ಬೆಂಗಳೂರು
ರಾಜ್ಯದಲ್ಲಿ ಪ್ರಕೃತಿ ವಿಕೋಪ ಕುರಿತು ಮಾಹಿತಿ ನೀಡುವ ಆಧುನಿಕ ವ್ಯವಸ್ಥೆ ರಾಜ್ಯದಲ್ಲಿ ಜಾರಿಗೆ ಬರಲಿದ್ದು, ಮೊಬೈಲ್ ಟವರ್‍ಗಳ ಮುಖಾಂತರ ಜನ ಸಾಮಾನ್ಯರಿಗೂ ವಿಪತ್ತಿನ ಬಗ್ಗೆ ಮುನ್ನೆಚ್ಚರಿಕೆ ನೀಡುವ ತಂತ್ರಜ್ಞಾನ ಅಳವಡಿಸಿಕೊಳ್ಳಲು ರಾಜ್ಯ ಸರ್ಕಾರ ಮುಂದಾಗಿದೆ.
ಯಾವ ಭಾಗದಲ್ಲಿ ವಿಪತ್ತು ಸಂಭವಿಸುತ್ತದೆ ಎನ್ನುವ ಮಾಹಿತಿಯನ್ನು ಪಡೆದು ಅದನ್ನು ಮೊಬೈಲ್ ಟವರ್‍ಗಳ ಮೂಲಕ ಎಲ್ಲಾ ಮೊಬೈಲ್ ಬಳಕೆದಾರರಿಗೂ ಒದಗಿಸುವ [ಲೊಕೇಶನ್ ಬೇಸ್ಡ್ ಇನ್ಪರ್ಮೆಷನ್] ಸೌಲಭ್ಯ ಒದಗಿಸಲು ಕಾರ್ಯ ಪ್ರವೃತ್ತವಾಗಿದೆ.
ಇಂತಹ ಮಾಹಿತಿ ಒದಗಿಸಲು ದೇಶದ 11 ರಾಜ್ಯಗಳನ್ನು ಕೇಂದ್ರ ಸರ್ಕಾರ ಆಯ್ಕೆ ಮಾಡಿದ್ದು, ಅದರಲ್ಲಿ ಕರ್ನಾಟಕ ಕೂಡ ಸೇರಿದೆ. ನಿರ್ದಿಷ್ಟ ಪ್ರದೇಶಗಳಲ್ಲಿ ವಿಪತ್ತು ಸಂಭವಿಸುವ ಮಾಹಿತಿ ದೊರೆಯುತ್ತಿದ್ದಂತೆ ಅದನ್ನು ಎಲ್ಲಾ ಜನ ಸಾಮಾನ್ಯರಿಗೂ ಸಾಮೂಹಿಕವಾಗಿ ಏಕ ಕಾಲಕ್ಕೆ ತಲುಪಿಸಿದರೆ ಅದರಿಂದ ತಪ್ಪಿಸಿಕೊಳ್ಳಲು ಸಹಕಾರಿಯಾಗಲಿದೆ. ಪ್ರಕೃತಿ ವಿಕೋಪವನ್ನು ತಪ್ಪಿಸಲಾಗದು. ಆದರೆ ಅದರಿಂದ ಜೀವ ಮತ್ತು ಆಸ್ತಿ ಪಾಸ್ತಿ ಹಾನಿಯನ್ನು ಕಡಿಮೆ ಮಾಡಬಹುದಾಗಿದೆ.
ಭಾರೀ ಮಳೆ, ಪ್ರವಾಹ, ಸುನಾಮಿ, ಚಂಡ ಮಾರುತ ಮತ್ತಿತರ ಮಾಹಿತಿಯನ್ನು ಏಕ ಕಾಲಕ್ಕೆ ಜನ ಸಾಮಾನ್ಯರಿಗೆ ಒದಗಿಸಬಹುದಾಗಿದೆ ಎನ್ನುವುದು ಈ ಯೋಜನೆಯ ಪ್ರಮುಖ ದ್ಯೇಯವಾಗಿದೆ.
ಈ ಮಧ್ಯೆ ರಾಜ್ಯದಲ್ಲಿ ಹಲವೆಡೆ ಮಳೆ, ಸಿಡಿಲು, ಮಳೆ, ನೀರಿನ ಸೆಳೆತ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಪ್ರವಾಸ ಕೈಗೊಳ್ಳುವ ಮುನ್ನ ಎಚ್ಚರಿಕೆ ವಹಿಸುವಂತೆಯೂ ರಾಜ್ಯ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.
ರಾಜ್ಯದಲ್ಲಿ ಮುಂಗಾರು ಮಳೆ ಕೊನೆಗೊಳ್ಳುತ್ತಿದ್ದು, ಹಿಂಗಾರು ಆರಂಭವಾಗುವ ಹಂತದಲ್ಲಿದೆ. ಇಂತಹ ಸಂದರ್ಭದಲ್ಲಿ ಸಿಡಿಲು ಸಹ ಹೆಚ್ಚಾಗಲಿದೆ. ಹೀಗಾಗಿ ಪ್ರವಾಸಿಗರು, ರೈತರು, ದನಗಾಹಿಗಳು, ಮೀನುಗಾರರು ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದೆ.
ಇಂತಹ ಜನ ಸಮುದಾಯಗಳ ಹಿತ ದೃಷ್ಟಿಯಿಂದ ಹವಾಮಾನ ಇಲಾಖೆ “ ಸಿಡಿಲು “ ಎಂಬ ಆ್ಯಪ್ ಸಿದ್ಧಪಡಿಸಿದ್ದು, ಇದು ಪ್ಲೇ ಸ್ಟೋರ್‍ನಲ್ಲಿ ಲಭ್ಯವಿದೆ. ಇದನ್ನು ಡೌನ್ ಲೋಡ್ ಮಾಡಿಕೊಂಡರೆ ಸಿಡಿಲಿನಿಂದ ರಕ್ಷಣೆ ಪಡೆಯುವ ವಿಧಾನದ ಬಗ್ಗೆ ಮಾಹಿತಿ ಲಭ್ಯವಾಗಲಿದೆ.
ಪ್ರವಾಸಕ್ಕೆ ತೆರಳುವವರಿಗೂ ಸಹ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ವ್ಯವಸ್ಥೆಯನ್ನು ಕಲ್ಪಿಸಲಿದೆ. ಅದರಂತೆ ಯಾವ ಭಾಗಕ್ಕೆ ಪ್ರವಾಸ ಕೈಗೊಳ್ಳಲಾಗುತ್ತಿದೆಯೋ ಆ ಭಾಗದ ಮಾಹಿತಿ ಪಡೆಯಬಹುದಾಗಿದೆ ಎನ್ನುತ್ತಾರೆ ರಾಜ್ಯ ಪ್ರಕೃತಿ ವಿಕೋಪ ಪರಿಹಾರ ಕೋಶದ ನಿರ್ದೇಶಕ ಶ್ರೀನಿವಾಸ ರೆಡ್ಡಿ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