ಹುಳಿಯಾರು:
ಹುಳಿಯಾರು-ಕೆಂಕೆರೆ ಬಿ.ಎಂ.ಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕ1 ಮತ್ತು 2 ರ ಅಡಿಯಲ್ಲಿ ‘ಜೀವನ ಕೌಶಲ’ ಕಾರ್ಯಾಗಾರವನ್ನು ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಖ್ಯಾತ ಆಪ್ತ ಸಮಾಲೋಚಕರಾದ ಸಿ.ಸಿ ಪಾವಟೆ ಅವರು ಮಾತನಾಡಿದರು. ಯಾವಾಗ ಪಾಶ್ಚಾತ್ಯರಿಗೆ ಸ್ನಾನ ಮಾಡಲು ಬರುತ್ತಿರಲಿಲ್ಲವೋ ಆಗ ನಮ್ಮಲ್ಲಿ ಬುದ್ದ ಬಂದಿದ್ದ. ಆದರೆ ಇಂದು ಪಾಶ್ಚಾತ್ಯರು ನಮಗಿಂತ ಮುಂದಿದ್ದಾರೆ. ಕಾರಣ ಅವರು ತಾವು ತಿಳಿದಿದ್ದನ್ನು ಶೇಕಡಾ 80 ರಷ್ಟು ಪಾಲಿಸುತ್ತಾರೆ. ನಾವು ನಮಗೆ ತಿಳಿದಿರುವುದರಲ್ಲಿ ಶೇಕಡಾ 20 ರಷ್ಟನ್ನು ಪಾಲಿಸುತ್ತೇವೆ ಎಂದು ಸಮಸ್ಯೆಯ ಕೇಂದ್ರವನ್ನು ಗುರುತಿಸಿದರು.
ನಾವು ನಮ್ಮ ದೇಹ ಸೌಂದರ್ಯಕ್ಕಾಗಿ ಬೇಕಾದ ವ್ಯಾಯಾಮ ಮಾಡಲೂ ಸೋಮಾರಿತನ ತೋರುತ್ತಿದ್ದೇವೆ. ಇದು ಆಗಬಾರದು; ನಿಯಮಿತ ವ್ಯಾಯಾಮ, ಉತ್ತಮ ಆಹಾರ ಪದ್ಧತಿ ರೂಢಿಸಿಕೊಳ್ಳಬೇಕು ಎಂದರು. ನಾವು ಹೇಗೆ ಭಾವಿಸುತ್ತೇವೋ ಹಾಗೆಯೇ ಆಗುತ್ತೇವೆ. ಆದ್ದರಿಂದ ‘ನನ್ನಿಂದ ಸಾಧ್ಯ’ ಎಂಬ ಧನಾತ್ಮಕ ಭಾವನೆಯನ್ನು ವಿದ್ಯಾಥಿಗಳು ಬೆಳೆಸಿಕೊಳ್ಳಬೇಕು ಎಂದು ಹೇಳಿ ಉತ್ತಮ ಜೀವನ ಶೈಲಿಯನ್ನು ಈಗಿನಿಂದಲೇ ರೂಢಿಸಿಕೊಳ್ಳಿ ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಬಿಳಿಗೆರೆ ಕೃಷ್ಣಮೂರ್ತಿಯವರು ಮಾತನಾಡಿ ಎಲ್ಲರಂತೆ ಎಲ್ಲ ಕೆಲಸಗಳನ್ನು ಮಾಡುತ್ತಲೇ ನಾವು ಸಾಧಕರಾಗಬಹುದು. ಆದರೆ ಮಾಡುವ ಕೆಲಸದಲ್ಲಿ ಶ್ರದ್ಧೆ ಇರಬೇಕು ಎಂದು ಕಿವಿ ಮಾತು ಹೇಳಿದರು.
ಕಾರ್ಯಕ್ರಮದಲ್ಲಿ ತುಮಕೂರು ವಿಶ್ವವಿದ್ಯಾಲಯದ ಎನ್.ಎಸ್.ಎಸ್ ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ. ಎಂ.ಯು.ಲೋಕೇಶ್ , ಎನ್.ಎಸ್.ಎಸ್ ಕಾರ್ಯಕ್ರಮಾಧಿಕಾರಿ ಪ್ರೊ. ಎಂ.ಜೆ. ಮೋಹನ್ ಕುಮಾರ್, ಡಾ.ಲೋಕೇಶ ನಾಯಕ್, ಪ್ರೊ. ಆರ್.ಶಿವಯ್ಯ, ಪ್ರೊ. ವಲಿ ಆರ್, ಡಾ. ಸುಷ್ಮಾ ಬಿರಾದಾರ್, ಪ್ರೊ. ಮಲ್ಲಿಕಾರ್ಜುನ್, ಉಪನ್ಯಾಸಕರಾದ ಚಂದ್ರಮೌಳಿ, ನಾಗರಾಜರಾವ್ ಹಾಗೂ ಜಯಪ್ರಕಾಶ್ ಇದ್ದರು.