ಚಿತ್ರದುರ್ಗ:
ಆದಿಕವಿ ಮಹರ್ಷಿ ವಾಲ್ಮೀಕಿರವರ ತತ್ವ ಸಿದ್ದಾಂತಗಳನ್ನು ಪ್ರತಿಯೊಬ್ಬರು ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಿ ಎಂದು ಸಂಸದ ಬಿ.ಎನ್.ಚಂದ್ರಪ್ಪ ಕರೆ ನೀಡಿದರು.
ಜಿಲ್ಲಾಡಳಿತ, ಜಿ.ಪಂ, ನಗರಸಭೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಿಂದ ಚಿತ್ರದುರ್ಗದ ಹಳೆ ಮಾದ್ಯಮಿಕ ಶಾಲಾ ಆವರಣದಲ್ಲಿ ಬುಧವಾರ ನಡೆದ ಮಹರ್ಷಿ ವಾಲ್ಮೀಕಿ ಜಯಂತಿ ಉದ್ಘಾಟಿಸಿ ಮಾತನಾಡಿದರು.
ಯಾವುದೇ ಕಾನ್ವೆಂಟ್, ಕಾಲೇಜುಗಳು ಇಲ್ಲದ ಕಾಲದಲ್ಲಿ ವಾಲ್ಮೀಕಿ ರಾಮಾಯಣವನ್ನು ಬರೆದಿದ್ದಾರೆ.ಅವರು ಮಾನವರಾಗಿರಲಿಲ್ಲ. ದೈವಸ್ವರೂಪಿಯಾಗಿದ್ದರು. ಏಕೆಂದರೆ ಅವರಲ್ಲಿ ಅಷ್ಟೊಂದು ಜ್ಞಾನವಿತ್ತು ಎಂಬುದನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕು ಎಂದರು.
ಶ್ರೀರಾಮಚಂದ್ರ, ಲಕ್ಷ್ಮಣ, ಸೀತಾಮಾತೆ, ಆಂಜನೇಯ ಇವರುಗಳನ್ನೆಲ್ಲಾ ರಾಮಾಯಣದಲ್ಲಿ ವಾಲ್ಮೀಕಿ ಚಿತ್ರಿಸಿದ್ದಾರೆ. 21 ನೇ ಶತಮಾನದಲ್ಲಿ ಆಸ್ತಿ-ಅಡವು ಮಾಡಲು ಎಲ್ಲರೂ ಹೊರಟಿದ್ದಾರೆ. ಆದಿಕವಿ ವಾಲ್ಮೀಕಿರವರದು ಸತ್ಯ, ತತ್ವ, ಸಿದ್ದಾಂತ, ಆದರ್ಶಗಳೇ ಆಸ್ತಿಯಾಗಿತ್ತು. ಹಾಗಾಗಿ ಎಲ್ಲರೂ ಅವರ ಹಾದಿಯಲ್ಲಿ ಸಾಗುವ ಮೂಲಕ ವರ್ಷಕ್ಕೊಮ್ಮೆಯಾದರೂ ವಾಲ್ಮೀಕಿ, ಬಸವಣ್ಣ, ಕನಕದಾಸ ಇನ್ನು ಅನೇಕ ಮಹನೀಯರುಗಳನ್ನು ನೆನಪು ಮಾಡಿಕೊಳ್ಳಬೇಕಾಗಿದೆ ಎಂದು ತಿಳಿಸಿದರು.
ವಾಲ್ಮೀಕಿ ಸಮುದಾಯ ಸಮಾಜಕ್ಕೆ ದೊಡ್ಡ ದೊಡ್ಡ ನಾಯಕರುಗಳನ್ನು ನೀಡಿದೆ. ದೇಶದ ಅಭಿವೃದ್ದಿಯಲ್ಲಿ ಈ ಸಮುದಾಯದ ಪಾತ್ರವನ್ನು ಮರೆಯಲಾಗದು ಎಂದರು.
ಜಯಂತಿಯ ಅಧ್ಯಕ್ಷತೆ ವಹಿಸಿದ್ದ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಮಾತನಾಡಿ ನಾಯಕರಿಗೆ ಇಂದು ಏನಾದರೂ ಅಲ್ಪಸ್ವಲ್ಪ ಸರ್ಕಾರದಿಂದ ಸೌಲಭ್ಯಗಳು ಸಿಗುತ್ತಿವೆ ಎನ್ನುವುದಾದರೆ ಅದಕ್ಕೆ ಎಲ್.ಜಿ.ಹಾವನೂರು ಕಾರಣ. ಅದರಂತೆ ಮಾಜಿ ಮುಖ್ಯಮಂತ್ರಿ ದಿಗಂಗತ ಡಿ.ದೇವರಾಜ ಅರಸುರವರು ಈ ಸಮುದಾಯಕ್ಕೆ ಸಾಮಾಜಿಕ ನ್ಯಾಯ ನೀಡಿದ್ದಾರೆ. ಕಳೆದ ಎಪ್ಪತ್ತು ವರ್ಷಗಳ ಹಿಂದೆಯೇ ಭೀಮಪ್ಪನಾಯಕರು ಚಿತ್ರದುರ್ಗದಲ್ಲಿ ಅತ್ಯುತ್ತಮವಾದ ರಸ್ತೆಗಳನ್ನು ನಿರ್ಮಿಸಿದ್ದಾರೆ. ಶೇ.7.5 ರಷ್ಟು ಮೀಸಲಾತಿ ಸೇರಿದಂತೆ ಅನೇಕ ಸವಲತ್ತುಗಳಿಗಾಗಿ ನಾಯಕ ಸಮಾಜ ಹೋರಾಟ ನಡೆಸುತ್ತಿದೆ. ಅದೇ ರೀತಿ ನಾನಾ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಸರ್ಕಾರ ಗಮನ ಕೊಡಬೇಕು ಎಂದು ಒತ್ತಾಯಿಸಿದರು.
ಜಿ.ಪಂ.ಅಧ್ಯಕ್ಷೆ ಸೌಭಾಗ್ಯ ಬಸವರಾಜನ್ ಮಾತನಾಡುತ್ತ ಆದಿಕವಿ ಮಹರ್ಷಿ ವಾಲ್ಮೀಕಿರವರ ಆದರ್ಶ, ತತ್ವ, ಸಿದ್ದಾಂತಗಳು ಕೇವಲ ನಾಯಕ ಜನಾಂಗಕ್ಕೆ ಮಾತ್ರ ಮೀಸಲಾಗಿರಬಾರದು. ಇಡಿ ಮನುಕುಲವೇ ಅವರು ಹಾಕಿಕೊಟ್ಟ ದಾರಿಯಲ್ಲಿ ನಡೆಯಬೇಕಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿರುವ ನಾಯಕ ಸಮಾಜ ಬೇರೆ ಜನಾಂಗದವರ ಪ್ರೀತಿ ವಿಶ್ವಾಸ ಗಳಿಸಿ ಸೌಹಾರ್ಧಯುತವಾದ ಜೀವನ ನಡೆಸಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಇನ್ನು ಮೂಢನಂಬಿಕೆ, ಸಂಪ್ರದಾಯಗಳನ್ನು ಆಚರಿಸಲಾಗುತ್ತಿದೆ. ಕಂದಾಚಾರ ನಿವಾರಣೆಯಾಗಬೇಕಾದರೆ ಕಡ್ಡಾಯವಾಗಿ ಮಕ್ಕಳಿಗೆ ಶಿಕ್ಷಣ ಕೊಡಿಸಿ ಎಂದು ನಾಯಕ ಜನಾಂಗವನ್ನು ಜಾಗೃತಿಗೊಳಿಸಿದರು.
ನಿಮ್ಮ ಸಮಾಜದ ಸ್ಥಿತಿಗತಿ ಸುಧಾರಿಸಿ ಸಮಸ್ಯೆಗಳು ನಿವಾರಣೆಯಾಗಬೇಕಾದರೆ ಮೊದಲು ನೀವುಗಳು ಸಂಘಟಿತರಾಗಿ. ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ರಾಜಕೀಯವಾಗಿ ಸಮಾನತೆ ಸಿಗಬೇಕಾದರೆ ಹೋರಾಟ ಅನಿವಾರ್ಯ ಎಂದು ಹೇಳಿದರು.
ಸರ್ಕಾರಿ ಕಲಾ ಕಾಲೇಜು ಸ್ನಾತಕೋತ್ತರ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ಸಿ.ಬಿ.ಪ್ರೇಮಪಲ್ಲವಿ ಉಪನ್ಯಾಸ ನೀಡಿ ಮಹಿರ್ಷಿ ವಾಲ್ಮೀಕಿ ಬರೆದಿರುವ ರಾಮಾಯಣ ಏಷ್ಯಾ ಖಂಡದಲ್ಲೇ ಅಲ್ಲ ಬೇರೆ ದೇಶಗಳಲ್ಲಿಯೂ ಅತ್ಯಂತ ಪ್ರಭಾವ ಬೀರಿದೆ. ವಾಲ್ಮೀಕಿ ಕವಿಯಾಗಿದ್ದೆ ವಿಸ್ಮಯ. ಬಹುದೊಡ್ಡ ಸಮಾಜ ಸುಧಾರಕರಾಗಿದ್ದ ವಾಲ್ಮೀಕಿರವರ ರಾಮಾಯಣದಲ್ಲಿ 24 ಸಾವಿರ ಶ್ಲೋಕಗಳಿವೆ. ಕ್ರೌರ್ಯ ಸಮಾಜಕ್ಕೆ ಮಾರಕವೆಂದು ಹೇಳಿದ್ದ ವಾಲ್ಮೀಕಿರವರು ಶಿಕ್ಷಣ ಪ್ರೇಮಿಯಾಗಿದ್ದರು. ಸಹೋದರತ್ವ, ಭ್ರಾತೃತ್ವ ಅವರ ಆದರ್ಶದಲ್ಲಿದೆ. ಜಾತಿ ಮೀರಿ ವಿಶ್ವಕ್ಕೆ ಸಂದೇಶ ಸಾರಿದ ವಾಲ್ಮೀಕಿರವರ ಸಿದ್ದಾಂತಗಳನ್ನು ಎಲ್ಲರೂ ಪಾಲಿಸೋಣ ಎಂದರು.
