಂದರೆ ನಾನು ಇಂಜಿನಿಯರ್ ಆಗಿರುವುದರಿಂದ ಇದರ ಅನುಭವ ಇದೆ. 22 ವರ್ಷ ಸೇವೆ ಸಲ್ಲಿಸಿ ನಂತರ 2ನೇ ಭಾರಿಗೆ ಶಾಸಕನಾಗಿದ್ದೇನೆ. ಗುಣಮಟ್ಟ ಇಲ್ಲದ ಕಾಮಗಾರಿ ಮಾಡಬೇಡಿ ಎಂದು ಕಿವಿಮಾತು ಹೇಳಿದರು.

               ಇಂಜಿನಿಯರ್ಸ್‍ಗಳು ಕೇವಲ ಪ್ಲಾನ್ ಹಾಕಿಕೊಟ್ಟರೆ ಮುಗಿಯುವುದಿಲ್ಲ ಅದಕ್ಕೆ ತಕ್ಕಂತೆ ವಿನ್ಯಾಸ ಕೂಡ ಮುಖ್ಯ. ಕೆಲವರು ಕಡಿಮೆ ಹಣದಲ್ಲಿ ಉತ್ತಮ ಕಟ್ಟಡ ನಿರ್ಮಾಣ ಮಾಡಿಕೊಡುವಂತೆ ಹೇಳುವುದು ಸಹಜ. ಆಗ ಅವರಿಗೆ ಮನವರಿಕೆ ಮಾಡಿಕೊಟ್ಟು ಅದರ ಸಾಧಕಬಾಧಕಗಳನ್ನು ತಿಳಿಸಿ ಉತ್ತಮ ಕಟ್ಟಡ ನಿರ್ಮಾಣ ಮಾಡಬೇಕು. ಕಾಮಗಾರಿ ವಿಚಾರದಲ್ಲಿ ಇಂಜಿನಿಯರಗಳು ತಮ್ಮತನವನ್ನು ಉಳಿಸಿಕೊಳ್ಳಬೇಕು. ಒಂದೇ ಒಂದು ಕಾಮಗಾರಿಯಲ್ಲಿ ಹೆಚ್ಚಿನ ಲಾಭಾಂಶ ನಿರೀಕ್ಷೆ ಮಾಡದೆ ಹೆಚ್ಚು ಕಾಮಗಾರಿಗಳನ್ನು ಕೈಗೊಂಡರೆ ಉತ್ತಮ ಲಾಭ ಸಿಗಲಿದೆ ಎಂದರು.

               ಸಂಸದ ಬಿ.ಎನ್.ಚಂದ್ರಪ್ಪ ಮಾತನಾಡಿ, ವಿಶ್ವೇಶ್ವರಯ್ಯ ಅವರ ಜೊತೆ ಕೆಲಸ ಮಾಡಿದ ಸಹಾಯಕರನ್ನು ಸ್ಮರಿಸಬೇಕು. ಮುಖ್ಯವಾಗಿ ಕೆಆರ್‍ಎಸ್ ನಿರ್ಮಾಣ ಮಾಡಲು ಅವಕಾಶ ಮಾಡಿಕೊಟ್ಟ ಮೈಸೂರು ಮಹಾರಾಜರನ್ನು ಸ್ಮರಿಸಬೇಕು ಎಂದು ಹೇಳಿದರು.

               ಶ್ರೀ ಶಿವಲಿಂಗಾನಂದ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಸಂಸ್ಥೆ ಅಧ್ಯಕ್ಷ ಪಿ.ಎಲ್.ಸುರೇಶ್‍ರಾಜು, ಕಾರ್ಯದರ್ಶಿ ಕೆ.ಎಸ್.ಅರುಣ್‍ಕುಮಾರ್, ಉಪಾಧ್ಯಕ್ಷರಾದ ಸುಜಾತ, ರವಿಕುಮಾರ್, ಖಜಾಂಚಿ ಎಂ.ವಿ.ದಿವಾಕರ್, ಸಂಘಟನಾಕಾರ್ಯದರ್ಶಿ ಆರ್.ಡಿ.ಶ್ರೀಕಾಂತ್ ಮತ್ತಿತರರು ಭಾಗವಹಿಸಿದ್ದರು. ಸುನಿತಾ ದಿವಾಕರ್ ಪ್ರಾರ್ಥಿಸಿದರು. ಇದೇ ಸಂದರ್ಭದಲ್ಲಿ ಹನುಮಂತಪ್ಪ, ಸುಜಾತ, ನಂದಕುಮಾರ್‍ರನ್ನು ಸನ್ಮಾನಿಸಲಾಯಿತು.

               ಇದೇ ಸಂದರ್ಭದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಚಿತ್ರಬಿಡಿಸುವ ಸ್ಪರ್ಧೆ, ಮಳೆಕೊಯ್ಲು ಸಲಹೆಗಾರ ದೇವರಾಜರೆಡ್ಡಿ ಅವರಿಂದ ಜಲ ಮರುಪೂರಣ ಕುರಿತು ಉಪನ್ಯಾಸ, ಸಂಜೆ ನೃತ್ಯ ವೈಭವ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು.

                ಸೆ. 16ರಂದು ಬೆಳಿಗ್ಗೆ 6 ಗಂಟೆಗೆ ಕೋಟೆಯಿಂದ ಪರಿಸರ ನಡಿಗೆ, ಸಸಿ ನೆಡುವ ಕಾರ್ಯಕ್ರಮ, 9 ಗಂಟೆಗೆ ಪಕ್ಷಿಗಳ ಮಹತ್ವ, 10 ಗಂಟೆಗೆ ಸೋಲಾರ್ ಎನರ್ಜಿ ಕುರಿತು ಉಪನ್ಯಾಸ, ಸಂಜೆ 6 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ

Recent Articles

spot_img

Related Stories

Share via
Copy link