ಮುಂದಿನ ದಿನಗಳಲ್ಲಿ ತುಮಕೂರಿನ ನೀರಿನ ಸಮಸ್ಯೆ ರಾಜಕಾರಣದ ಒಂದು ಭಾಗ ಆಗಲಿದೆ

ತುಮಕೂರು

       ಈ ವರ್ಷವೂ ಜಿಲ್ಲೆ ಬರಗಾಲದ ದವಡೆಗೆ ಸಿಲುಕಿದ್ದು ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ರಾಜಕಾರಣದ ಒಂದು ಭಾಗವೂ ಆಗಲಿದೆ. ಗೊರೂರು ಜಲಾಶಯ ಈ ಬಾರಿ ತುಂಬಿ ಹರಿದಿದ್ದು, ಹೇಮಾವತಿ ನಾಲಾ ವ್ಯಾಪ್ತಿಯ ಜನತೆಗೆ ಸಂತಸವನ್ನಂತೂ ತಂದಿತು. ಆದರೆ ಕೆರೆಗಳನ್ನು ಮಾತ್ರ ಈವರೆಗೂ ತುಂಬಿಸಲು ಸಾಧ್ಯವಾಗಿಲ್ಲ. ಜಲಾಶಯದಲ್ಲಿ ನೀರಿದೆ. ನಾಲೆಯಲ್ಲಿ ನೀರು ಹರಿಯುತ್ತಿದೆ. ಕೆರೆಗಳು ಮಾತ್ರ ತುಂಬಿಲ್ಲ. ಹಾಗಾದರೆ ಹರಿಯುತ್ತಿರುವ ನೀರು ಎಲ್ಲಿ ಹೋಯಿತು? 

     ಅಕ್ಟೋಬರ್ 12 ರಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನೀರಾವರಿ ಸಲಹಾ ಸಮಿತಿಯ ಸಭೆ ನಡೆಯಿತು. ಸಮಿತಿಯ ಅಧ್ಯಕ್ಷ ಎಚ್.ಡಿ.ರೇವಣ್ಣ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ಹೇಮಾವತಿ ನಾಲಾ ವಲಯದ ಮುಖ್ಯ ಎಂಜಿನಿಯರ್ ನೀಡಿದ ಅಂಕಿ ಅಂಶಗಳಿಗೂ ವಾಸ್ತವ ಚಿತ್ರಣಕ್ಕೂ ಸಂಬಂಧ ಇದೆಯೇ ಎಂಬ ಪ್ರಶ್ನೆಗಳು ಎದುರಾಗುತ್ತವೆ. ಈವರೆಗೂ ಜಿಲ್ಲೆಗೆ 14 ಟಿಎಂಸಿ ನೀರು ಬಿಡುಗಡೆ ಮಾಡಲಾಗಿದೆ. ಅಚ್ಚುಕಟ್ಟು ವ್ಯಾಪ್ತಿಯಲ್ಲಿರುವ 246 ಕೆರೆಗಳ ಪೈಕಿ 92 ಕೆರೆಗಳನ್ನು ಪೂರ್ಣ ಪ್ರಮಾಣದಲ್ಲಿ ತುಂಬಿಸಲಾಗಿದೆ ಎಂದು ಹೇಳಿದ್ದರು.

      ಕಳೆದ 2-3 ವರ್ಷಗಳಿಂದ ಸತತ ಬರಗಾಲ ಎದುರಾಗಿ ರೈತರು ಬೆಳೆ ತೆಗೆಯಲು ಸಾಧ್ಯವಾಗಿಲ್ಲ. ಈ ವರ್ಷವಾದರೂ ಲಭ್ಯವಿರುವ ನೀರನ್ನು ಬಳಸಿಕೊಂಡು ನಿಗದಿತ ಬೆಳೆ ಬೆಳೆಯುವ ಹಾಗೂ ಕೆರೆಗಳನ್ನು ತುಂಬಿಸುವ ಒತ್ತಡಗಳು ಹೆಚ್ಚಾದಂತೆ ತುಮಕೂರಿನಲ್ಲಿಯೇ ಹೇಮಾವತಿ ನಾಲಾ ವಲಯದ ಎಲ್ಲ ಕ್ಷೇತ್ರಗಳ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಭೆ ತುಮಕೂರು ಕೇಂದ್ರದಲ್ಲಿ ನಡೆಯಿತಾದರೂ ಅಂತಿಮ ನಿರ್ಧಾರಕ್ಕೆ ಬರಲು ಸಾಧ್ಯವಾಗಲಿಲ್ಲ. ಇಡೀ ಸಭೆಯೇ ಕೆಲವು ಕಾರಣಗಳಿಂದಾಗಿ ಮೊಟಕುಗೊಂಡು ಮುಂದಿನ ವಾರಕ್ಕೆ ಬೆಂಗಳೂರಿಗೆ ಶಿಫ್ಟ್ ಆಗಿದೆ.

