ಚಳ್ಳಕೆರೆ
ತಾಲ್ಲೂಕಿನ ಪರಶುರಾಮಪುರ ಹೋಬಳಿಯ ಚನ್ನಮ್ಮನಾಗತಿಹಳ್ಳಿ ಗ್ರಾಮದ ಶ್ರೀಪಾತಲಿಂಗೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವನ್ನು ಮಾರ್ಚ್ 9 ಮತ್ತು 10 ಎರಡು ದಿನಗಳ ಕಾಲ ಸಂಭ್ರಮ, ಸಡಗರಗಳಿಂದ ಆಚರಿಸಲು ತೀರ್ಮಾನಿಸಲಾಗಿದೆ ಎಂದು ದೇವಸ್ಥಾನ ಹಿರಿಯ ಸಲಹೆಗಾರ ಬಸವರಾಜಪ್ಪ ತಿಳಿಸಿದರು.
ಅವರು, ಭಾನುವಾರ ಇಲ್ಲಿನ ಪ್ರವಾಸಿ ಮಂದಿರದಲ್ಲಿ ಜಾತ್ರೆಯ ಯಶಸ್ಸಿ ಹಿನ್ನೆಲೆಯಲ್ಲಿ ನಡೆದ ಪೂರ್ವಬಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಕಳೆದ ಹಲವಾರು ವರ್ಷಗಳಿಂದ ಮಡಿವಾಳ ಸಮುದಾಯದ ಗೋರವಿನಕೆರೆ ವಂಶಸ್ಥರು ಕಾರ್ಯಕ್ರಮ ನೇತೃತ್ವವನ್ನು ವಹಿಸಿ ಸಂಪ್ರದಾಯದಂತೆ ಸ್ವಾಮಿಯ ಜಾತ್ರೆಯನ್ನು ಆಚರಿಸುತ್ತಿದ್ದು, ಈ ಬಾರಿಯೂ ಸಹ ತಾಲ್ಲೂಕು ಹಾಗೂ ವಿವಿಧ ಜಿಲ್ಲೆಯ ಸಮುದಾಯದ ಎಲ್ಲಾ ಭಕ್ತರು ಜಾತ್ರೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದಲ್ಲದೆ. ಈ ಬಗ್ಗೆ ಸಭೆಗೆ ಹಾಜರಾದ ಎಲ್ಲಾ ಮುಖಂಡರು ಎಲ್ಲರಿಗೂ ಮಾಹಿತಿ ನೀಡುವಂತೆ ಮನವಿ ಮಾಡಿದರು.
ಮಡಿವಾಳ ಯುವ ಘಟಕದ ತಾಲ್ಲೂಕು ಅಧ್ಯಕ್ಷ ಕರೀಕೆರೆ ನಾಗರಾಜು, ಸಮುದಾಯದ ಆರಾಧ್ಯದೈವವಾದ ಶ್ರೀಪಾತಲಿಂಗೇಶ್ವರಸ್ವಾಮಿ ಜಾತ್ರೆ ಪ್ರತಿವರ್ಷದಂತೆ ಈ ವರ್ಷ ಹೆಚ್ಚು ವಿಜೃಂಭಣೆಯಿಂದ ನಡೆಯಬೇಕಿದೆ. ಈ ಹಿನ್ನೆಲೆಯಲ್ಲಿ ಪೂರ್ವಭಾವಿ ಸಭೆಯನ್ನು ಮುಂಚಿತವಾಗಿಯೇ ನಡೆಸಿ ಎಲ್ಲರಿಗೂ ಮಾಹಿತಿಯನ್ನು ನೀಡಲಾಗುವುದು.
ವಿಶೇಷವಾಗಿ ಮಡಿವಾಳ ಸಮುದಾಯದ ಗೋರವಿನಕೆರೆ ವಂಶಸ್ಥರು ಈ ಜಾತ್ರೆ ಯಶಸ್ಸಿಗೆ ಹೆಚ್ಚು ಗಮನ ನೀಡಬೇಕು. ಜಾತ್ರಾ ವೇಳೆಯಲ್ಲಿ ಎಂದಿನಂತೆ ಸ್ವಾಮೀಯ ಪೂಜಾ ವಿಧಿವಿಧಾನಗಳನ್ನು ನಡೆಸಲಾಗುವುದು. ಮಾರ್ಚ್9 ಶನಿವಾರ ಸ್ವಾಮೀಯನ್ನು ಚನ್ನಮ್ಮನಾಗತಿಹಳ್ಳಿಯಿಂದ ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ಕರೆತರಲಾಗುವುದು. 10ರ ಭಾನುವಾರ ಬೆಳಗ್ಗೆ 5.30ಕ್ಕೆ ಸ್ವಾಮಿಗೆ ರುದ್ರಾಭಿಷೇಕ, ಪುಪ್ಪಾಲಂಕಾರ, ಎಲೆಪೂಜೆ, ಹೋಮ ಕಾರ್ಯಕ್ರಮ ನಡೆಯಲಿದೆ ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಪಾತಲಿಂಗಪ್ಪ, ಮಲ್ಲಣ್ಣ, ಹನುಮಂತಪ್ಪ, ಬಿ.ನಾಗರಾಜು, ನರೇಂದ್ರಕುಮಾರ್, ಆರ್.ಚಂದ್ರಣ್ಣ, ರಾಜಣ್ಣ, ಮಂಜುನಾಥ, ನಾಗರಾಜು ಮುಂತಾದವರು ಉಪಸ್ಥಿತರಿದ್ದರು.