ನಿವೇಶನಕ್ಕೆ ಆಗ್ರಹಿಸಿ ದಲಿತರ ಪ್ರತಿಭಟನೆ

ಚಿತ್ರದುರ್ಗ:

        ನಿವೇಶನವಿಲ್ಲದ ಬಡವರಿಗೆ ನಗರದ ಸುತ್ತಮುತ್ತ ಇರುವ ಗೋಮಾಳ ಜಮೀನಿನಲ್ಲಿ ನಿವೇಶನ ನೀಡುವಂತೆ ಆಗ್ರಹಿಸಿ ದಲಿತ ಶೋಷಿತ ಸಮಾಜ ಸಂಘರ್ಷ ಸಮಿತಿಯಿಂದ ಸೋಮವಾರ ಚಿತ್ರದುರ್ಗದಲ್ಲಿ ಪ್ರತಿಭಟನೆ ನಡೆಸಿ ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

        ಪ್ರವಾಸಿ ಮಂದಿರದಿಂದ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಪ್ರತಿಭಟನಾಕಾರರು ಹತ್ತಾರು ವರ್ಷಗಳಿಂದಲೂ ವಾಸಿಸಲು ಸ್ವಂತ ಮನೆಯಿಲ್ಲದಿರುವ ಕಾರಣ ಕೊಳಗೇರಿಗಳಲ್ಲಿ ಪ್ರಾಣಿಗಳಿಗಿಂತಲೂ ಕಡೆಯಾಗಿ ವಾಸಿಸುವಂತಾಗಿದೆ ಎಂದು ತಮ್ಮ ಸಂಕಷ್ಟಗಳನ್ನು ತೋಡಿಕೊಂಡರು.

        ಪ್ರತಿಭಟನೆಯ ಮುಂದಾಳತ್ವ ವಹಿಸಿದ್ದ ದಲಿತ ಶೋಷಿತ ಸಮಾಜ ಸಂಘರ್ಷ ಸಮಿತಿ ರಾಜ್ಯ ಉಪಾಧ್ಯಕ್ಷ ಮಾಡನಾಯಕನಹಳ್ಳಿ ರಂಗಪ್ಪ ಮಾತನಾಡುತ್ತ ಗ್ರಾಮೀಣ ಪ್ರದೇಶಗಳಿಂದ ಕೂಲಿ ಕೆಲಸಕ್ಕಾಗಿ ಬರುವ ಬಡವರು ನಗರದ 35 ಕೊಳಗೇರಿಗಳಲ್ಲಿಯೂ ವಾಸಿಸುತ್ತಿದ್ದಾರೆ.

        ಮಾದಿಗ, ಹೊಲೆಯ, ಭೋವಿ, ಲಂಬಾಣಿ, ನಾಯಕ, ಲಿಂಗಾಯಿತ, ಕುರುಬ, ಕುಂಚಿಟಿಗ, ಅಗಸ, ಗೊಲ್ಲ, ಕೊರಚ, ಕೊರಮ, ನಾಹಿಂದ ಹೀಗೆ ಇನ್ನು ಹತ್ತು ಹಲವಾರು ಬಡವರು ನಿಕೃಷ್ಟವಾಗಿ ಜೀವಿಸುತ್ತಿದ್ದಾರೆ. ಮೆದೇಹಳ್ಳಿ ಸಮೀಪವಿರುವ ಜಮೀನೊಂದರಲ್ಲಿ ನೂರಾರು ಜನ ಸುಡುಗಾಡು ಸಿದ್ದರು, ಮೊಂಡರು, ಬಂಡರು, ಜಂಗಾಲರು ಟೆಂಟ್‍ಗಳನ್ನು ಕಟ್ಟಿಕೊಂಡು ಜೀವಿಸುತ್ತಿದ್ದಾರೆ. ಇಂತಹ ಬಡವರಿಗೆ ಸರ್ಕಾರ ಎಲ್ಲಿಯಾದರೂ ಜಮೀನುಗಳನ್ನು ಖರೀಧಿಸಿ ನಿವೇಶನಗಳನ್ನಾಗಿ ಪರಿವರ್ತಿಸಿ ಮನೆಗಳನ್ನು ಕಟ್ಟಿಸಿಕೊಡಬೇಕೆಂದು ಒತ್ತಾಯಿಸಿದರು.

       ಹಳ್ಳಿಗಾಡಿನಿಂದ ನಗರಕ್ಕೆ ಬದುಕು ಕಟ್ಟಿಕೊಳ್ಳಲು ಬರುವ ಅನೇಕ ಬಡವರು ರಸ್ತೆಬದಿಯಲ್ಲಿ ಹೂವು, ಹಣ್ಣು,ತರಕಾರಿ ವ್ಯಾಪಾರ ಮಾಡಿಕೊಂಡು ದಿನನಿತ್ಯದ ಬದುಕು ಸವೆಸುತ್ತಿದ್ದಾರೆ. ವಾಸಿಸಲು ಸ್ವಂತ ಸೂರಿಲ್ಲ. ಮನೆ ಕಟ್ಟಿಕೊಳ್ಳಲು ನಿವೇಶನಗಳಿಲ್ಲ. ದುಡಿದ ಅಲ್ಪಸ್ವಲ್ಪ ಹಣದಲ್ಲಿ ಮನೆ ಬಾಡಿಗೆ ಕಟ್ಟಿಕೊಂಡು ಜೀವಿಸುವುದು ದುಸ್ತರವಾಗಿದೆ. ಮಕ್ಕಳಿಗೆ ಶಿಕ್ಷಣ ಕೊಡಿಸುವುದು ಅಸಾಧ್ಯದ ಮಾತಾಗಿದೆ.35 ಕೊಳಚೆ ಪ್ರದೇಶಗಳ ಪೈಕಿ 25 ಪ್ರದೇಶಗಳಲ್ಲಿ ಸರ್ಕಾರಿ ಶಾಲೆಗಳಿಲ್ಲ. ಇದರಿಂದ ಬಡ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಹಾಗಾಗಿ ಸರ್ಕಾರ ಕೂಡಲೆ ನಿವೇಶನಗಳನ್ನು ನೀಡಬೇಕು ಎಂದು ಕೋರಿದರು.

         ಜಿಲ್ಲಾಧ್ಯಕ್ಷ ಜಿ.ಆರ್.ಪ್ರಭಾಕರ್, ಶಾಂತಕುಮಾರ್, ಹರೀಶ್, ರಾಘವೇಂದ್ರ, ದುರುಗೇಶ್, ಸೋಮಣ್ಣ, ಪರಶುರಾಮ್, ಶಿವಕುಮಾರ್, ಕಿರಣ್‍ಕೋಟಿ, ಸೈಯದ್ ಇಮ್ತಿಯಾಜ್, ವೆಂಕಟೇಶ್, ಶ್ರೀನಿವಾಸ್, ತಿಪ್ಪೇಸ್ವಾಮಿ, ಪರಮೇಶ್ ಇನ್ನು ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap