ಬರಪರಿಸ್ಥಿತಿ ನಿರ್ವಹಣೆ : ಪ್ರತಿನಿತ್ಯ ನಿಗಾವಹಿಸಲು ಡಿಸಿಗಳಿಗೆ ಸಿಎಂ ಸೂಚನೆ

ಬಳ್ಳಾರಿ

      ಬರಪರಿಸ್ಥಿತಿ ನಿರ್ವಹಣೆ ಕುರಿತು ಪ್ರತಿನಿತ್ಯ ನಿಗಾವಹಿಸಿ ಜಿಲ್ಲೆಯಾದ್ಯಂತ ಪ್ರವಾಸ ಮಾಡಿ ಸ್ಥಿತಿಗತಿ ಅರಿಯಿರಿ ಹಾಗೂ ಅತ್ಯಂತ ಪರಿಣಾಮಕಾರಿಯಾಗಿ ಬರಪರಿಸ್ಥಿತಿ ನಿರ್ವಹಣೆ ಮಾಡುವಂತೆ ಮಾನ್ಯ ಮುಖ್ಯಮಂತ್ರಿಗಳಾದ ಎಚ್.ಡಿ.ಕುಮಾರಸ್ವಾಮಿ ಅವರು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

     ಬರಪರಿಸ್ಥಿತಿ ನಿರ್ವಹಣೆಗೆ ಸಂಬಂಧಿಸಿದಂತೆ ಗೃಹಕಚೇರಿ ಕೃಷ್ಣ ಮೂಲಕ ಜಿಲ್ಲಾಧಿಕಾರಿ ಮತ್ತು ಜಿಪಂ ಸಿಇಒಗಳೊಂದಿಗೆ ಬುಧವಾರ ವಿಡಿಯೋ ಸಂವಾದ ನಡೆಸಿ ಅಗತ್ಯ ಸೂಚನೆಗಳನ್ನು ನೀಡಿದರು.

      ಕುಡಿಯುವ ನೀರಿನ ವ್ಯವಸ್ಥೆ, ಜಾನುವಾರು ಸಂರಕ್ಷಣೆಗಾಗಿ ಮೇವು ಲಭ್ಯತೆ, ಗೋಶಾಲೆ ಹಾಗೂ ಮೇವು ಬ್ಯಾಂಕ್, ಗುಳೆ ತಡೆಗಟ್ಟುವ ನಿಟ್ಟಿನಲ್ಲಿ ಉದ್ಯೋಗ ಸೃಜನೆ ಕಾಮಗಾರಿಗಳ ಪ್ರಗತಿ ಸೇರಿದಂತೆ ವಿವಿಧ ರೀತಿಯ ಬರಪರಿಸ್ಥಿತಿ ನಿರ್ವಹಣೆ ಕೆಲಸಗಳನ್ನು ಸಮರ್ಪಕವಾಗಿ ಮಾಡುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ಹೆಚ್ಚಿನ ಮುತುವರ್ಜಿ ವಹಿಸಬೇಕು ಹಾಗೂ ಈ ಕುರಿತು ಪ್ರತಿನಿತ್ಯ ನಿಗಾವಹಿಸಿ ಕ್ರಮಕೈಗೊಳ್ಳುವ ಕೆಲಸ ಮಾಡಿ ಎಂದು ಅವರು ಕಟ್ಟುನಿಟ್ಟಾಗಿ ಸೂಚಿಸಿದರು.

     ಜನ-ಜಾನುವಾರುಗಳು ಸಂಕಷ್ಟದಲ್ಲಿವೆ, ಹೊಟ್ಟೆಪಾಡಿಗಾಗಿ ಗುಳೆಹೋಗ್ತಾ ಇದ್ದಾರೆ, ಜಿಲ್ಲಾಧಿಕಾರಿಗಳು,ಜಿಪಂ ಸಿಇಒ, ಸಹಾಯಕ ಆಯುಕ್ತರು, ತಹಸೀಲ್ದಾರರು ಜಿಲ್ಲೆಯಾದ್ಯಂತ ನಿರಂತರ ಪ್ರವಾಸ ಮಾಡಿ ಅಂದಾಗ ಮಾತ್ರ ಬರಪರಿಸ್ಥಿತಿ ಅರಿವಾಗುತ್ತದೆ ಹಾಗೂ ನಿರ್ವಹಣೆ ಮಾಡುವ ನಿಟ್ಟಿನಲ್ಲಿ ಅನುಕೂಲವಾಗುತ್ತದೆ ಎಂದು ಹೇಳಿದ ಅವರು ಹವಾನಿಯಂತ್ರಿತ ಕೋಣೆಯಲ್ಲಿ ಕುಳಿತು ಪೋನ್ ಮೂಲಕ ನಿರ್ವಹಣೆ ಮಾಡಿ ಕೈತೊಳೆದುಕೊಳ್ಳಬೇಡಿ ಎಂದು ಖಡಕ್ ಆಗಿ ಹೇಳಿದರು.