       ಇಷ್ಟು ದಿನಗಳಾದರೂ ಕೆರೆಗಳಿಗೆ ನೀರು ತುಂಬದೇ ಇರುವುದು, ಸಮರ್ಪಕವಾಗಿ ನಿಗದಿತ ಪ್ರಮಾಣದ ನೀರು ಹರಿಯದೇ ಇರುವುದು, ಹಲವು ಆತಂಕಗಳಿಗೆ ಕಾರಣವಾಗಿದೆ. ಇತ್ತೀಚೆಗಷ್ಟೇ ಹೇಮಾವತಿ ನೀರಿಗಾಗಿ ಕೂಗು ಆರಂಭವಾಯಿತು. ಅದೇಕೋ ಹಿಂದಿನ ವರ್ಷಗಳಂತೆ ಈ ಬಾರಿ ರಾಜಕಾರಣಿಗಳು ಹೇಮಾವತಿ ನೀರಿನ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಂತೆ ಕಂಡುಬರುತ್ತಿಲ್ಲ. ಅಧಿಕಾರಿಗಳಂತೂ ಅಸೀಮ ನಿರ್ಲಕ್ಷ್ಯಕ್ಕೆ ಒಳಗಾಗಿದ್ದಾರೆ. ಎಷ್ಟರ ಮಟ್ಟಿಗೆ ನಿರ್ಲಕ್ಷ್ಯವಿದೆ ಎಂದರೆ ಅವರು ತೋರಿಸುವ ಅಂಕಿ ಅಂಶಗಳಿಗೂ ವಾಸ್ತವ ಸ್ಥಿತಿಗೂ ಹೊಂದಾಣಿಕೆಯೇ ಆಗುತ್ತಿಲ್ಲ.

       ಅಧಿಕಾರಿಗಳ ಈ ಸುಳ್ಳು ವರದಿಯೇ ಕೆಲವರಿಗೆ ಸಿಟ್ಟು ಭರಿಸಿದೆ. ಮೊನ್ನೆ ನಡೆದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಚಿ.ನಾ.ಹಳ್ಳಿ ಶಾಸಕ ಜೆ.ಸಿ.ಮಾಧುಸ್ವಾಮಿ ಅಧಿಕಾರಿಗಳ ವಿರುದ್ಧ ಅಸಮಾಧಾನ ಹೊರ ಹಾಕಿದರು. ಚಿ.ನಾ.ಹಳ್ಳಿ ತಾಲ್ಲೂಕಿನ ಕೆರೆಗಳಲ್ಲಿ ಒಂದು ಡ್ರಾಪ್ ನೀರಿಲ್ಲ. ಆದರೂ ನೀರು ಬಿಟ್ಟಿದ್ದೇವೆಂದು ಹೇಳುತ್ತೀರಿ ಎಂದು ಹರಿಹಾಯ್ದರು. ಅರಸೀಕೆರೆ ಕ್ಷೇತ್ರದ ಶಾಸಕ ಶಿವಲಿಂಗೇಗೌಡ ಹೇಮಾವತಿ ಎಂಜಿನಿಯರ್‍ಗಳ ವಿರುದ್ಧ ಅಬ್ಬರಿಸಿದರು. ನಾಲೆಗೆ ಡೈನಮೈಟ್ ಇಡುತ್ತೇನೆ ಎಂದರು. ಕುಣಿಗಲ್ ಶಾಸಕ ರಂಗನಾಥ್ ನನ್ನ ಮಾತನ್ನು ಅಧಿಕಾರಿಗಳು ಕೇಳುತ್ತಿಲ್ಲ ಎಂದು ಸಚಿವರೆದುರು ಅಸಹಾಯಕತೆ ವ್ಯಕ್ತಪಡಿಸಿದರು.

       ಅಕ್ಟೋಬರ್ 12 ರಂದು ನಡೆದ ಸಭೆಯಲ್ಲಿ ಯಾವುದೇ ಒಮ್ಮತದ ನಿರ್ಧಾರಕ್ಕೆ ಬರಲು ಸಾಧ್ಯವಾಗದೇ ಇದ್ದರೂ ಒಂದಷ್ಟು ವಿಷಯಗಳು ಚರ್ಚೆಗಂತೂ ಬಂದಿವೆ. ಎಲ್ಲರದ್ದೂ ಒಂದೇ ಕೂಗು. ನಮ್ಮ ಕಡೆಗೆ ನೀರು ಹರಿದಿಲ್ಲ ಎಂಬುದು. ಹಾಗಾದರೆ ಅಧಿಕಾರಿಗಳೇ ಹೇಳುವ ಪ್ರಕಾರ ಜಿಲ್ಲೆಗೆ ಈವರೆಗೆ 14 ಟಿ.ಎಂ.ಸಿ. ನೀರು ಬಿಡುಗಡೆಯಾಗಿದ್ದು, ಅದು ಎಲ್ಲಿಗೆ ಹೋಯಿತು? ಗೊರೂರು ಜಲಾಶಯದಿಂದ ಹೇಮಾವತಿ ನಾಲೆಯಲ್ಲಿ ನೀರು ಹರಿಯುತ್ತಿದೆ. ಆದರೆ ಕೆರೆಗಳು ಮಾತ್ರ ತುಂಬುತ್ತಿಲ್ಲ. ತುಮಕೂರು ನಗರಕ್ಕೆ ನೀರೊದಗಿಸುವ ಬುಗುಡನಹಳ್ಳಿ ಕೆರೆಯೂ ತುಂಬಿಲ್ಲ. ನೀರು ಎಲ್ಲಿ ಪೋಲಾಗುತ್ತಿದೆ? ಸಮರ್ಪಕವಾಗಿ ನೀರು ಹರಿಯುತ್ತಿದೆಯೇ? ಇತ್ಯಾದಿ ವಾಸ್ತವ ವಿಷಯಗಳ ಬಗ್ಗೆ ಹೆಚ್ಚು ಚರ್ಚೆಯಾಗಬೇಕು.

        ತುಮಕೂರು ನಾಲಾ ವಲಯಕ್ಕೆ (ಜಿಲ್ಲೆಗೆ) 24.65 ಟಿ.ಎಂ.ಸಿ. ನೀರು ಹರಿಯಬೇಕು. ಆದರೆ ಅದು ಸಾಧ್ಯವಾಗುತ್ತಿಲ್ಲ. ಇದಕ್ಕೆ ಇರುವ ಕಾರಣಗಳಾದರೂ ಏನು? ಇತ್ಯಾದಿಗಳ ಬಗ್ಗೆ ಸುವಿಸ್ತಾರ ಚರ್ಚೆಯಾಗಬೇಕು. ನಾಲಾ ಅಗಲೀಕರಣ, ನಾಲೆಯಲ್ಲಿ ಸಿಲ್ಟ್ ತೆಗೆಯುವುದು ಇತ್ಯಾದಿ ವಿಷಯಗಳು ಹೆಚ್ಚು ಚರ್ಚೆಗೊಳಗಾಗುತ್ತಿವೆ. ನಾಲೆಯಲ್ಲಿ ಗಿಡಮರಗಳು ಬೆಳೆದು ನಿಂತಿವೆ. ನೀರು ಹರಿಯುತ್ತಿರುವ ಈ ಸಮಯದಲ್ಲಿ ಇದೆಲ್ಲ ಈಗ ಸಾಧ್ಯವೇ ಎಂಬ ವಿಷಯಗಳತ್ತಲೂ ಗಮನ ಹರಿಸಬೇಕು. ಸತತವಾಗಿ ಎರಡು, ಮೂರು ವರ್ಷಗಳ ಕಾಲ ಬರಗಾಲ ಎದುರಾಗಿ ನಾಲೆ ಒಣಗಿದ್ದ ಸಂದರ್ಭದಲ್ಲಿ ಅಗಲೀಕರಣ ಸೇರಿದಂತೆ ಒಂದಷ್ಟು ವಿಷಯಗಳು ಮುನ್ನಲೆಗೆ ಬರಬೇಕಿತ್ತು. ಈಗ ಚರ್ಚೆಗೆ ಬಂದಿದೆ. ನಮ್ಮ ಪಾಲಿನ ನೀರನ್ನು ನಮಗೆ ಕೊಡಿ ಎಂದು ಕೇಳುವ ಹಕ್ಕಿನಂತೆಯೇ ನೀರು ಹರಿಯಲು ಇರುವ ವಾಸ್ತವ ತೊಡಕುಗಳಾದರೂ ಏನು ಎಂಬುದರತ್ತ ಜನಪ್ರತಿನಿಧಿಗಳು ಮುಂದಿನ ಸಭೆಯಲ್ಲಿ ಮಾತನಾಡಲಿ.

