ಹಾನಗಲ್ಲ :
ಬೆಳೆವಿಮಾ ಕಂಪನಿ ಹಾಗೂ ಬ್ಯಾಂಕ ಅಧಿಕಾರಿಗಳ ನಡುವಿನ ಮಾಹಿತಿ ಲೋಪದಿಂದ ಹಾನಗಲ್ಲ ತಾಲೂಕಿನ 4386 ರೈತರು 11.57 ಕೋಟಿ ರೂ ಬೆಳೆವಿಮಾ ಪರಿಹಾರ ವಂಚಿತರಾಗಿ ಎರಡು ವರ್ಷ ಕಳೆದಿದ್ದರು ಪರಿಹಾರ ದೊರೆಯದೆ ಸಮಸ್ಯೆ ಜಟಿಲಗೊಂಡ ವಿಷಯ ಹಾನಗಲ್ಲ ತಾಲೂಕು ಪಂಚಾಯತ ಸಭೆಯಲ್ಲಿ ಚರ್ಚೆಗೆ ಗ್ರಾಸವಾಯಿತು.
ಶನಿವಾರ ಪಟ್ಟಣದ ತಾಲೂಕು ಪಂಚಾಯತ ಸಭಾಭವನದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕೃಷಿ ಇಲಾಖೆ ವರದಿ ನೀಡುವ ಸಂದರ್ಭದಲ್ಲಿ ಬೆಳೆವಿಮೆ ಕುರಿತು ಚರ್ಚೆ ಆರಂಭವಾಯಿತು. ಹಾವೇರಿ ಜಿಲ್ಲೆಯಲ್ಲಿ ರಾಣೆಬೆನ್ನೂರ ಮಾತ್ರ ಬರಪೀಡಿತ ಎಂದು ಘೋಷಣೆಯಾಗಿದೆ. ಹಾನಗಲ್ಲ ತಾಲೂಕಿನ ಅರ್ಧಭಾಗ ಅತಿವೃಷ್ಠಿಯಿಂದ ನಾಶವಾಗಿದ್ದರೆ, ಇನ್ನರ್ಧ ಭಾಗ ಅನಾವೃಷ್ಠಿಯಿಂದ ರೈತನ ಕೈಗೆ ಬೆಳೆ ಸಿಗದಂತಾಗಿದೆ. ಆದರೆ ಜಿಲ್ಲಾಧಿಕಾರಿಗಳು ಕೇವಲ ಅತಿವೃಷ್ಠಿ ಮಾಹಿತಿಯನ್ನು ಪಡೆದು ಅನಾವೃಷ್ಠಿ ಬಗ್ಗೆ ಯಾವುದೇ ಮಾಹಿತಿ ಕೇಳಿಲ್ಲ ಎಂಬ ಸತ್ಯ ಬಯಲಾಯಿತು.
ಈ ಕುರಿತು ಪ್ರಶ್ನಿಶಿದ ಜಿಪಂ ಸದಸ್ಯ ರಾಘವೇಂದ್ರ ತಹಶೀಲ್ದಾರ, ಜಿಲ್ಲಾ ಆಡಳಿತ ಹಾಗೂ ಹಾನಗಲ್ಲ ತಾಲೂಕು ಆಡಳಿತ ರೈತರ ಸಂಕಷ್ಟಗಳಿಗೆ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿ ಹಾನಗಲ್ಲ ತಾಲೂಕನ್ನು ಬರಪೀಡಿತ ಎಂದು ಘೋಷಿಸುವಂತೆ ಸರಕಾರಕ್ಕೆ ವರದಿ ಸಲ್ಲಿಸಬೇಕು ಎಂದು ಒತ್ತಾಯಿಸಿದರು. ಬೆಳೆವಿಮೆ ವಿಷಯದಲ್ಲಂತೂ ಹಾನಗಲ್ಲ ತಾಲೂಕಿನ ರೈತ ಕೇವಲ ಕಂತು ಕಟ್ಟುವುದು ಮಾತ್ರ ಆಗಿದೆ. ನಷ್ಟವನ್ನಾಧರಿಸಿ ಬೆಳೆವಿಮೆ ಸಿಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಅಧಿಕಾರಿಗಳ ಕರ್ತವ್ಯ ಲೋಪದಿಂದಲೇ ಇಂತಹ ಸ್ಥಿತಿ ಒದಗಿದೆ ಎಂದು ಆರೋಪಿಸಿದರು. ಆದರೆ ಇದಕ್ಕೆ ಪರಿಹಾರ ದೊರೆಯುವ ಲಕ್ಷಣಗಳು ಕಾಣಲಿಲ್ಲ. ಈ ಬಗ್ಗೆ ಸಕಾರಾತ್ಮಕ ಚರ್ಚೆಯೂ ನಡೆಯಲಿಲ್ಲ.
