ದೆಹಲಿ:
ಮಾಜಿ ಕೇಂದ್ರ ಹಣಕಾಸು ಸಚಿವ ಪಿ.ಚಿದಂಬರಂ ಅವರ ಪುತ್ರ ಕಾರ್ತಿ ಚಿದಂಬರಂ ಗೆ ಸೇರಿದ, ಭಾರತ, ಬ್ರಿಟನ್ ಮತ್ತು ಸ್ಪೇನ್‌ನಲ್ಲಿನ ಸುಮಾರು 54 ಕೋಟಿ ರೂ. ಮೌಲ್ಯದ ಆಸ್ತಿಪಾಸ್ತಿಯನ್ನು ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿಕೊಂಡಿದೆ.
ಐಎನ್‌ಎಕ್ಸ್ ಮೀಡಿಯಾ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕಾರ್ತಿ ಅವರಿಗೆ ಸೇರಿರುವ ತಮಿಳುನಾಡಿನ ಕೊಡೈಕೆನಾಲ್, ಊಟಿಯಲ್ಲಿ ಹೊಂದಿರುವ ಸ್ವತ್ತುಗಳು ಮತ್ತು ದೆಹಲಿಯ ಜೊರ್‌ಬಾಘ್‌ನಲ್ಲಿರುವ ಫ್ಲ್ಯಾಟ್ ಅನ್ನು ಅಕ್ರಮ ಹಣ ವರ್ಗಾವಣೆ ಕಾಯ್ದೆ ಅನ್ವಯ ಮುಟ್ಟುಗೋಲು ಹಾಕಿಕೊಳ್ಳುವ ಸಲುವಾಗಿ ಜಾರಿ ನಿರ್ದೇಶನಾಲಯ ಆದೇಶ ಹೊರಡಿಸಿತ್ತು.
ಈ ಆದೇಶದ ಪ್ರಕಾರವೇ ಬ್ರಿಟನ್‌ನಲ್ಲಿ ಕಾರ್ತಿ ಹೊಂದಿರುವ ಕಾಟೇಜ್ ಮತ್ತು ಮನೆ, ಸ್ಪೇನ್‌ನ ಬಾರ್ಸಿಲೋನಾದಲ್ಲಿರುವ ಟೆನ್ನಿಸ್ ಕ್ಲಬ್ ಅನ್ನೂ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ತನಿಖಾ ಸಂಸ್ಥೆ ತಿಳಿಸಿದೆ.
ಇದೇ ವೇಳೆ ಚೆನ್ನೈನಲ್ಲಿನ ಒಂದು ಬ್ಯಾಂಕಿನಲ್ಲಿ ಅಡ್ವಾಂಟೇಜ್ ಸ್ಟ್ರಾಟೆಜಿಕ್ ಕನ್ಸಲ್ಟಿಂಗ್ ಪ್ರೈವೇಟ್ ಲಿಮಿಟೆಡ್ (ಎಎಸ್‌ಸಿಪಿಎಲ್) ಹೆಸರಿನಲ್ಲಿ ಇರಿಸಿರುವ 90 ಲಕ್ಷ ರೂ.ಗಳ ನಿರಖು ಠೇವಣಿಯನ್ನು ಕೂಡ ಮುಟ್ಟುಗೋಲು ಹಾಕಲಾಗಿದೆ. ಈ ಎಲ್ಲ ಸ್ವತ್ತುಗಳು ಕಾರ್ತಿ ಮತ್ತು ಎಎಸ್‌ಸಿಪಿಎಲ್ ಹೆಸರಿನಲ್ಲಿವೆ. ಕಾರ್ತಿಗೆ ಎಎಸ್‌ಸಿಪಿಎಲ್ ಸಂಸ್ಥೆ ಜತೆಗೆ ನಂಟಿದೆ ಎಂದು ಇಡಿ ಹೇಳಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