      ಈ ಹಿಂದೆ ಗೊರೂರು ಜಲಾಶಯದಿಂದ ತುಮಕೂರು ನಾಲೆಗೆ ನೀರು ಹರಿಸಿದಾಗ ಕೆಲವೇ ದಿನಗಳಲ್ಲಿ ನಾಲೆ ಒಡೆದು ಹೋಗುತ್ತಿತ್ತು. ನಿರಂತರವಾಗಿ ನಡೆಯುತ್ತಿದ್ದ ಇದನ್ನು ಸರಿಪಡಿಸುವ ಸಲುವಾಗಿಯೇ ಅಗಲೀಕರಣ ಮಾಡಲಾಯಿತು. 0.72 ಕಿ.ಮೀ.ನಲ್ಲಿ ನಾಲಾ ಅಗಲೀಕರಣ ಮಾಡಲಾಗಿದೆ. ಇದು ಹಾಸನ ಗಡಿ ಭಾಗಕ್ಕೆ ಸೀಮಿತವಾಗುತ್ತದೆ. ಅಲ್ಲಿಂದ ಈಚೆಗೆ ತುಮಕೂರು ವಲಯಕ್ಕೆ ಅನುಕೂಲವಾಗುತ್ತಿಲ್ಲ. ಆಗ ಅಗಲೀಕರಣ ಮಾಡುವ ಸಂದರ್ಭದಲ್ಲಿ ತುಮಕೂರು ವಲಯಕ್ಕೂ ಇದನ್ನು ವಿಸ್ತರಿಸಿದ್ದರೆ ಈ ವೇಳೆಗಾಗಲೇ ನೀರಿನ ಪ್ರಮಾಣ ಹೆಚ್ಚಿಸಬಹುದಾದ ಸಾಧ್ಯತೆಗಳಿದ್ದವು.

       ಹೇಮಾವತಿ ನಾಲೆ ಬಹುತೇಕ ಹೂಳಿನಿಂದ ತುಂಬಿದೆ. 1400 ಕ್ಯೂಸೆಕ್ಸ್ ನೀರು ಹರಿಯಬೇಕಿದ್ದ ನಾಲೆಯಲ್ಲಿ ಹೆಚ್ಚೆಂದರೆ 800 ಕ್ಯೂಸೆಕ್ಸ್ ಹರಿಸಲಾಗುತ್ತಿದೆ. 900 ಕ್ಯೂಸೆಕ್ಸ್‍ಗಳಿಗಿಂತ ಹೆಚ್ಚಿನ ಪ್ರಮಾಣದ ನೀರು ನಾಲೆಯಲ್ಲಿ ಹರಿಯಲು ಸಾಧ್ಯವಿಲ್ಲ ಎಂದೇ ಹೇಳಲಾಗುತ್ತಿದೆ. 2500 ಕ್ಯೂಸೆಕ್ಸ್‍ವರೆಗೆ ನೀರಿನ ಪ್ರಮಾಣ ಹರಿಯುವಂತೆ ನಾಲಾ ಅಗಲೀಕರಣವಾದರೆ ಜಿಲ್ಲೆಯ ಪಾಲಿಗೆ ನಿಗದಿಯಾಗಿರುವ ಟಿಎಂಸಿ ನೀರನ್ನು ಖಂಡಿತ ಪಡೆಯಲು ಸಾಧ್ಯವಿದೆ.

      ಗೊರೂರು ಜಲಾಶಯದಲ್ಲಿ ಪ್ರಸ್ತುತ 24.45 ಟಿಎಂಸಿ ನೀರು ಲಭ್ಯವಿದೆ. ಡಿಸೆಂಬರ್ 15 ರವರೆಗೆ ಹೇಮಾವತಿ ಎಡದಂಡೆ ಹಾಗೂ ಬಲದಂಡೆ ನಾಲೆಗಳಲ್ಲಿ ನೀರು ಹರಿಸಲು ಉದ್ದೇಶಿಸಲಾಗಿದೆ. ಡಿಸೆಂಬರ್ ಒಳಗೆ ಮಳೆಯಾಗದಿದ್ದರೆ ಜಿಲ್ಲೆ ನೀರಿನ ಹಾಹಾಕಾರ ಎದುರಿಸಲಿದೆ. ಹೀಗಾಗಿ ನೀರಿನ ಬಳಕೆ ಮತ್ತು ಹರಿಸುವಿಕೆ ಎರಡೂ ಅತ್ಯಂತ ಪ್ರಮುಖ –ಅಗತ್ಯ ವಿಷಯಗಳಾಗಿದ್ದು, ರಾಜಕಾರಣಿಗಳು, ಅಧಿಕಾರಿಗಳು ಸೂಕ್ತ ನಿರ್ಧಾರ ಕೈಗೊಳ್ಳುವ ಅಗತ್ಯವಿದೆ. ತಾಲ್ಲೂಕುವಾರು ನೀರಿಗಾಗಿ ಕಿತ್ತಾಡದೆ ಒಟ್ಟಾರೆ ಜಿಲ್ಲೆಯ ಸಮಗ್ರ ದೃಷ್ಟಿಕೋನ ಎಲ್ಲರಲ್ಲೂ ಮೂಡಬೇಕಾಗಿರುವುದು ಇಂದಿನ ಅನಿವಾರ್ಯತೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link