ಕೂಡ್ಲಿಗಿ:
ಡಾ. ವಿಷ್ಣುವರ್ಧನ್ ಅವರು ಚಿತ್ರರಂಗದ ಮೂಲಕ ಕನ್ನಡ ನಾಡಿಗೆ ಅನನ್ಯ ಕೊಡುಗೆ ನೀಡಿದ್ದಾರೆ ಎಂದು ಹಿರೇಮಠದ ಪ್ರಶಾಂತ ಸಾಗರ ಸ್ವಾಮಿ ಹೇಳಿದರು. ವಿಷ್ಣು ಅಭಿಮಾನಿಗಳ ಸಂಘ ಹಾಗೂ ವಿಷ್ಣು ಮೊಬೈಲ್ ಕ್ಯಾಂಟೀನ್ ವತಿಯಿಂದ ಮಂಗಳವಾರ ಏರ್ಪಡಿಸಿದ್ದ ಡಾ. ವಿಷ್ಣುವರ್ಧನ್ ಅವರ 68ನೇ ಜನ್ನ ದಿನಾಚರಣೆಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ವಿಷ್ಣುವರ್ಧನ್ ಅವರು ತಮ್ಮ ಪಾತ್ರಗಳಲ್ಲಿ ಪರಕಾಯ ಪ್ರವೇಶ ಮಾಡುತ್ತಿದ್ದರು. ಅಂತಹ ಕಲಾವಿದರನ್ನು ಸ್ಮರಿಸುವುದು ಶ್ಲಾಘನೀಯ. ಎಲ್ಲಾ ಅಭಿಮಾನಿಗಳು ಕೇವಲ ಚಿತ್ರ ನಟರ ಮೇಲೆ ಅಭಿಮಾನ ಇಟ್ಟುಕೊಳ್ಳದೆ, ಅವರಂತೆ ನಾಡು, ನುಡಿಗೆ ಶ್ರಮಿಸಬೇಕು ಎಂದು ಹೇಳಿದರು.
ಕೇಕ್ ಕತ್ತರಿಸುವ ಮೂಲಕ ದಿನಾಚರಣೆಗೆ ಚಾಲನೆ ನೀಡಿದ ಪಿಎಸ್‍ಐ ಎಂ. ಹಾಲೇಶ್, ಹೊಟ್ಟೆ ಪಾಡಿಗಾಗಿ ಸಾಮಾನ್ಯ ಮೊಬೈಲ್ ಕ್ಯಾಂಟೀನ್ ನಡೆಸುತ್ತಿರುವ ಕರೇಗೌಡ ಅವರ ಕುಟುಂಬ ಅನೇಕ ವಷಗಳಿಂದ ಡಾ. ವಿಷ್ಣುವರ್ಧನ್ ಜನ್ಮ ದಿನವನ್ನು ಆಚರಣೆ ಮಾಡುವುದರ ಜೊತೆಗೆ, ಅಂದು ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ಮಾಡುತ್ತಿರುವುದು ಕಲಾವಿದರ ಮೇಲೆ ಅವರು ಇಟ್ಟಿರುವ ಗೌರವಕ್ಕೆ ಸಾಕ್ಷಿಯಾಗಿದೆ ಎಂದರು.
ವಿಷ್ಣು ಸೇನೆ ಮೊಬೈಲ್ ಕ್ಯಾಂಟೀನ್ ಮಾಲಿಕ ಎಂ. ಕರೆಗೌಡ, ಎಂ. ಬೋಜನಗೌಡ, ಎಂ. ಬಸಮ್ಮ, ಭಾರತಿ, ಮಮತ, ಲೋಕೇಶ್, ಶರಣಪ್ಪ, ಅಂಗಡಿ ಗಣೇಶ್, ಗಡ್ಡೇರ್ ರವಿಕುಮಾರ್, ಎಂ.ಎಂ. ನಟರಾಜ, ಮಹಂತೇಶ, ಬಾಲರಾಜ ಶೆಟ್ಟಿ, ವಿಷ್ಣು ಸೇನಾ ಸಮಿತಿಯ ತಾಲ್ಲೂಕು ಅಧ್ಯಕ್ಷ ಓಬಣ್ಣ, ಉಪಾಧ್ಯಕ್ಷ ಮಹಮದ್ ಸಾಧಿಕ್, ರಾಜು, ಕಾವಲ್ಲಿ ನಾಗರಾಜ, ಸೇರಿದಂತೆ ಅನೇಕ ಜನ ವಿಷ್ಣುವರ್ದನ್ ಅಭಿಮಾನಿಗಳು ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ವಿಷ್ಣುಸೇನಾ ಮೊಬೈಲ್ ಕ್ಯಾಂಟೀನ್ ವತಿಯಿಂದ ಅಭಿಮಾನಿಗಳಿಗೆ ಹಾಗೂ ಸಾರ್ವಜನಿಕರಿಗೆ ಅನ್ನಸಂತರ್ಪಣೆ ಮಾಡಲಾಯಿತು. ನಂತರ ಗದುಗಿನ ವೀರೇಶ್ವರ ಪುಣ್ಯಾಶ್ರಮದ ಅಂಧ ಕಲಾವಿದರಿಂದ ಸಂಗೀತ ಕಾರ್ಯಕ್ರಮ ನಡೆಸಿಕೊಡಲಾಯಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