ವಿಜಯನಗರ ಸಾಮ್ರಾಜ್ಯ ಅಸ್ತಿತ್ವಕ್ಕೆ ಬರಲು ಬೇಡರು ಕಾರಣ. ಸಾಂಸ್ಕøತಿಕ, ಸಾಮಾಜಿಕ, ಧಾರ್ಮಿಕ ಅಸ್ಮಿತೆಯನ್ನು ಈಗಲೂ ನಾಯಕ ಜನಾಂಗ ಉಳಿಸಿಕೊಂಡಿದೆ. ಬಾಲ್ಯವಿವಾಹ ತಡೆಗಟ್ಟಿ ಹೆಣ್ಣಿಗೆ ಶಿಕ್ಷಣ ನೀಡುವುದು ಮುಖ್ಯವಾಗಬೇಕು ಎಂದು ನಾಯಕ ಸಮಾಜಕ್ಕೆ ಕಿವಿಮಾತು ಹೇಳಿದರು.
ಜಿಲ್ಲಾ ನಾಯಕ ಸಮಾಜದ ಅಧ್ಯಕ್ಷ ಹೆಚ್.ಜೆ.ಕೃಷ್ಣಮೂರ್ತಿ, ತಾಲೂಕು ನಾಯಕ ಸಮಾಜದ ಅಧ್ಯಕ್ಷ ಬಿ.ಕಾಂತರಾಜ್, ತಾ.ಪಂ.ಅಧ್ಯಕ್ಷ ಡಿ.ಬಿ.ಲಿಂಗರಾಜ್, ಸದಸ್ಯೆ ಚಂದ್ರಕಲ, ನಿರ್ಮಲ, ನಗರಸಭೆ ಸದಸ್ಯ ದೀಪು, ಜಿಲ್ಲಾಧಿಕಾರಿ ಆರ್.ಗಿರೀಶ್, ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಎನ್.ರವೀಂದ್ರ, ಜಿಲ್ಲಾ ರಕ್ಷಣಾಧಿಕಾರಿ ಡಾ.ಅರುಣ್ ಕೆ., ಉಪವಿಭಾಗಾಧಿಕಾರಿ ವಿಜಯಕುಮಾರ್, ತಹಶೀಲ್ದಾರ್ ಮಲ್ಲಿಕಾರ್ಜುನ್, ನಗರಸಭೆ ಮಾಜಿ ಸದಸ್ಯರುಗಳಾದ ತಿಪ್ಪೇಸ್ವಾಮಿ, ಸಿ.ಟಿ.ರಾಜೇಶ್, ಚಿತ್ರದುರ್ಗ ನಾಯಕ ಸಮಾಜದ ಕಾರ್ಯದರ್ಶಿ ಡಿ.ಗೋಪಾಲಸ್ವಾಮಿ ನಾಯಕ, ಪ್ರೊ.ಗುಡದೇಶ್ವರಪ್ಪ, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಜೆ.ರಾಜು, ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಓ.ಪರಮೇಶ್ವರಪ್ಪ ವೇದಿಕೆಯಲ್ಲಿದ್ದರು.
ನಾಯಕ ಸಮಾಜದ ನಿವೃತ್ತ ಅಬಕಾರಿ ಡೆಪ್ಯುಟಿ ಕಮೀಷನರ್ ಜಯಣ್ಣ, ಸರ್ಕಾರಿ ಅಭಿಯೋಜಕ ಜೈರಾಂ, ಹಿರಿಯ ರಂಗಕಲಾವಿದ ತಿಪ್ಪಾನಾಯಕ, ಡಾ.ಚಂದ್ರಶೇಖರರಾಜು, ಕಬಡ್ಡಿಪಟು ಚಿರಂಜೀವಿ, ಬೆಳಗಟ್ಟ ಕರಿಬಸವೇಶ್ವರಮಠದ ಮಹದೇವಮ್ಮ ಇವರುಗಳನ್ನು ಸನ್ಮಾನಿಸಲಾಯಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








