ಕನಸುಗಳನ್ನು ನನಸು ಮಾಡಿಕೊಳ್ಳಲು ವಿದ್ಯಾಭ್ಯಾಸ ಸಹಕಾರಿ : ಪಿ.ಎಸ್.ರಮೇಶ್

ತಿಪಟೂರು :

      ವಿದ್ಯಾರ್ಥಿ ಜೀವನ ಅತ್ಯಮೂಲ್ಯವಾಗಿದ್ದು ತಮ್ಮ ಕನಸುಗಳನ್ನು ನನಸು ಮಾಡಿಕೊಳ್ಳಲು ಇರುವ ಏಕೈಕ ಅವಕಾಶ ಇದಾಗಿದ್ದು, ವಿದ್ಯಾಭ್ಯಾಸದ ಕಡೆ ಗಮನಹರಿಸುವ ಮೂಲಕ ಗುರು-ಹಿರಿಯರು, ಪೋಷಕರುಗಳ ಮಾರ್ಗದರ್ಶನ ಅರಿತು ಸನ್ನಡತೆಯಲ್ಲಿ ಸಾಗಬೇಕೆಂದು ಬೆಂಗಳೂರಿನ ಡೈನಾಮಿಕ್ ಟೆಕ್ನಾಲಜಿಯ ಮುಖ್ಯಸ್ಥರಾದ ಪಿ.ಎಸ್. ರಮೇಶ್ ತಿಳಿಸಿದರು.

        ನಗರದ ಕಲ್ಪತರು ತಾಂತ್ರಿಕ ಮಹಾವಿದ್ಯಾಲಯದ ಪ್ರಥಮ ವರ್ಷದ ಎಂ.ಬಿ.ಎ ವಿದ್ಯಾರ್ಥಿಗಳ ಸ್ವಾಗತ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಒಂದು ಕ್ಷೇತ್ರದಲ್ಲಿ ಬೆಳೆಯಬೇಕಾದರೆ ಸಾಕಷ್ಟು ಏಳು-ಬೀಳುಗಳು ಬರುತ್ತವೆ. ಅವುಗಳಿಗೆ ಹೆದರದೆ ಧೈರ್ಯದಿಂದ ಎದುರಿಸುವ ಕಲೆಗಾರಿಕೆಯನ್ನು ಬೆಳೆಸಿಕೊಳ್ಳಬೇಕು. ನಿಮ್ಮಲ್ಲಿ ಸಾಧಿಸುವ ಛಲವಿದ್ದರೆ ಗುರಿ ತಲುಪಲು ಸುಲಭವಾಗುತ್ತದೆ.

       ಎಷ್ಟು ಓದಿದರೂ ಓದಿಕೆ ತಕ್ಕಂತೆ ಕೆಲಸ ಸಿಗುವುದಿಲ್ಲ ಎಂಬ ಮನೋಭಾವ ಇಂದಿನ ವಿದ್ಯಾರ್ಥಿಗಳಲ್ಲಿ ಹೆಚ್ಚಾಗಿದೆ. ಯುವ ಜನಾಂಗ ನಿರುದ್ಯೋಗ ಸಮಸ್ಯೆಯನ್ನು ಎದುರಿಸುತ್ತಿರಬಹುದು ಆದರೆ ನೀವು ಪಠ್ಯದ ಶಿಕ್ಷಣದ ಜೊತೆಗೆ ಇತರೆ ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿಗಳು ಭವಿಷ್ಯದ ಹಾದಿಯಲ್ಲಿ ಏನೇ ಬಂದರೂ ಅದನ್ನು ಧೈರ್ಯವಾಗಿ ಎದುರಿಸುತ್ತೇನೆಂಬ ಛಲ ಬೆಳೆಸಿಕೊಂಡರೆ ಗುರಿಯನ್ನು ಸುಲಭವಾಗಿ ಮುಟ್ಟಬಹುದು ಎಂದ ಅವರು, ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.

       ಕೆವಿಎಸ್ ಅಧ್ಯಕ್ಷ ಪಿ.ಕೆ. ತಿಪ್ಪೇರುದ್ರಪ್ಪ ಮಾತನಾಡಿ, ಪ್ರತಿಯೊಬ್ಬರಿಗೂ ಮೌಲ್ಯಾಧಾರಿತ ಶಿಕ್ಷಣ ದೊರೆಯಬೇಕೆಂಬ ಆಶಯದೊಂದಿಗೆ ಶಿಕ್ಷಣ ಸಂಸ್ಥೆಯನ್ನು ತೆರೆಯಲಾಗಿದ್ದು, ಸುಮಾರು ಐವತ್ತು ವರ್ಷಗಳಿಂದಲೂ ಹಗಲಿರುಳು ಶ್ರಮಿಸುತ್ತಿದೆ.         

       ಮಾಂಟೆಸ್ಸೋರಿಯಿಂದ, ಇಂಜಿನಿಯರಿಂಗ್, ಎಂ.ಬಿ.ಎವರೆಗೂ ಶಿಕ್ಷಣ ನೀಡುತ್ತಾ ಇಂದು ಕಲ್ಪವೃಕ್ಷದಂತೆ ರಾಷ್ಟ್ರಮಟ್ಟದಲ್ಲಿ ಬೆಳೆದು ನಿಂತು ಲಕ್ಷಾಂತರ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿದೆ. ಹಿರಿಯ ವಿದ್ಯಾರ್ಥಿಗಳ ಹಾದಿಯಲ್ಲಿ ನೀವು ಮುನ್ನಡೆದು ಕಾಲೇಜಿನ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡು ಉತ್ತಮ ವ್ಯಕ್ತಿಗಳಾಗಿ ಬೆಳದು ಕಾಲೇಜಿಗೆ ಮತ್ತಷ್ಟು ಕೀರ್ತಿ ತರಬೇಕೆಂದರು.

         ಕೆಐಟಿ ಪ್ರಾಂಶುಪಾಲ ಡಾ. ನಂದೀಶಯ್ಯ ಮಾತನಾಡಿ ನಿರುದ್ಯೋಗ ಸಮಸ್ಯೆಯನ್ನು ಬುಡಸಮೇತ ತೆಗೆದುಹಾಕಿ ಸ್ವಂತ ವ್ಯವಹಾರಗಳನ್ನು ಮಾಡುತ್ತಾ, ದೊಡ್ಡ ದೊಡ್ಡ ಕಂಪನಿಗಳು, ಸಂಸ್ಥೆಗಳನ್ನು ಹುಟ್ಟುಹಾಕಬೇಕು. ವ್ಯವಹಾರ ಹೇಗೆ ಮಾಡಬೇಕು, ಕಂಪನಿಗಳನ್ನು ಹೇಗೆ ಹುಟ್ಟುಹಾಕಬೇಕೆಂಬ ಸಂಪೂರ್ಣ ಮಾಹಿತಿಯನ್ನು ಈ ಎರಡು ವರ್ಷಗಳ ಎಂ.ಬಿ.ಎ ತರಬೇತಿಯಲ್ಲಿ ನೀವು ಪಡೆದುಕೊಳ್ಳುತ್ತೀರಿ. ಗ್ರಾಮೀಣ ವಿದ್ಯಾರ್ಥಿಗಳ ಉಜ್ವಲ ಭವಿಷ್ಯತ್ತಿಗಾಗಿ ಸುಲಭ ಮತ್ತು ಅತ್ಯಂತ ಕಡಿಮೆ ವೆಚ್ಚದಲ್ಲಿ ಪದವಿಗಳನ್ನು ನೀಡುವ ಸಲುವಾಗಿ ಕೆವಿಎಸ್ ಸಂಸ್ಥೆ ಸಾರ್ಥಕ ಸೇವೆಯನ್ನು ಸಲ್ಲಿಸುತ್ತಿದೆ ಎಂದರು.

         ಎಂ.ಬಿ.ಎ ವಿಭಾಗದ ಮುಖ್ಯಸ್ಥೆ ದೀಪ್ತಿಅಮಿತ್ ಮಾತನಾಡಿ ಕೆಐಟಿಯಲ್ಲಿ ನುರಿತ ಉಪನ್ಯಾಸಕರು, ಸುಸಜ್ಜಿತ ಕಟ್ಟಡ, ಗ್ರಂಥಾಲಯ, ಕಂಪ್ಯೂಟರ್ ಇತರೆ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಅಂತರಜಾಲ ಮತ್ತು ಪಠ್ಯಗಳನ್ನು ಕಲಿಯುವ ಅವಕಾಶವನ್ನು ಸಂಸ್ಥೆಯು ನೀಡಿದ್ದು, ಇದನ್ನು ಅರಿತು ವಿದ್ಯಾರ್ಥಿಗಳು ಗಂಭಿರವಾಗಿ ಮನಗಂಡು ತಮ್ಮ ಉಜ್ವಲ ಭವಿಷ್ಯ ರೂಪಿಸಿಕೊಂಡು ಉತ್ತಮ ಬದುಕನ್ನು ಕಟ್ಟಿಕೊಂಡು ಕಾಲೇಜಿಗೆ ಒಳ್ಳೆಯ ಹೆಸರು ತರಬೇಕೆಂದರು.

        ಕಾರ್ಯಕ್ರಮದಲ್ಲಿ ಕೆವಿಎಸ್ ಖಜಾಂಚಿ ಟಿ.ಎಸ್. ಶಿವಪ್ರಸಾದ್, ಕಾರ್ಯದರ್ಶಿ ಟಿ.ಯು. ಜಗದೀಶಮೂರ್ತಿ, ಉಪನ್ಯಾಸಕ ಶೇಖರ್‍ಗೌಡ ಮತ್ತಿತರರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link