     ಕೊಳವೆಬಾವಿ ಕೊರೆಯುವುದಕ್ಕೆ, ಬಾಡಿಗೆ ಕೊಳವೆ ಬಾವಿ ಪಡೆಯುವುದಕ್ಕೆ, ಟ್ಯಾಂಕರ್ ಮೂಲಕ ನೀರು ಪೂರೈಸುವುದು ಸೇರಿದಂತೆ ಬರಪರಿಸ್ಥಿತಿ ನಿರ್ವಹಣೆ ನಿಟ್ಟಿನಲ್ಲಿ ಯಾವುದೇ ರೀತಿಯ ಹಣದ ಸಮಸ್ಯೆ ಇಲ್ಲ; ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ 720 ಕೋಟಿ ರೂ. ಲಭ್ಯವಿದೆ. ಅದನ್ನು ಬಳಸಿಕೊಂಡು ಕೆಲಸ ಮಾಡಿ ಎಂದು ಹೇಳಿದರು.

     ಪ್ರಸ್ತುತ ಟ್ಯಾಂಕರ್ ಹಾಗೂ ಖಾಸಗಿ ಬೊರವೆಲ್‍ಗಳ ಮೂಲಕ 2999 ಗ್ರಾಮಗಳಿಗೆ ಕುಡಿಯುವ ನೀರು ಪೂರೈಸಲಾಗುತ್ತಿದೆ. ಇದರ ಪೈಕಿ ರಾಜ್ಯದಲ್ಲಿ ನೀರಿನ ಸಮಸ್ಯಾತ್ಮಕ 1632 ಗ್ರಾಮಗಳಲ್ಲಿ 2322 ಟ್ಯಾಂಕರ್‍ಗಳ ಮೂಲಕ ಹಾಗೂ 1367 ಗ್ರಾಮಗಳಿಗೆ 1873 ಖಾಸಗಿ ಕೊಳವೆಬಾವಿಗಳನ್ನು ಬಾಡಿಗೆ ರೂಪದಲ್ಲಿ ತೆಗೆದುಕೊಂಡು ನೀರು ಸರಬರಾಜು ಮಾಡಲಾಗುತ್ತಿದೆ. ನಗರ ಪ್ರದೇಶಗಳಲ್ಲಿ 440 ವಾರ್ಡ್‍ಗಳಿಗೆ 271 ಟ್ಯಾಂಕರ್‍ಗಳ ಮೂಲಕ ಕುಡಿಯುವ ನೀರು ಪೂರೈಸಲಾಗುತ್ತಿದೆ.

     ಈ ಸಾಲಿನಲ್ಲಿ ಅತಿಹೆಚ್ಚು ಖಾಸಗಿ ಬೊರವೆಲ್‍ಗಳನ್ನು ಬಾಡಿಗೆ ಆಧಾರದ ಮೇಲೆ ಪಡೆದುಕೊಳ್ಳಲಾಗಿದೆ ಎಂಬುದನ್ನು ಈ ಸಂದರ್ಭದಲ್ಲಿ ತಿಳಿಸಿದ ಮುಖ್ಯಮಂತ್ರಿಗಳು, ನೀರು ಸರಬರಾಜು ಮಾಡಿದ ಟ್ಯಾಂಕರ್‍ಗಳು ಹಾಗೂ ಬಾಡಿಗೆ ನೀಡಿದ ಕೊಳವೆ ಬಾವಿಗಳ ಮಾಲೀಕರಿಗೆ ಸಕಾಲದಲ್ಲಿ ಹಣ ಪಾವತಿಗೆ ಕ್ರಮಕೈಗೊಳ್ಳಿ, ಇಲ್ಲದಿದ್ದಲ್ಲಿ ಪಿಡಿಒಗಳನ್ನು ಮತ್ತು ತಾಪಂ ಇಒಗಳನ್ನೇ ನೇರಹೊಣೆಗಾರರನ್ನಾಗಿ ಮಾಡಲಾಗುವುದು ಅಂತ ಸೂಚಿಸಿ ಎಂದರು.

