ಹುಳಿಯಾರು:
ಪ್ರತಿದಿನ ಕನ್ನಡ ದಿನಪತ್ರಿಕೆಗಳನ್ನು ಓದುವುದರಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುಕೂಲವಾಗುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪ್ರಚಲಿತ ವಿದ್ಯಾಮಾನಗಳ ಬಗ್ಗೆ ಹೆಚ್ಚಾಗಿ ಕೇಳಲಾಗುತ್ತದೆ. ಹಾಗಾಗಿ ಪ್ರತಿ ದಿನ ಕನಿಷ್ಠ ಎರಡು ದಿನಪತ್ರಿಕೆ ಓದುವುದನ್ನು ಅಭ್ಯಾಸ ಮಾಡಿಕೊಳ್ಳಿ. ಸಾಧ್ಯವಾದರೆ ಅಂದಿನ ದಿನಪತ್ರಿಕೆಯ ಪ್ರಮುಖ ಘಟನೆಗಳನ್ನು ಬರೆದಿಡಿ. ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ದಿನಪತ್ರಿಕೆಗಳ ಓದಿನಿಂದ ಮಾತ್ರ ತಿಳಿದುಕೊಳ್ಳಲು ಸಾಧ್ಯ ಎಂದು ಚಿಕ್ಕಮಗಳೂರು ಜಿಲ್ಲೆಯ ಸಹಕಾರ ಸಂಘಗಳ ಇಲಾಖೆ ಉಪನಿರ್ದೇಶಕ ಮತ್ತು ಹಿರಿಯ ಲೆಕ್ಕ ಪರಿಶೋಧಕರ ಬಸವರಾಜ್ ಕಿವಿಮಾತು ಹೇಳಿದರು.
ಹುಳಿಯಾರು ಬಿಎಂಎಸ್ ಪ್ರಥಮ ದರ್ಜೆ ಕಾಲೇಜಿನ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಉಪನ್ಯಾಸ ನೀಡಿ ಮಾತನಾಡಿದ ಅವರು ದಿನಪತ್ರಿಕೆಗಳ ಪ್ರಾಮುಖ್ಯತೆ ಬಗ್ಗೆ ವಿವರಿಸಿದರು. ಪ್ರತಿದಿನ ದಿನಪತ್ರಿಕೆಗಳನ್ನು ಪೂರ್ತಿಯಾಗಿ ಓದಿದರೆ ಶೇಕಡ ಐವತ್ತು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ವಿಯಾಗಬಹುದು ಎಂದರು. ವಿದ್ಯಾರ್ಥಿಗಳು ಕೆಎಎಸ್ ಪರೀಕ್ಷೆಯನ್ನು ತೆಗೆದುಕೊಳ್ಳುವ ರೀತಿ, ಕೆಎಎಸ್ ಪ್ರಿಲಿಮ್ಸ್ ಮತ್ತು ಮುಖ್ಯ ಪರೀಕ್ಷೆಗೆ ಹೇಗೆ ತಯಾರಾಗಬೇಕು, ರಾಜ್ಯ ಸರ್ಕಾರದ ವಿವಿಧ ಹುದ್ದೆಗಳನ್ನು ವಿವಿಧ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳು ಹೇಗೆ ಇರುತ್ತವೆ ಎಂಬುದರ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಪ್ಲೇಸ್ಮೆಂಟ್ ಸೆಲ್ ಅಧಿಕಾರಿ ಲೋಕೇಶ್ ನಾಯ್ಕ ಮಾತನಾಡಿ ಗ್ರಾಮೀಣ ಭಾಗದ ಕೆಂಕೆರೆ ಸಮೀಪದ ಹೊನ್ನಯ್ಯನ ಪಾಳ್ಯದ ಬಸವರಾಜ್ ಅವರು ಇಂದು ಕೆಎಎಸ್ ಕೇಡರ್ ಅಧಿಕಾರಿಯಾಗಿರುವುದು ಹೆಮ್ಮೆಯ ವಿಚಾರ ಎಂದರು.ಈ ಸಂದರ್ಭದಲ್ಲಿ ಪ್ರಾಂಶುಪಾಲ ಬಿಳಿಗೆರೆ ಕೃಷ್ಣಮೂರ್ತಿ, ದೈಹಿಕ ಶಿಕ್ಷಣ ನಿರ್ದೇಶಕ ಆರ್.ಶಿವಯ್ಯ, ಪ್ರೊ.ಫರ್ಹಾನಾಜ್, ಪಂಚನಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಅತಿಥಿ ಉಪನ್ಯಾಸಕ ನರೇಂದ್ರ ಬಾಬು ಮೊದಲಾದವರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








