ಬಳ್ಳಾರಿ
ಜಿಲ್ಲೆಯಲ್ಲಿರುವ 23 ಪದವಿ ಕಾಲೇಜುಗಳಲ್ಲಿ ಹಾಗೂ ಪದವಿ ಪೂರ್ವ ಕಾಲೇಜುಗಳಲ್ಲಿ ಹೊಸ ಮತದಾರರ ಕ್ಲಬ್(ಎಲೆಕ್ಟ್ರೋಲ್ ಲಿಟ್ರಸಿ ಕ್ಲಬ್) ಆರಂಭಿಸಲಾಗುವುದು ಮತ್ತು ಹೊಸದಾಗಿ ಮತದಾರರ ಚೀಟಿ ಪಡೆದ ವಿದ್ಯಾರ್ಥಿಗಳು ಇದರಲ್ಲಿ ನೊಂದಣಿ ಮಾಡಿಕೊಳ್ಳುವಂತೆ ಹಾಗೂ ಮತದಾನದ ಮಹತ್ವ ಸಾರುವಂತೆ ನೋಡಿಕೊಳ್ಳಲಾಗುವುದು ಎಂದು ಸ್ವೀಪ್ ಸಮಿತಿ ಮುಖ್ಯಸ್ಥರು ಆಗಿರುವ ಜಿಪಂ ಸಿಇಒ ಡಾ.ಕೆ.ವಿ.ರಾಜೇಂದ್ರ ಅವರು ಹೇಳಿದರು.
ಸ್ವೀಪ್ ಸಮಿತಿ ವತಿಯಿಂದ ಬಳ್ಳಾರಿ ಲೋಕಸಭಾ ಉಪಚುನಾವಣೆಯಲ್ಲಿ ಮತದಾನದ ಶೇಕಡಾವಾರು ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಗುರುವಾರ ಏರ್ಪಡಿಸಿದ್ದ ಸ್ವೀಪ್ ಜಾಗೃತಿ ಜಾಥಾ ಚಾಲನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಮ್ಮ ಯುವಕರು ಪ್ರಜಾಪ್ರಭುತ್ವದ ಏಜೆಂಟ್‍ಗಳು ಅಂತ ಬಣ್ಣಿಸಿದ ಜಿಪಂ ಸಿಇಒ ರಾಜೇಂದ್ರ ಅವರು ಪ್ರಜಾಪ್ರಭುತ್ವ ಮೌಲ್ಯಗಳನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಹಾಗೂ ಮತದಾನದ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬ ಯುವಕರು ಕನಿಷ್ಠ 50 ಜನರಿಗಾದರೂ ಬಳ್ಳಾರಿ ಲೋಕಸಭಾ ಉಪಚುನಾವಣೆ, ಮತದಾನದ ಮಹತ್ವ, ಮತಯಂತ್ರಗಳ ಕಾರ್ಯ, ಯಾವುದೇ ರೀತಿಯ ಆಮಿಷಕ್ಕೆ ಒಳಗಾಗದೇ ಯೋಗ್ಯ ಅಭ್ಯರ್ಥಿಗೆ ಮತಚಲಾಯಿಸುವ ಕುರಿತು ತಿಳಿಹೇಳುವ ಕೆಲಸ ಮಾಡಬೇಕು ಎಂದರು.
ಜಿಲ್ಲಾ ಚುನಾವಣಾಧಿಕಾರಿಗಳಾಗಿರುವ ಜಿಲ್ಲಾಧಿಕಾರಿ ಡಾ.ವಿ.ರಾಮ್ ಪ್ರಸಾತ್ ಮನೋಹರ್ ಅವರು ಜಾಗೃತಿ ಜಾಥಾಗೆ ಚಾಲನೆ ನೀಡಿದರು. ಸ್ವೀಪ್ ಸಮಿತಿ ರೂಪಿಸಿದ ಮತದಾನದ ಮಹತ್ವ ಸಾರುವ ಕರಪತ್ರಗಳನ್ನು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಿದರು.
ಮತದಾನ ಮಾರಾಟದ ವಸ್ತುವಲ್ಲ, ಯೋಗ್ಯ ಅಭ್ಯರ್ಥಿಗೆ ಮತದಾನ ಮಾಡಿ ಬಲಿಷ್ಠ ಭಾರತ ನಿರ್ಮಾಣ ಮಾಡಿ ಎಂಬುದು ಸೇರಿದಂತೆ ವಿವಿಧ ರೀತಿಯ ಮತದಾನದ ಮಹತ್ವ ಹೊತ್ತಿದ್ದ ಸಂದೇಶಗಳು ಗಮನಸೆಳೆದವು.
ಈ ಜಾಥಾವು ಜಿಲ್ಲಾಧಿಕಾರಿ ಕಚೇರಿಯಿಂದ ಆರಂಭವಾಗಿ ಮೋತಿ ವೃತ್ತದ ಮುಖಾಂತರ ದೇವಿನಗರ ರಸ್ತೆ ಮಾರ್ಗವಾಗಿ ಎಸ್ಪಿ ವೃತ್ತದ ಮುಖಾಂತರ ಪಾರ್ವತಿನಗರ ಮುಖ್ಯರಸ್ತೆ, ಕನಕದುರ್ಗಮ್ಮ ರಸ್ತೆ ಮಾರ್ಗವಾಗಿ ಗಡಗಿ ಚನ್ನಪ್ಪವೃತ್ತ, ಬೆಂಗಳೂರು ರಸ್ತೆ,ಕುಂಬಾರ ಓಣಿ ರಸ್ತೆ,ಗಂಗಪ್ಪ ಝೀನ್ ರಸ್ತೆ ಮಾರ್ಗವಾಗಿ ಸಂಗಮ ವೃತ್ತದ ಮಾರ್ಗವಾಗಿ ಸರಳಾದೇವಿ ಕಾಲೇಜಿಗೆ ತಲುಪಿತು.
ಈ ಸಂದರ್ಭದಲ್ಲಿ ಪ್ರೊಬೆಷನರಿ ಐಎಎಸ್ ಅಧಿಕಾರಿ ನಂದಿನಿ, ಅಪರ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ, ಜಿಪಂ ಯೋಜನಾ ನಿರ್ದೇಶಕ ಚಂದ್ರಶೇಖರ ಗುಡಿ, ತಾಪಂ ಇಒ ಜಾನಕಿರಾಮ್, ಸರಳಾದೇವಿ ಕಾಲೇಜಿನ ಪ್ರಾಂಶುಪಾಲ ಅಬ್ದುಲ್ ಮುತಾಲೀಬ್ ಸೇರಿದಂತೆ ಕಾಲೇಜು ವಿದ್ಯಾರ್ಥಿಗಳು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