ಬರಪರಿಸ್ಥಿತಿ ನಿರ್ವಹಣೆಯಲ್ಲಿ ಉದಾಸೀನತೆ ತೋರುವವರ ಮೇಲೆ ಕ್ರಮ ಕೈಗೊಳ್ಳಿ;

      ಇದರಿಂದ ಬೇರೆಯವರು ಸಮರ್ಪಕವಾಗಿ ಕೆಲಸ ಮಾಡಲು ಅನುಕೂಲವಾಗುತ್ತದೆ ಎಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಸಚಿವ ಕೃಷ್ಣಬೈರೇಗೌಡ ಹೇಳಿದರು.

 49 ಗ್ರಾಮಗಳಲ್ಲಿ 80 ಟ್ಯಾಂಕರ್‍ಗಳ ಮೂಲಕ ನೀರು ಸರಬರಾಜು:

  ಬಳ್ಳಾರಿ ಜಿಲ್ಲೆಯಲ್ಲಿನ ಬರಪರಿಸ್ಥಿತಿ ನಿರ್ವಹಣೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳು ಇದುವರೆಗೆ ಕೈಗೊಳ್ಳಲಾಗಿರುವ ಕ್ರಮಗಳ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಜಿಲ್ಲಾಧಿಕಾರಿ ಡಾ.ವಿ.ರಾಮ್ ಪ್ರಸಾತ್ ಮನೋಹರ್, ಜಿಲ್ಲೆಯಲ್ಲಿ 49 ಸಮಸ್ಯಾತ್ಮಕ ನೀರಿನ ಗ್ರಾಮಗಳೆಂದು ಗುರುತಿಸಲಾಗಿದ್ದು, ಅಲ್ಲಿ 80 ಟ್ಯಾಂಕರ್‍ಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಆ ಸ್ಥಳದಲ್ಲಿ ಪಿಡಿಒಗಳು ಹಾಗೂ ಗ್ರಾಮಲೆಕ್ಕಾಧಿಕಾರಿಗಳು ಉಪಸ್ಥಿತರಿದ್ದು ನೀರು ಸರಬರಾಜು ನಿರ್ವಹಣೆ ನೋಡಿಕೊಳ್ಳುತ್ತಿದ್ದಾರೆ ಎಂದರು.

     ನೀರು ಸರಬರಾಜು ಮಾಡಿದ ಟ್ಯಾಂಕರ್‍ಗಳು ಹಾಗೂ ಬಾಡಿಗೆ ರೂಪದಲ್ಲಿ ಒದಗಿಸಲಾದ ಕೊಳವೆಬಾವಿಗಳ ಮಾಲೀಕರಿಗೆ ಏಪ್ರಿಲ್‍ವರೆಗೆ ಹಣ ಪಾವತಿಸಲಾಗಿದೆ ಎಂದು ವಿವರಿಸಿದ ಅವರು, ಇದುವರೆಗೆ 167 ಲಕ್ಷ ರೂ.ಗಳನ್ನು ಪಾವತಿಸಲಾಗಿದೆ. ಹಣ ಪಾವತಿಗೆ ಸಂಬಂಧಿಸಿದಂತೆ ವಿಶೇಷ ಗಮನಹರಿಸಲಾಗಿದೆ ಎಂದರು.

       ಜಿಲ್ಲೆಯಲ್ಲಿ 5 ಮೇವು ಬ್ಯಾಂಕ್‍ಗಳನ್ನು ಸ್ಥಾಪಿಸಲಾಗಿದೆ. 2 ಗೋಶಾಲೆಗಳನ್ನು ಆರಂಭಿಸಲಾಗಿದ್ದು, ಗೋಶಾಲೆಗಳಲ್ಲಿ 5021 ಜಾನುವಾರುಗಳು ದಾಖಲಾಗಿದ್ದು 1021 ಟನ್ ಮೇವನ್ನು ಸೇವಿಸಿವೆ ಎಂದು ತಿಳಿಸಿದ ಅವರು, ನರೇಗಾದಲ್ಲಿಯೂ ಸಹ ನಮ್ಮ ಜಿಲ್ಲೆ ಉತ್ತಮ ಸಾಧನೆ ತೋರಿದೆ; ಒಟ್ಟಿನಲ್ಲಿ ಬರಪರಿಸ್ಥಿತಿಯನ್ನು ನಮ್ಮ ಜಿಲ್ಲೆಯಲ್ಲಿ ಸಮರ್ಪಕವಾಗಿ ನಿರ್ವಹಣೆ ಮಾಡಲಾಗುತ್ತಿದೆ ಎಂದರು.

