ಚಳ್ಳಕೆರೆ
ಕಳೆದ ಹಲವಾರು ದಶಕಗಳಿಂದ ಸಮಾಜದ ಸರ್ವತೋಮುಖ ಅಭಿವೃದ್ಧಿಗಾಗಿ ದಕ್ಷತೆ ಮತ್ತು ಪ್ರಾಮಾಣಿಕತೆಯಿಂದ ಸಮಾಜದ ಹಿತಕ್ಕಾಗಿ ಕಾರ್ಯನಿರ್ವಹಿಸುವ ಪತ್ರಿಕಾ ಕ್ಷೇತ್ರದಲ್ಲಿ ಇಂದಿಗೂ ಸಹ ಉತ್ತಮ ವ್ಯಕ್ತಿಗಳು ಇದ್ಧಾರೆ. ಅವರ ಪ್ರಾಮಾಣಿಕ ಕಾರ್ಯವೇ ಸಮಾಜಕ್ಕೆ ಸ್ಪೂರ್ತಿ. ಯಾವುದೇ ರೀತಿಯ ಆಮಿಷಗಳಿಗೆ ಒಳಗಾಗದೇ ನಿರ್ಭಿತಿಯಿಂದ ಪತ್ರಿಕಾ ಮೌಲ್ಯಗಳನ್ನು ಎತ್ತಿ ಹಿಡಿಯುವ ವ್ಯಕ್ತಿಗಳು ನಮ್ಮಲ್ಲಿರುವೇ ಸಂತಸ ವಿಷಯವೆಂದು ನಿವೃತ್ತ ಬೆಸ್ಕಾಂ ಅಧಿಕಾರಿ ಹಾಗೂ ಸಮಾಜ ಸೇವಕ ಪಿ.ರುದ್ರಮೂರ್ತಿ ತಿಳಿಸಿದರು.
ಅವರು, ಸೋಮವಾರ ಸಂಜೆ ಇಲ್ಲಿನ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಾಲಯದಲ್ಲಿ ರಾಜ್ಯ ಮಟ್ಟದ ಪತ್ರಿಕಾ ಪ್ರಶಸ್ತಿ ಪಡೆದ ವೀರೇಶ್‍ರವರ ಸನ್ಮಾನ ಹಾಗೂ ನೂತನ ಪದಾಧಿಕಾರಿಗಳ ಅಧಿಕಾರ ಸ್ವೀಕಾರ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.
ಎಲ್‍ಐಸಿ ದುಗ್ಗಾವರ ರಂಗಸ್ವಾಮಿ ಅಭಿಮಾನಿ ಬಳಗದ ಅಧ್ಯಕ್ಷ ದುಗ್ಗಾವರ ರಂಗಸ್ವಾಮಿ ಮಾತನಾಡಿ, ಹಲವಾರು ಕ್ಷೇತ್ರಗಳಲ್ಲಿ ಅನೇಕ ವೈಪಲ್ಯಗಳನ್ನು ನಾವು ಕಾಣಬಹುದಾದರೂ ಇಲ್ಲಿನ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಾಮಾಣಿಕ ಕಾರ್ಯವೈಖರಿ ಈ ವೃತ್ತಿಯ ಗೌರವವನ್ನು ಎತ್ತಿ ಹಿಡಿದಿದೆ. ಇಂತಹ ಸಂದರ್ಭದಲ್ಲಿ ಗ್ರಾಮೀಣ ಭಾಗದ ಸುದ್ದಿಗಳಿಗೆ ಪ್ರಥಮ ಆದ್ಯತೆ ನೀಡುವ ವರದಿಗಳ ಹಿನ್ನೆಲೆಯಲ್ಲಿ ಎನ್.ವೀರೇಶ್‍ರವರಿಗೆ ರಾಜ್ಯ ಮಟ್ಟದ ಪ್ರಶಸ್ತಿ ಬಂದಿರುವುದು ಸಂತಸ ವಿಷಯವೆಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಂಘದ ಪ್ರಧಾನ ಕಾರ್ಯದರ್ಶಿ ಕೊರ್ಲಕುಂಟೆ ತಿಪ್ಪೇಸ್ವಾಮಿ, ರಾಜ್ಯ ಹಿಂದುಳಿದ ಮಾನ್ಯತೆ ಪಡೆದ ಪತ್ರಕರ್ತರ ಸಂಘದ ವತಿಯಿಂದ ವಿಮರ್ಶತ್ಮಾಕ ವರದಿಗಾಗಿ ಎನ್.ವೀರೇಶ್‍ರವರಿಗೆ ರಾಜ್ಯಮಟ್ಟದ ಪ್ರಶಸ್ತಿ ದೊರಕಿದೆ. ಕಳೆದ ಹತ್ತಾರು ವರ್ಷಗಳಿಂದ ವರದಿಗಾರರಾಗಿ ಹಾಗೂ ಪತ್ರಿಕಾ ವಿತರಕರಾಗಿ ದಕ್ಷತೆಯಿಂದ ಕಾರ್ಯನಿರ್ವಹಿಸಿದ್ದು, ಈ ಪ್ರಶಸ್ತಿ ಲಭ್ಯವಾಗಲು ಕಾರಣವಾಗಿದೆ ಎಂದರು.
ತಾಲ್ಲೂಕು ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಟಿ.ಜೆ.ತಿಪ್ಪೇಸ್ವಾಮಿ ಮಾತನಾಡಿ, ಕಳೆದ ಹಲವಾರು ವರ್ಷಗಳಿಂದ ಈ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ಪತ್ರಕರ್ತರಿಗೆ ಮೂಲಭೂತ ಸೌಕರ್ಯಗಳ ಕೊರತೆ ಇದ್ದು, ನಗರಸಭಾ ಆಡಳಿತ ಈ ಬಗ್ಗೆ ಗಮನಹರಿಸಬೇಕು ಎಂದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ನಗರಸಭಾ ಸದಸ್ಯ ಟಿ.ಮಲ್ಲಿಕಾರ್ಜುನ, ಪತ್ರಕರ್ತರ ಎಲ್ಲಾ ಬೇಡಿಕೆಗಳ ಈಡೇರಿಕೆಗೆ ಶಾಸಕರೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯಿತಿ ಸದಸ್ಯ ಇ.ರಾಮಾರೆಡ್ಡಿ, ಎಂ.ಎನ್.ಮೃತ್ಯುಜಯ, ಕಾಂತರಾಜು, ಬೇಕರಿ ವಿಜಯ್, ನಗರಂಗೆರೆ ಉಪಾಧ್ಯಕ್ಷ ಬಿ.ಸಿ.ಸತೀಶ್, ಮನ್ನೇಕೋಟೆ ತಿಪ್ಪೇಸ್ವಾಮಿ ಮುಂತಾದವರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