ಬೆಂಗಳೂರು
:
ಆವಲಹಳ್ಳಿ ಬಳಿಯ ಸುಮಾರು 15 ಕೋಟಿ ಮೌಲ್ಯದ ಬೇನಾಮಿ ಜಮೀನನ್ನು ಕಬಳಿಸಲು ಎರಡು ಕೊಲೆಗಳನ್ನು ಮಾಡಿದ ಗ್ಯಾಂಗ್‍ನ್ನು ಬಂಧಿಸಿರುವ ಬೆಂಗಳೂರು ಗ್ರಾಮಾಂತರ ಪೊಲೀಸರು ವೈದ್ಯ ನಿವೃತ್ತ ಉಪನ್ಯಾಸಕ, ಸ್ಟಾಂಪ್‍ವೆಂಡರ್ ಸೇರಿ 9 ಮಂದಿಯನ್ನು ಬಂಧಿಸಿದ್ದಾರೆ.
ಗ್ಯಾಂಗ್ 9 ಮಂದಿ ಸೇರಿ ಆವಲಹಳ್ಳಿಯ ಬೆಳತ್ತೂರಿನ ಸುಮಾರು 15 ಕೋಟಿ ಮೌಲ್ಯದ 1 ಎಕರೆ 8 ಗುಂಟೆ ಜಮೀನನ್ನು ಕಬಳಿಸಲು ಯತ್ನಿಸಿದ್ದನ್ನು ವಿಫಲಗೊಳಿಸಿ ಜಮೀನನ್ನು ರಕ್ಷಸಿ ಸರ್ಕಾರಕ್ಕೆ ಸೇರುವಂತೆ ಮಾಡಲಾಗಿದೆ.
ಕೋಟ್ಯಾಂತರ ಬೆಲೆಯ ಜಮೀನಿಗಾಗಿ ಮಹಿಳೆ ಸೇರಿ ಇಬ್ಬರ ಕೊಲೆಗೈದಿದ್ದ ಪ್ರಮುಖ ಆರೋಪಿ ಬೆಳತ್ತೂರಿನ ಎಸ್. ರಮೇಶ್ ಅಲಿಯಾಸ್ ಬೆಳತ್ತೂರು ರಮೇಶ್ (50) ಸೇರಿ 9 ಮಂದಿಯನ್ನು ಬಂಧಿಸಿ ತೀವ್ರ ವಿಚಾರಣೆ ನಡೆಸಿ ಸಿನಿಮೀಯ ರೀತಿಯ ಪ್ರಕರಣವನ್ನು ಪತ್ತೆಹಚ್ಚಲಾಗಿದೆ.
ರಮೇಶ್ ಜೊತೆ, ಕೋಲಾರದ ಮೋಚಿ ಪಾಳ್ಯದ ಶಂಕ್ರಪ್ಪ ಅಲಿಯಾಸ್ ಸಾಹುಕಾರ್ ಶಂಕ್ರಪ್ಪ (55), ಕಮಲಾನಗರದ ನಿವೃತ್ತ ಉಪನ್ಯಾಸಕ ಧನಂಜಯ (57), ಹೊಸಕೋಟೆಯ ಸರ್ಕಾರ್ ಗುಟ್ಟಹಳ್ಳಿಯ ಕೃಷ್ಣಪ್ಪ ಅಲಿಯಾಸ್ ಸ್ಟಾಂಪ್ ವೆಂಡರ್ ಕೃಷ್ಣಪ್ಪ (50), ಕನ್ನಮಂಗಲದ ಸೀಗೆಹಳ್ಳಿಯ ಕೃಷ್ಣಮೂರ್ತಿ (42), ಕೇಶವಮೂರ್ತಿ (41), ನಿಂಬೇಕಾಯಿಪುರದ ವೆಂಕಟಸ್ವಾಮಿ (43), ಸೂಲಿಬೆಲೆಯ ಕಮ್ಮಸಂದ್ರದ ವೆಂಕಟೇಶಪ್ಪ (60) ಮಾರಗೊಂಡನಹಳ್ಳಿಯ ಡಾ.ಕುಲಕರ್ಣಿ(55)ನನ್ನು ಬಂಧಿಸಲಾಗಿದೆ ಎಂದು ಗ್ರಾಮಾಂತರ ಎಸ್‍ಪಿ ಶಿವಕುಮಾರ್ ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಶಂಕಾಸ್ಪದ ಆತ್ಮಹತ್ಯೆ
ಹೊಸಕೋಟೆ ತಾಲ್ಲೂಕಿನ ನಿಂಬೆಕಾಯಿಪುರ ಗ್ರಾಮದಲ್ಲಿ ಜಮೀನಿನ ಕಾವಲುಗಾರರಾಗಿ ಕೆಲಸ ಮಾಡುತ್ತಿದ್ದ ವೆಂಕಟಸ್ವಾಮಿ ಅವರ ಪತ್ನಿ ಸುಧಾರಾಣಿ ಕಳೆದ ಸೆ.18ರಂದು ಆತ್ಮಹತ್ಯೆ ಮಾಡಿಕೊಂಡಿರುವ ಮಾಹಿತಿ ಆಧರಿಸಿ ಪೊಲೀಸರು ತನಿಖೆ ಕೈಗೊಂಡಾಗ ಸಾವಿನ ಬಗ್ಗೆ ಶಂಕೆ ವ್ಯಕ್ತವಾಗುತ್ತದೆ ಈ ಸಂಬಂಧ ಅವರ ಪತಿ ವೆಂಕಟಸ್ವಾಮಿಯನ್ನು ಬಂಧಿಸಿ ತೀವ್ರವಾಗಿ ವಿಚಾರಣೆಗೊಳಪಡಿಸಿದಾಗ ಆಕೆಯನ್ನು ನಾನೇ ಕೊಲೆ ಮಾಡಿದ್ದಾಗಿ ಒಪ್ಪಿಕೊಳ್ಳುತ್ತಾಯೀ ಮೊದಲೇ ಮೊದಲೇ ಮಾಡಿದ್ದ ಮತ್ತೊಂದು ಕೊಲೆಯ ರಹಸ್ಯ ಆಕೆಗೆ ತಿಳಿದ ಕಾರಣಕ್ಕಾಗಿ ಆಕೆಯ ಬಾಯಿ ಮುಚ್ಚಿಸಲು ಕೊಲೆ ಮಾಡಿದ್ದಾಗಿ ವೆಂಕಟಸ್ವಾಮಿ ಪೊಲೀಸರಿಗೆ ಹೇಳಿಕೆ ನೀಡುತ್ತಾನೆ. ಆ ಕೊಲೆ ಪ್ರಕರಣದ ಬೆನ್ನು ಹತ್ತಿದ ಪೊಲೀಸರಿಗೆ ವಿಚಿತ್ರ ತಿರುವುಗಳು ಎದುರಾಗುತ್ತವೆ.
ವಾರಸುದಾರರಿಲ್ಲದ ಆಸ್ತಿ
ಬೆಳ್ಳತ್ತೂರು ಗ್ರಾಮದ ಸರ್ವೆ ನಂ.81ರಲ್ಲಿ ಒಂದು ಎಕರೆ 8 ಗುಂಟೆ ಜಮೀನಿದೆ 1926-27ನೇ ಸಾಲಿನಲ್ಲಿ ಮೈಸೂರು ಮಹಾರಾಜರು ನಂಜಪ್ಪ ಎಂಬುವರ ಹೆಸರಿಗೆ ಈ ಜಮೀನನ್ನು ಕೊಟ್ಟಿರುವುದಾಗಿ ದಾಖಲೆಗಳಿವೆ. ಈವರೆಗೂ ಪಹಣಿ ಅವರ ಹೆಸರಿನಲ್ಲೇ ಬರುತ್ತಿದೆ. ಆದರೆ ನಂಜಪ್ಪ ಮತ್ತು ಅವರ ವಾರಸುದಾರರು ಪತ್ತೆಯಿಲ್ಲ. ಅದರ ಮೌಲ್ಯ ಸುಮಾರು 15 ಕೋಟಿ ರೂಳಾಗಿದ್ದು ಅದಕ್ಕೆ ಯಾರೂ ವಾರಸುದಾರರಿಲ್ಲ.