ಕೃಷಿ ಇಲಾಖೆಯ ವಿವಿಧ ಯೋಜನೆಗಳು ಕೆಲವರ ಪಾಲಾಗುತ್ತಿರುವುದನ್ನು ತಪ್ಪಿಸಬೇಕು ಎಂದು ಶಾಸಕ ಸಿ.ಎಂ.ಉದಾಸಿ ಸಲಹೆ ಮಾಡಿದರು. ವಿವಿಧ ಜಾತಿ ಜನಾಂಗಗಳಿಗೆ ಸರಕಾರ ನೀಡುವ ಕೃಷಿ ಇಲಾಖೆ ಸೌಲಭ್ಯಗಳು ಒಬ್ಬನೇ ರೈತನಿಗೆ ಮತ್ತೆ ಮತ್ತೆ ಸಿಗುವಂತಾಗುತ್ತದೆ. ಇನ್ನು ಕೆಲವು ರೈತರಿಗೆ ಈ ಯೋಜನೆಗಳ ಸೌಲಭ್ಯಗಳು ದೊರೆಯುವುದೇ ಇಲ್ಲ. ಒಮ್ಮೆ ಫಲಾನುಭವಿ ಆದವರಿಗೆ ಮತ್ತೆ ಫಲಾನುಭವಿ ಮಾಡುವುದು ಬೇಡ, ಹಿಂದಿನ ಯಾದಿಯನ್ನು ಪರಿಶೀಲಿಸಿ ಹೊಸಬರಿಗೆ ಅವಕಾಶ ನೀಡಬೇಕು ಎಂದು ಸೂಚಿಸಿದರು.
ಅರಣ್ಯ ಇಲಾಖೆಗೆ ಸಂಬಂದಿಸಿದಂತೆ ತಾಲೂಕಿನಲ್ಲಿ ಈ ಹಿಂದೆ ರಚಿಸಿದ ಅರಣ್ಯ ಸಮೀತಿಗಳ ಅವಧಿ ಮುಗಿದವುಗಳಿಗೆ ಹೊಸ ಸಮಿತಿ ರಚಿಸಬೇಕು. ಇಂತಹ ಸಮಿತಿಗಳ ಯಾದಿ ನೀಡುವಂತೆ ಶಾಸಕ ಸಿ.ಎಂ.ಉದಾಸಿ ಅರಣ್ಯ ಇಲಾಖೆ ಗಮನ ಸೆಳೆದರು.
ತಾಲೂಕಿನಲ್ಲಿ ಇರುವ ಶುದ್ಧ ಕುಡಿಯುವ ನೀರಿನ ಘಟಕಗಳ ಮಾಹಿತಿಯನ್ನು ಗ್ರಾಮೀಣ ಕುಡಿಯುವ ನೀರು ಸರಬರಾಜು ಯೋಜನೆ ಘಟಕ ನೀಡಬೇಕು. ಯಾವುದೇ ಶುದ್ಧ ಕುಡಿಯುವ ನೀರಿನ ಘಟಕಗಳು ಸ್ಥಗಿತಗೊಳ್ಳದಂತೆ ಎಚ್ಚರಿಕೆ ವಹಿಸಬೇಕು. ಕಾಮಗಾರಿ ನಡೆದಿರುವ ಘಟಕಗಳು, ಕೂಡಲೇ ಕಾಮಗಾರಿ ಪೂರ್ಣಗೊಂಡು ಸಾರ್ವಜನಿಕರ ಸೇವೆಗೆ ಸಿಗುವಂತಾಗಬೇಕು. ಈ ಕುಡಿಯುವ ನೀರಿನ ಘಟಕಗಳನ್ನು ನಿರ್ಮಿಸಿದ ಗುತ್ತಿಗೆದಾರರು, ಆ ಪ್ರದೇಶ ಅಭಿಯಂತರರು, ತಾಲೂಕು ಹಾಗೂ ಜಿಲ್ಲಾ ಪಂಚಾಯತ ಸದಸ್ಯರು ಒಟ್ಟಾಗಿ ತಮ್ಮ ಪ್ರದೇಶದ ಘಟಕಗಳ ಸಮಸ್ಯೆಗಳ ಬಗ್ಗೆ ಸರಿಯಾದ ಮಾಹಿತಿ ಸಂಗ್ರಹಿಸಿ ಕೂಡಲೇ ನನಗೆ ಒದಗಿಸಬೇಕು. ಕಾಮಗಾರಿ ಲೋಪವಾಗಿದ್ದರೆ ಗುತ್ತಿಗೆದಾರರು ಹಾಗೂ ಅಭಿಯಂತರರು ನೇರ ಹೊಣೆಗಾರರಾಗುತ್ತಾರೆ ಎಂದು ಎಚ್ಚರಿಸಿದರು.
ತಾಲೂಕು ಪಂಚಾಯತ ಸದಸ್ಯೆ ಮಮತಾ ಕಮಾಟಿ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ನೈರ್ಮಲ್ಯಕ್ಕೆ ಮುಂದಾಗುತ್ತಿಲ್ಲ. ಸೊಳ್ಳೆಗಳ ಖಾಟದಿಂದಾಗಿ ಚಿಕೂನ್ಗುನ್ಯಾದಂತಹ ರೋಗಗಳು ಸಾರ್ವಜನಿಕರನ್ನು ಕಾಡುತ್ತಿವೆ. ಆದರೆ ತಾಲೂಕು ಪಂಚಾಯತ ಈ ಬಗ್ಗೆ ಗ್ರಾಪಂಗಳಿಗೆ ಕೂಡಲೇ ಆದೇಶಿಸಿ ಸೊಳ್ಳೆ ನಿಯಂತ್ರಣ ಕಾರ್ಯ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
