ಬಿಜೆಪಿಗೆ ತಿರುಮಂತ್ರ ಹಾಕಲು ಕಾಂಗ್ರೇಸ್ ತಯಾರಿ

ಬೆಂಗಳೂರು:

      ಲೋಕಸಭಾ ಚುನಾವಣೆಯಲ್ಲಿ ತಮ್ಮನ್ನು ಸೋಲಿಸಲು ತಂತ್ರ ಹೂಡಿರುವ ಬಿಜೆಪಿಗೆ ಪ್ರತಿತಂತ್ರ ರೂಪಿಸಲು ಮುಂದಾಗಿರುವ ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ಚಿಂಚೋಳಿ ಶಾಸಕ ಉಮೇಶ್ ಜಾಧವ್ ಅವರಿಗೆ ಮಂತ್ರಿ ಸ್ಥಾನ ದೊರಕಿಸಿಕೊಡಲು ಹೈಕಮಾಂಡ್ ಮೇಲೆ ಒತ್ತಡ ಹೇರಿದ್ದಾರೆ.

      ಈಗಾಗಲೇ ಬಿಜೆಪಿ ನಾಯಕರು, ಸಂಘಪರಿವಾರದ ಮೂಲಕ ಚಿಂಚೋಳಿ ಕಾಂಗ್ರೆಸ್ ಶಾಸಕ ಉಮೇಶ್ ಜಾಧವ್ ಅವರನ್ನು ಸೆಳೆಯಲು ಪ್ರಯತ್ನ ನಡೆಸಿದ್ದಾರೆ. ಜತೆಗೆ ಕಲಬುರಗಿ ಲೋಕಸಭಾ ಕ್ಷೇತ್ರದಲ್ಲಿ ಖರ್ಗೆ ಅವರ ವಿರುದ್ದ ಜಾಧವ್ ಅವರನ್ನು ಕಣಕ್ಕಿಳಿಸಲು ತಂತ್ರ ಹೂಡಿದೆ.

      ಇದನ್ನು ಅರಿತಿರುವ ಖರ್ಗೆ, ಜಾಧವ್ ಅವರಿಗೆ ಮಂತ್ರಿ ಸ್ಥಾನ ನೀಡಬೇಕೆಂದು ವರಿಷ್ಠರಲ್ಲಿ ಮನವಿ ಮಾಡಿದ್ದಾರೆ. ಈಗಾಗಲೇ ಕೋಳಿ ಸಮುದಾಯದ ನಾಯಕ ಹಾಗೂ ತಮ್ಮ ಆಪ್ತ ಬಾಬುರಾವ್ ಚಿಂಚಣಸೂರ್ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡು ಭಾರೀ ಹಾನಿಯುಂಟು ಮಾಡಿದೆ. ಇದೀಗ ಜಾಧವ್ ಪಕ್ಷ ತೊರೆದರೆ ಅದರಿಂದ ತಮ್ಮ ರಾಜಕೀಯ ಬದುಕು ತೀವ್ರ ಅನಾಹುತಕ್ಕೊಳಲಾಗಲಿದೆ ಎನ್ನುವ ಆತಂಕದಲ್ಲಿದ್ದಾರೆ ಖರ್ಗೆ.

      ಮಲ್ಲಿಕಾರ್ಜುನ ಖರ್ಗೆಯನ್ನು ಕೇಸರಿ ಪಡೆ ಸೋಲಿಸಲು ಯತ್ನಿಸುತ್ತಿರುವುದು ಇದೇ ಮೊದಲೇನಲ್ಲ. ಆದರೆ, ಈ ಬಾರಿ ವಿಭಿನ್ನ ತಂತ್ರ ರೂಪಿಸಿರುವ ಬಿಜೆಪಿ ಕಾಂಗ್ರೆಸ್ ಶಾಸಕನ ಮೂಲಕವೇ ಖರ್ಗೆ ರಾಜಕಾರಣ ಮುಗಿಸಲು ಹೊರಟಿದೆ.

     ಬಿಜೆಪಿ ನಾಯಕರು ಉಮೇಶ್ ಜಾಧವ್ ಅವರನ್ನು ಸಂಪರ್ಕ ಮಾಡಿರುವ ವಿಚಾರ ತಮ್ಮ ಗಮನಕ್ಕೆ ಬಂದ ಕೂಡಲೇ ಖರ್ಗೆ ಎಚ್ಚೆತ್ತುಕೊಂಡಿದ್ದಾರೆ. ಅಲ್ಲದೇ ಬಿಜೆಪಿ ತಂತ್ರಕ್ಕೆ ಮಲ್ಲಿಕಾರ್ಜುನ ಖರ್ಗೆ ಅವರು ಪ್ರತಿತಂತ್ರ ರೂಪಿಸಿದ್ಧಾರೆ ಎನ್ನಲಾಗಿದೆ. ತನ್ನ ವಿರುದ್ಧ ಕಣಕ್ಕಿಳಿಸಲು ಹೊರಟಿರುವ ಉಮೇಶ್ ಜಾಧವ್‍ಗೆ ಸಂಪುಟ ವಿಸ್ತರಣೆಯಲ್ಲಿ ಸಚಿವ ಸ್ಥಾನ ಕೊಡಿಸುವ ಮುಖಾಂತರ ತಿರುಗೇಟು ನೀಡಲು ಮುಂದಾಗಿದ್ದಾರೆ.

    ಉಮೇಶ್ ಜಾಧವ್‍ಗೆ ಸಚಿವ ಸ್ಥಾನ ಕೊಡಿಸಿದರೆ ಬಿಜೆಪಿಗೆ ಹೋಗಲಿಕ್ಕಿಲ್ಲ. ನನ್ನ ವಿರುದ್ಧವೇ ಲೋಕಸಭಾ ಅಭ್ಯರ್ಥಿಯಾಗಲು ಒಪ್ಪುವುದಿಲ್ಲ. ಶಾಸಕ ಉಮೇಶ್ ಜಾಧವ್ ಪಕ್ಷದಲ್ಲೇ ಉಳಿಯಲಿದ್ದಾರೆ. ಬಿಜೆಪಿಗೆ ಸಮರ್ಥ ಅಭ್ಯರ್ಥಿ ಕಳೆದುಕೊಂಡಂತಾಗಲಿದೆ. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link