ಬೆಳ್ಳತ್ತೂರು ಗ್ರಾಮದ ರಮೇಶ್ ಈ ಜಮೀನಿನ ಮೇಲೆ ಕಣ್ಣು ಹಾಕಿ ಅದನ್ನು ಕಬಳಿಸಲು ಪ್ರಯತ್ನಿ. ನಂಜಪ್ಪ ಮತ್ತು ಆತನ ವಾರಾಸುದಾರರು ಲಭ್ಯವಿಲ್ಲದಿದ್ದುದ್ದರಿಂದ ನಂಜಪ್ಪನನ್ನು ಹೋಲುವ 95ರಿಂದ 100 ವಯಸ್ಸಿನ ವೆಂಕಟರಮಣಪ್ಪ ಎಂಬುವರನ್ನು ಕರೆತರಲಾಗುತ್ತದೆ.ವೆಂಕಟರಮಣಪ್ಪನನ್ನು ನಂಜಪ್ಪ ಎಂದು ಬಿಂಬಿಸಿ ಆಧಾರ್‍ಕಾರ್ಡ್, ವೋಟರ್ ಐಡಿ, ವಾಸ ದೃಢೀಕರಣ ಪತ್ರವನ್ನು ಮಾಡಿಸಲಾಗುತ್ತದೆ. ಅಷ್ಟರಲ್ಲಿ ಇದೇ ಜಮೀನಿನ ಮೇಲೆ ಮತ್ತಷ್ಟು ಮಂದಿ ಕಣ್ಣು ಹಾಕಿ ನಕಲಿ ದಾಖಲಾತಿಗಳನ್ನು ಸೃಷ್ಟಿಸುವ ಪ್ರಯತ್ನ ಮಾಡುತ್ತಾರೆ.
ಇದರಿಂದ ಆತಂಕಕ್ಕೊಳಗಾದ ರಮೇಶ್, ನಂಜಪ್ಪ ಹೆಸರಿನಲ್ಲಿದ್ದ ವೆಂಕಟರಮಣಪ್ಪನನ್ನು ತಾನು ಕೊನೆಗಾಲದಲ್ಲಿ ಪಾಲನೆ ಮಾಡಿದ್ದಾಗಿ ಮತ್ತು ಅವರು ಸಾಯುವ ಮುನ್ನ ಜಮೀನನ್ನು ತನಗೆ ದಾನ ಪತ್ರ ಬರೆದುಕೊಟ್ಟಿದ್ದಾಗಿ ದಾಖಲೆಗಳನ್ನು ಸೃಷ್ಟಿಸಿಕೊಳ್ಳುತ್ತಾನೆ. ಆದರೆ, ವೆಂಕಟರಮಣಪ್ಪ ಇನ್ನೂ ಜೀವಂತವಾಗಿರುವುದರಿಂದ ಜಮೀನಿನ ದಾಖಲೆಗಳನ್ನು ತನ್ನ ಹೆಸರಿಗೆ ಮಾಡಿಕೊಳ್ಳಲು ರಮೇಶ್ ಸಾಧ್ಯವಾಗುವುದಿಲ್ಲ.
ಸಾಯಿಸಲು ಯತ್ನ
ಕೊನೆಗೆ ಸಂಚು ರೂಪಿಸಿ ವೆಂಕಟರಮಣಪ್ಪನನ್ನು ಸಾಯಿಸಲು ಪ್ರಯತ್ನಿಸುತ್ತಾನೆ. ಬೇನಾಮಿ ದಾಖಲೆ ಸೃಷ್ಟಿಸಲು ತಮ್ಮ ತಂದೆಯನ್ನು ಸಾಯಿಸುವ ಕೃತ್ಯಕ್ಕೆ ಪುತ್ರ ವೆಂಕಟೇಶ್ ಅವಕಾಶ ನೀಡುವುದಿಲ್ಲ. ಆ ವೇಳೆ ಇಕ್ಕಟ್ಟಿಗೆ ಸಿಲುಕಿದ ರಮೇಶ್ ಈ ಮೊದಲು ವೆಂಟಕರಮಣಪ್ಪ ಅವರನ್ನು ಕರೆತಂದಿದ್ದ ಮಾದಿಗ ದಂಡೋರದ ಹೋರಾಟ ಸಮಿತಿಯ ರಾಜ್ಯ ಉಪಾಧ್ಯಕ್ಷ ಶಂಕರಪ್ಪ ಅಲಿಯಾಸ್ ಸಾಹುಕಾರ್ ಶಂಕರಪ್ಪನಿಗೆ ಮತ್ತೊಬ್ಬ ಅನಾಮದಾಯಿ ವ್ಯಕ್ತಿಯನ್ನು ಕರೆತರುವಂತೆ ಮನವಿ ಮಾಡುತ್ತಾನೆ.
ಮತ್ತೊಬ್ಬ ವ್ಯಕ್ತಿಯ ಹುಡುಕಾಟ ನಡೆಸುವ ವೇಳೆ ಕೋಲಾರ ಬಸ್ ನಿಲ್ದಾಣದಲ್ಲಿ 65 ವರ್ಷ ವಯಸ್ಸಿನ ಮುಳಬಾಗಿಲು ತಾಲ್ಲೂಕಿನ ವ್ಯಕ್ತಿ ಕೃಷ್ಣಪ್ಪ ವ್ಯಕ್ತಿ ಕಣ್ಣಿಗೆ ಬೀಳುತ್ತಾರೆ.ಕೃಷ್ಣಪ್ಪ ಮಗಳೊಂದಿಗೆ ಜಗಳ ಮಾಡಿ ಮನೆ ಬಿಟ್ಟು ಬಂದು ಬಸ್ ನಿಲ್ದಾಣದಲ್ಲಿ ಮಲಗಿರುತ್ತಾರೆ. ಆತ ಗಾರೆ ಕೆಲಸ ಮಾಡುವವರಾಗಿದ್ದು, ಒಳ್ಳೆಯ ಕೆಲಸ ಕೊಡಿಸುವುದಾಗಿ ಪುಸಲಾಯಿಸಿ ಶಂಕರಪ್ಪ ಆತನನ್ನು ಕರೆತರುತ್ತಾರೆ.
ಆತನಿಗೆ ಮದ್ಯಪಾನದಲ್ಲಿ ಬೇಧಿ ಮಾತ್ರೆ ಹಾಕಿ ಕುಡಿಸಿ ಆರೋಗ್ಯ ಹದಗೆಡುವಂತೆ ಮಾಡುತ್ತಾರೆ. ಅದಕ್ಕೂ ಮೊದಲು ಮಾರಗೊಂಡನಹಳ್ಳಿ ಅಮೃತ್ ಮೆಡಿಕಲ್ ಸೆಂಟರ್‍ನ ವೈದ್ಯರಾದ 70 ವರ್ಷದ ಡಾ.ಕುಲಕರ್ಣಿ ಅವರನ್ನು ಸಂಪರ್ಕಿಸಿ ಒಬ್ಬ ವ್ಯಕ್ತಿಯ ಹೆಸರಿಗೆ ಮರಣ ಪ್ರಮಾಣ ಪತ್ರ ನೀಡುವಂತೆ ರಮೇಶ್ ಬೇಡಿಕೆ ಇಡುತ್ತಾರೆ.
ಶವಸಂಸ್ಕಾರ
ಆದರೆ,ಮೃತದೇಹವಿಲ್ಲದ ಹೊರತು ಮರಣ ಪ್ರಮಾಣಪತ್ರ ನೀಡಲು ಸಾಧ್ಯವಿಲ್ಲ ಎಂದು ವೈದ್ಯರು ಹೇಳಿದ್ದರಿಂದ ಕೃಷ್ಣಪ್ಪನನ್ನು ಕರೆತಂದು ಸಂಜೆ 4 ಗಂಟೆಗೆ ಆಸ್ಪತ್ರೆಗೆ ದಾಖಲಿಸಲಾಗುತ್ತದೆ. ಅದಕ್ಕೂ ಮುನ್ನ ಬೆಳಗ್ಗೆ 12 ಗಂಟೆಗೆ ಡಾ.ಕುಲಕರ್ಣಿ ಜಮೀನಿನ ಹಕ್ಕುದಾರರಾದ ನಂಜಪ್ಪ ಅವರ ಹೆಸರಿಗೆ ಮರಣ ಪ್ರಮಾಣ ಪತ್ರವನ್ನು ಬರೆದಿಟ್ಟಿರುತ್ತಾರೆ. ಈ ನಡುವೆ ಪ್ರಕರಣದ ಪ್ರಮುಖ ಆರೋಪಿ ರಮೇಶ್ ಜಮೀನಿನ ಕಾವಲುಗಾರರನ್ನಾಗಿ ಸುಧಾರಣಿ ಮತ್ತು ಅವರ ಪತಿ ವೆಂಕಟಸ್ವಾಮಿ ಅವರನ್ನು ನೇಮಿಸಿಕೊಂಡಿರುತ್ತಾನೆ.
ಕೃಷ್ಣಪ್ಪನನ್ನು ಆಸ್ಪತ್ರೆಗೆ ಕರೆತಂದಾಗ ಆತ ಅಸ್ವಸ್ಥಗೊಂಡು ಸಾಯುವಂತೆ ಮಾಡಲಾಗುತ್ತದೆ. ನಂತರ ಶವವನ್ನು ನಂಜಪ್ಪ ಎಂದು ಬಿಂಬಿಸಿ ಕೆ.ಆರ್.ಪುರಂನ ಚಿತಾಗಾರದಲ್ಲಿ ಅಂತ್ಯಕ್ರಿಯೆ ಮಾಡಲಾಗುತ್ತದೆ. ಅಂತ್ಯಕ್ರಿಯೆಯನ್ನು ಸುಧಾರಾಣಿ ಅವರ ಪತಿ ವೆಂಕಟಸ್ವಾಮಿಯಿಂದ ಮಾಡಿಸಲಾಗುತ್ತದೆ. ಆತನನ್ನೇ ನಂಜಪ್ಪನ ಹೆಸರಿನಲ್ಲಿ ಸತ್ತು ಹೋದ ಕೃಷ್ಣಪ್ಪನ ಮಗ ಎಂದು ಬಿಂಬಿಸಲಾಗುತ್ತದೆ.
ಚಿತಾಭಸ್ಮ ವಿಸರ್ಜನೆ
ಕೃಷ್ಣಪ್ಪ ದೆವ್ವವಾಗಬಾರದು ಎಂಬ ಕಾರಣಕ್ಕೆ ಮುಕ್ತಿಕೊಡಿಸಲು ಚಿತಾಭಸ್ಮವನ್ನು ಶ್ರೀರಂಗಪಟ್ಟಣದಲ್ಲಿ ವಿಸರ್ಜನೆ ಮಾಡಲಾಗುತ್ತದೆ. ಈ ಎಲ್ಲಾ ಕೆಲಸಗಳನ್ನು ಮಾಡುವ ವೇಳೆ ವೆಂಕಟಸ್ವಾಮಿ ಪ್ರತಿದಿನ ಮನೆಗೆ ತಡವಾಗಿ ಬರುತ್ತಿರುತ್ತಾನೆ. ಅದನ್ನು ಪ್ರಶ್ನಿಸಿ ಸುಧಾರಾಣಿ ಜಗಳಮಾಡಿದಾಗ ಸಮಾಧಾನಪಡಿಸಲು ಕೃಷ್ಣಪ್ಪನ ಕೊಲೆ ಪ್ರಕರಣವನ್ನು ವೆಂಕಟಸ್ವಾಮಿ ಬಾಯಿಬಿಟ್ಟಿರುತ್ತಾನೆ. ಪತಿ ಕೃಷ್ಣಪ್ಪನ ಕೊಲೆಯಲ್ಲಿ ಭಾಗಿಯಾಗಿದ್ದಕ್ಕಾಗಿ ಮತ್ತು ಅನಾಮಿಕ ಶವದ ಅಂತ್ಯಕ್ರಿಯೆಗಳನ್ನು ಮಾಡಿದ್ದಕ್ಕಾಗಿ ಇನ್ನಷ್ಟು ಜೋರು ಜಗಳವಾಡುತ್ತಾಳೆ.
ಮದ್ಯಪಾನ ಮಾಡಿ ಬಂದಿದ್ದ ವೆಂಕಟಸ್ವಾಮಿ ಆಕ್ರೋಶಗೊಂಡು ಮುಖದ ಮೇಲೆ ಬಲವಾಗಿ ಹಲ್ಲೆ ನಡೆಸಿದಾಗ ಆಕೆ ಸಾವನ್ನಪುತ್ತಾಳೆ ಕೂಡಲೇ ಆತ ಮೃತದೇಹದ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಮೇಲ್ಛಾವಣಿ ಹೊಡೆದು ಹೊರ ಬಂದು ತನ್ನ ಹೆಂಡತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ನಂಬಿಸಲು ವೆಂಕಟಸ್ವಾಮಿ ಪ್ರಯತ್ನಿಸುತ್ತಾನೆ.
ಆದರೆ, ಪೊಲೀಸರದ ಜಾಣತನದ ಮುಂದೆ ವೆಂಕಟಸ್ವಾಮಿಯ ನಾಟಕ ಬಯಲಾಗಿದೆ. ಸದ್ಯಕ್ಕೆ ಕೋಟ್ಯಂತರ ರೂ. ಬೆಲೆ ಬಾಳುವ ಜಮೀನು ಮಾಲೀಕರಿಲ್ಲದೆ ಸರ್ಕಾರದ ಕೈವಾಸವಾಗುವ ಹಂತದಲ್ಲಿದೆ.ಜಮೀನು ಸಲುವಾಗಿ ಬಲಿಕೊಡಲು ಕರೆತಂದಿದ್ದ ವೆಂಕಟರಮಣಪ್ಪ ಕೂದಲೆಳೆಯಲ್ಲಿ ಪಾರಾಗಿದ್ದಾರೆ. ಹಿಂದೆ-ಮುಂದೆ ಏನು ಗೊತ್ತಿಲ್ಲದ ಕೃಷ್ಣಪ್ಪ, ಗಂಡ ಒಳಿತನ್ನು ಬಯಸಿದ ಸುಧಾರಾಣಿ ಬಲಿಯಾಗಿದ್ದಾರೆ.
ವಿಶೇಷ ಬಹುಮಾನ
ಪ್ರಕರಣದಲ್ಲಿ ಹವಲಹಳ್ಳಿ ಪೊಲೀಸರು ಕಿಂಗ್‍ಪಿನ್ ಬೆಳ್ಳತೂರು ರಮೇಶ್ (50), ಜನರನ್ನು ಸರಬರಾಜು ಮಾಡುತ್ತಿದ್ದ ಸಾಹುಕಾರ್ ಶಂಕರಪ್ಪ (55), ನಕಲಿ ದಾಖಲೆಗಳನ್ನು ಸೃಷ್ಟಿಸಿಕೊಟ್ಟ ಮಾಜಿ ಉಪನ್ಯಾಸಕ ಧನಂಜಯ್, ಸ್ಟಾಂಪ್‍ವೆಂಡರ್ ಕೃಷ್ಣಪ್ಪ, ರಿಯಲ್ ಎಸ್ಟೇಟ್ ಏಜೆಂಟ್ ಎಸ್.ಕೃಷ್ಣಮೂರ್ತಿ, ವೆಂಕಟರಮಣಪ್ಪ ಅವರ ಪುತ್ರ ವೆಂಕಟೇಶ್, ವಾರಸುದಾರರು ಇಲ್ಲದ ಜಮೀನನ್ನು ಹುಡುಕಿಕೊಡುತ್ತಿದ್ದ ಎಂ.ಕೇಶವಮೂರ್ತಿ, ಸುಧಾರಾಣಿ ಅವರ ಪತಿ ಎಂ.ವೆಂಕಟಸ್ವಾಮಿ (43) ಅವರನ್ನು ಬಂಧಿಸಿದ್ದು,ಬುಧವಾರ ಬೆಳಗ್ಗೆ ಡಾ.ಕುಲಕರ್ಣಿ ಅವರನ್ನೂ ಬಂಧಿಸಲಾಗಿದೆ. ಕೊಲೆ ಪ್ರಕರಣ ಮತ್ತು ಅದರ ಹಿಂದಿರುವ ರಿಯಲ್ ಎಸ್ಟೇಟ್ ಭಾಗಿಯಾಗಿದ್ದು ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಕೃತ್ಯವನ್ನು ಬಯಲಿಗೆಳೆದ ಪೊಲೀಸ್ ತಂಡಕ್ಕೆ ವಿಶೇಷ ಬಹುಮಾನ ನೀಡಲಾಗಿದೆ..
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








