ದಾವಣಗೆರೆ:z
ಪೆಟ್ರೋಲ್, ಡೀಸೆಲ್ ಹಾಗೂ ಅಡುಗೆ ಅನಿಲನ್ನು ಜಿಎಸ್ಟಿ ವ್ಯಾಪ್ತಿಗೆ ತರಬೇಕೆಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ( ಪ್ರವೀಣಕುಮಾರ್ ಶೆಟ್ಟಿ ಬಣ)ಯ ಕಾರ್ಯಕರ್ತರು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
ನಗರದ ಜಯದೇವ ವೃತ್ತದಿಂದ ಮೆರವಣಿಗೆ ಹೊರಟ ಪ್ರತಿಭಟನಾಕಾರರು, ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಎಸಿ ಕಚೇರಿಗೆ ತೆರಳಿ ಉಪ ವಿಭಾಗಾಧಿಕಾರಿಗಳ ಮೂಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಭಟನಾಕಾರರು, ಕೇಂದ್ರ ಸರ್ಕಾರವು ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ದರವನ್ನು ಹೆಚ್ಚು ಮಾಡುತ್ತಲೇ ಇದೆ. ಆದರೆ, ದೇಶ ಅಭಿವೃದ್ಧಿ ಪಥದಲ್ಲಿದೆಯೆಂದು ದೇಶದ ಜನತೆಯೂ ಇದನ್ನೆಲ್ಲಾ ಸಹಿಸಿಕೊಂಡಿರುತ್ತಿದ್ದರು. ಆದರೆ, ಪದೇ ಪದೇ ತೈಲ ಬೆಲೆ ಏರಿಕೆ ಏರಿಕೆ ಮಾಡುತ್ತಿರುವ ಕೇಂದ್ರ ಸರ್ಕಾರದ ನಿಯಮ ಅತ್ಯಂತ ಖಂಡನೀಯವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪದೇಪದೇ ತೈಲ ಬೆಲೆ, ಅನಿಲ ದರ ಏರಿಕೆಯಿಂದಾಗಿ ದೇಶದ ಜನತೆಯೂ ತೀವ್ರ ಆತಂಕಗೊಂಡಿದ್ದಾರೆ. ತೈಲವನ್ನು ಜಿಎಸ್ಟಿ ವ್ಯಾಪ್ತಿಗೆ ಸೇರಿಸುವ ಬಗ್ಗೆ ಕೇಂದ್ರ, ರಾಜ್ಯ ಸರ್ಕಾರಗಳು ಸೇರಿಕೊಂಡು, ಮಾತುಕತೆ ನಡೆಸಬೇಕು. ಈಗಾಗಲೇ ಪೆಟ್ರೋಲ್, ಡೀಸೆಲ್ ಬೆಲೆ 100 ಸಮೀಪಕ್ಕೆ ಹೋಗುವ ಅಪಾಯವೂ ಇಲ್ಲದಿಲ್ಲ. ಈ ಮಧ್ಯೆ ರಾಜ್ಯ ಸರ್ಕಾರದ ವಿವಿಧ ತೆರಿಗೆಗಳೂ ತೈಲ ಬೆಲೆ ಏರಿಕೆಗೆ ಕಾರಣವಾಗಿವೆ ಎಂದು ಆರೋಪಿಸಿದರು.
ಕೇಂದ್ರ ಸರ್ಕಾರವು ದಿನದಿನ ದಿನಕ್ಕೂ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಕಡಿಮೆಯಾಗುತ್ತಿದ್ದರೂ ಅದಕ್ಕೆ ಕಡಿವಾಣ ಹಾಕುವ ಪ್ರಯತ್ನವನ್ನೇ ಮಾಡಿಲ್ಲ. ಪರಿಣಾಮ ತೈಲ, ಅನಿಲ ಬೆಲೆ ಏರಿಕೆಯಾಗುತ್ತಿದೆ. ಸಹಜವಾಗಿಯೇ ಇದು ಜನ ಸಾಮಾನ್ಯರು, ಬಡ, ಮಧ್ಯಮ ವರ್ಗದ ಜನರಿಗೆ ಹೊರೆಯಾಗಿ ಪರಿಣಮಿಸುತ್ತಿದೆ. ಬೆಲೆ ಏರಿಕೆ ಪರಿಣಾಮ ಬಸ್ಸು, ಟ್ಯಾಕ್ಸಿ, ಆಟೋ ದರವೂ ಹೆಚ್ಚಾಗಿ, ಜನರಿಗೆ ಮತ್ತಷ್ಟು ಹೊರೆ ಹೇರಲಾಗುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಇನ್ನಾದರೂ ಕೇಂದ್ರ ಸರ್ಕಾರವು ಎಚ್ಚೆತ್ತುಕೊಂಡು ತೈಲ, ಅನಿಲ ಬೆಲೆ ಏರಿಕೆಗೆ ಕಡಿವಾಣ ಹಾಕಬೇಕು. ಸತತ ಬೆಲೆ ಏರಿಕೆಯಿಂದ ರಾಜ್ಯ, ರಾಷ್ಟ್ರದ ಜನತೆ ಬೀದಿಗಿಳಿದು ಧ್ವನಿ ಎತ್ತುವ ಮೂಲಕ ಪ್ರತಿಭಟಿಸುವ ಮುನ್ನ ಕೇಂದ್ರ ಸರ್ಕಾರ ಎಚ್ಚೆತ್ತುಕೊಳ್ಳಬೇಕು. ಪೆಟ್ರೋಲ್, ಡೀಸೆಲ್ನ್ನು ಜಿಎಸ್ಟಿ ವ್ಯಾಪ್ತಿಗೆ ತರಲು ಒತ್ತಾಯಿಸಿ ಕರವೇ ರಾಜ್ಯಾದ್ಯಂತ ತೀವ್ರ ಸ್ವರೂಪದ ಹೋರಾಟವನ್ನೂ ನಡೆಸಲಿದೆ ಎಂದು ಅವರು ಎಚ್ಚರಿಸಿದರು.
ಸಂಘಟನೆ ಮುಖಂಡರಾದ ಜಿಲ್ಲಾ ಸಂಚಾಲಕ ಆದಾಪುರ ನಾಗರಾಜಪ್ಪ, ಪ್ರಧಾನ ಕಾರ್ಯದರ್ಶಿ ನುದ್ರತ್ ಅನ್ವರ್, ಸಂಘಟನಾ ಕಾರ್ಯದರ್ಶಿ ಬಿ.ಪರಮೇಶ ಮೇಟಿ, ಜಿ.ಸಿ.ವಸುಂಧರ, ಉಮಾ ತೋಟಪ್ಪ, ರವಿ ನಾಯಕ್, ಎಂ.ಡಿ.ರಫೀಕ್, ಸಾದಿಕ್, ಅಫ್ಜಲ್, ಶಬ್ಬೀರ್ ಅಹಮ್ಮದ, ಹರಿಹರದ ಜಿಲಾನಿ, ಮೈಲಪ್ಪ, ಬಸವರಾಜ ತಳವಾರ್, ಇಮ್ರಾನ್ ಖಾನ, ಫರೀದ್ ಖಾನ್, ದಾದಾಪೀರ್, ಸಿಕಂದರ್, ಸಲೀಂ ಇತರರು ಪ್ರತಿಭಟನೆಯಲ್ಲಿದ್ದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