ನರೇಗಾ ಪ್ರಗತಿ ಬಳ್ಳಾರಿ ಜಿಲ್ಲೆಯ ಸಾಧನೆಗೆ ಸಿಎಂ, ಮಂತ್ರಿಗಳ ಮೆಚ್ಚುಗೆ:

      ಬರಪರಿಸ್ಥಿತಿ ಈ ಸಂದರ್ಭದಲ್ಲಿ ಗುಳೆತಡೆಗಟ್ಟುವ ನಿಟ್ಟಿನಲ್ಲಿ ಮಹಾತ್ಮಾಗಾಂಧಿ ಉದ್ಯೋಗ ಖಾತ್ರಿ ಯೋಜನೆ ಅಡಿ ಬಳ್ಳಾರಿ ಜಿಲ್ಲೆ ಉತ್ತಮ ಪ್ರಗತಿ ಸಾಧಿಸಿರುವುದಕ್ಕೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಸಚಿವರಾದ ಕೃಷ್ಣ ಬೈರೇಗೌಡ, ಆರ್.ವಿ.ದೇಶಪಾಂಡೆ ಮೆಚ್ಚುಗೆ ವ್ಯಕ್ತಪಡಿಸಿದರು.

       ಬಳ್ಳಾರಿ ಜಿಲ್ಲೆಯ ನಿಗದಿಪಡಿಸಿದ ಗುರಿಗಿಂತ ಶೇ.170ರಷ್ಟು ಸಾಧನೆ ತೋರಿದೆ. ಇದು ಉಳಿದ ಜಿಲ್ಲೆಗಳಿಗೆ ಮಾದರಿ ಎಂದು ಪ್ರಶಂಸೆ ವ್ಯಕ್ತಪಡಿಸಿದ ಆರ್‍ಡಿಪಿಆರ್ ಸಚಿವ ಕೃಷ್ಣ ಬೈರೇಗೌಡ ಅವರು, ಬಳ್ಳಾರಿ,ರಾಯಚೂರು, ಬೆಳಗಾವಿ,ಗದಗ, ಕೊಪ್ಪಳ ಸೇರಿದಂತೆ ಕೆಲ ಜಿಲ್ಲೆಗಳು ಉತ್ತಮ ಪ್ರಗತಿ ಸಾಧಿಸಿದ್ದು, ಉಳಿದ ಜಿಲ್ಲೆಗಳು ಇದೇ ರೀತಿ ಕಾರ್ಯಪ್ರವೃತ್ತರಾಗಿ ಎಂದು ಅವರು ಸೂಚಿಸಿದರು.

       ನರೇಗಾ ಕುರಿತು ಜಾಗೃತಿ ಮೂಡಿಸಬೇಕು ಮತ್ತು ಸಮುದಾಯಿಕ ಕಾಮಗಾರಿಗಳನ್ನು ಪ್ರತಿ ಗ್ರಾಪಂವಾರು ಆರಂಭಿಸಬೇಕು ಹಾಗೂ ಮೇವಿನ ಕೊರತೆ ಇರುವ ಕಡೆ ಜಿಲ್ಲಾಧಿಕಾರಿಗಳು ತತ್‍ಕ್ಷಣ ಕಾರ್ಯಪ್ರವೃತ್ತರಾಗಬೇಕು ಎಂದು ಸಚಿವರು ತಿಳಿಸಿದರು.

       ಮಾನ್ಯ ಮುಖ್ಯಮಂತ್ರಿಗಳೊಂದಿಗೆ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್, ಅಭಿವೃದ್ಧಿ ಆಯುಕ್ತರಾದ ವಂದಿತಾ ಶರ್ಮಾ, ಕಂದಾಯ,ಕೃಷಿ, ಆರ್ಥಿಕ, ತೋಟಗಾರಿಕೆ, ಪಶುಸಂಗೋಪನೆ, ಗ್ರಾಮೀಣಾಭಿವೃದ್ಧಿ, ನಗರಾಭಿವೃದ್ಧಿ, ಜಲಸಂಪನ್ಮೂಲ, ಸಣ್ಣ ನೀರಾವರಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap